ಉತ್ತರ ಪ್ರದೇಶ: ದಲಿತ ಬಾಲಕನಿಗೆ ಥಳಿಸಿ ಮೂತ್ರ ಸೇವಿಸುವಂತೆ ಬಲವಂತಪಡಿಸಿದ ದುಷ್ಕರ್ಮಿಗಳು

ಸಾಂದರ್ಭಿಕ ಚಿತ್ರ.
ಲಕ್ನೊ: ದಲಿತ ಬಾಲಕನಿಗೆ ಥಳಿಸಿದ ಹಾಗೂ ಮೂತ್ರ, ಮಣ್ಣು ಸೇವಿಸುವಂತೆ ಬಲವಂತಪಡಿಸಿದ ಘಟನೆ ಉತ್ತರಪ್ರದೇಶದ ಜೌನ್ಪುರ ಜಿಲ್ಲೆಯ ಶೇಖ್ಪುರ ಖುಟಹಾನಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.
ಜೌನ್ಪುರದ ಪೊಲೀಸ್ ಅಧೀಕ್ಷಕ ಅಜಯ್ ಪಾಲ್ ಶರ್ಮಾ ಅವರು ಮಧ್ಯಪ್ರವೇಶಿಸಿದ ಬಳಿಕ ಶನಿವಾರ ಸಂಜೆ ಈ ಕುರಿತಂತೆ ಎಫ್ಐಆರ್ ದಾಖಲಿಸಲಾಗಿದೆ.
ತಾನು ಸುಜಾನ್ಗಂಜ್ ಪೊಲೀಸರನ್ನು ಗುರುವಾರ ಸಂಜೆ ಸಂಪರ್ಕಿಸಿದ್ದೆ. ಆದರೆ, ಅವರು ತನ್ನ ದೂರು ದಾಖಲಿಸಿಕೊಳ್ಳಲಿಲ್ಲ. ಆದುದರಿಂದ ತಾನು ಜೌನ್ಪುರ ಪೊಲೀಸ್ ಅಧೀಕ್ಷಕರನ್ನು ಭೇಟಿಯಾದೆ ಹಾಗೂ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದೆ ಎಂದು ಬಾಲಕನ ತಂದೆ ಹೇಳಿದ್ದಾರೆ.
ತನ್ನ ಪುತ್ರ ಆಮಿ ಪ್ರದೇಶದಿಂದ ಗುರುವಾರ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ ದುಷ್ಕರ್ಮಿಗಳು ಆತನನ್ನು ಸೆರೆ ಹಿಡಿದರು ಹಾಗೂ ಥಳಿಸಿದರು. ಅನಂತರ ಮೂತ್ರ ಹಾಗೂ ಮಣ್ಣು ಸೇವಿಸುವಂತೆ ಬಲವಂತಪಡಿಸಿದರು. ಆತನ ಹುಬ್ಬನ್ನು ಬೋಳಿಸಿದರು ಎಂದು ದಲಿತ ಬಾಲಕನ ತಂದೆ ತನ್ನ ದೂರಿನಲ್ಲಿ ಆರೋಪಿಸಿದ್ದಾರೆ.
ದಾಳಿಕೋರರು ಅಲ್ಲಿಂದಲೇ ತನಗೆ ಕರೆ ಮಾಡಿದರು ಹಾಗೂ ಈ ಘಟನೆಯನ್ನು ಪೊಲೀಸರಿಗೆ ತಿಳಿಸದಂತೆ ಬೆದರಿಕೆ ಒಡ್ಡಿದ ಬಳಿಕ ಪುತ್ರನನ್ನು ಕರೆದುಕೊಂಡು ಹೋಗಲು ಅವಕಾಶ ನೀಡಿದರು ಎಂದು ಅವರು ತಿಳಿಸಿದ್ದಾರೆ.
‘‘ದಲಿತ ಬಾಲಕನ ದೂರಿನ ಆಧಾರದಲ್ಲಿ ಆತನ ಗ್ರಾಮದ ಇಬ್ಬರು ವ್ಯಕ್ತಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳಾದ 323, 504, 506ರ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ’’ ಎಂದು ಬದ್ಲಾಪುರ ಸರ್ಕಲ್ ಆಫೀಸರ್ ಎ.ಕೆ. ಸಿಂಗ್ ತಿಳಿಸಿದ್ದಾರೆ.
ಈ ನಡುವೆ ಬಾಲಕನಿಗೆ ಥಳಿಸಿದ ವ್ಯಕ್ತಿಗಳು ಕೂಡ ಪೊಲೀಸರನ್ನು ಸಂಪರ್ಕಿಸಿದ್ದಾರೆ ಹಾಗೂ ಬಾಲಕ ತಮ್ಮ ಕುಟಂಬದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿದ್ದಾರೆ. ಅವರ ದೂರಿನ ಆಧಾರದಲ್ಲಿ ಪೊಲೀಸರು ಬಾಲಕನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.







