ಉತ್ತರಪ್ರದೇಶ: ದಲಿತ ಯುವಕನಿಗೆ ಥಳಿಸಿ ಶೂ ನೆಕ್ಕುವಂತೆ ಬಲವಂತ; ಆರೋಪಿಯ ಬಂಧನ

Photo: thewire.in
ಲಕ್ನೊ : ದಲಿತ ಯುವಕನೋರ್ವ ಇಲೆಕ್ಟ್ರಿಕ್ ವಯರಿಂಗ್ ನಲ್ಲಿ ದೋಷ ಪತ್ತೆ ಹಚ್ಚಿರುವುದರಿಂದ ಆಕ್ರೋಶಗೊಂಡ ವಿದ್ಯುತ್ ಇಲಾಖೆಯ ಗುತ್ತಿಗೆ ಕಾರ್ಮಿಕ ಆತನಿಗೆ ಥಳಿಸಿದ ಹಾಗೂ ಶೂ ನೆಕ್ಕಲು ಬಲವಂತಪಡಿಸಿದ ಘಟನೆ ಉತ್ತರಪ್ರದೇಶದ ಸೋನ್ಭದ್ರ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿ ಆರೋಪಿ ವಿದ್ಯುತ್ ಇಲಾಖೆಯ ಗುತ್ತಿಗೆ ಕಾರ್ಮಿಕ ತೇಜ್ಬಲಿ ಸಿಂಗ್ ಪಟೇಲ್ ನನ್ನು ಪೊಲೀಸರು ರವಿವಾರ ಬಂಧಿಸಿದ್ದಾರೆ. ಈ ಘಟನೆ ಗುರುವಾರ ನಡೆದಿದ್ದು, ಶನಿವಾರ ವೀಡಿಯೊ ವೈರಲ್ ಆಗಿತ್ತು.
ವೀಡಿಯೊದಲ್ಲಿ ವಿದ್ಯುತ್ ಇಲಾಖೆಯ ಗುತ್ತಿಗೆ ಕಾರ್ಮಿಕ ತೇಜ್ಬಲಿ ಸಿಂಗ್ ಪಟೇಲ್ 21 ವರ್ಷದ ದಲಿತ ಯುವಕ ರಾಜೇಂದ ಚಮ್ಮಾರನಿಗೆ ಅಮಾನವೀಯವಾಗಿ ಹಲ್ಲೆ ನಡೆಸುತ್ತಿರುವುದು, ನಿಂದಿಸುತ್ತಿರುವುದು ಹಾಗೂ ಗುಂಪಿನಲ್ಲಿ ಶೇರ್ ಮಾಡಲು ಈ ಘಟನೆಯ ವೀಡಿಯೊ ದಾಖಲಿಸುವಂತೆ ಇನ್ನೋರ್ವ ವ್ಯಕ್ತಿಗೆ ಸೂಚಿಸುತ್ತಿರುವುದು ದಾಖಲಾಗಿದೆ.
ಒಂದು ಸೆಕೆಂಡ್ ನ ವೀಡಿಯೊದಲ್ಲಿ ದಲಿತ ಯುವಕ ರಾಜೇಂದ್ರ ಚಮ್ಮಾರ ವಿದ್ಯುತ್ ಇಲಾಖೆಯ ಗುತ್ತಿಗೆ ಕಾರ್ಮಿಕ ತೇಜ್ಬಲಿ ಸಿಂಗ್ ಪಟೇಲ್ ಶೂಗಳನ್ನು ನೆಕ್ಕುತ್ತಿರುವುದು, ಕಿವಿಯನ್ನು ಹಿಡಿದು ಬಸ್ಕಿ ತೆಗೆಯುತ್ತಿರುವುದು ಹಾಗೂ ಕ್ಷಮೆ ಕೋರುತ್ತಿರುವುದು ಕಂಡು ಬಂದಿದೆ. ಘಟನೆಗೆ ಸಂಬಂಧಿಸಿ ರಾಜೇಂದ್ರ ಸಿಂಗ್ ಚಮ್ಮಾರ ಸೋನ್ಭದ್ರ ಜಿಲ್ಲೆಯಲ್ಲಿರುವ ಶಹಗಂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅನಂತರ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಬಳಿಕ ಆರೋಪಿ ತೇಜ್ಬಲಿ ಸಿಂಗ್ ಪಟೇಲ್ ನನ್ನು ಬಂಧಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಚಮ್ಮಾರ, ‘‘ನಾನು ನನ್ನ ಮಾವನ ಮನೆಗೆ ಹೋಗಿದ್ದೆ. ಅಲ್ಲಿನ ವಿದ್ಯುತ್ ವಯರ್ ಗಳಲ್ಲಿ ಕೆಲವು ಸಮಸ್ಯೆಗಳು ಇದ್ದುವು. ನಾನು ಅದನ್ನು ಪರಿಶೀಲಿಸಿದೆ. ಈ ಸಂದರ್ಭ ತೇಜ್ಬಲಿ ಸಿಂಗ್ ಪೇಲ್ ಅಲ್ಲಿಗೆ ಆಗಮಿಸಿದ ಹಾಗೂ ನನಗೆ ಬೆತ್ತದಿಂದ ಥಳಿಸಿದ. ಆತ ತನ್ನ ಶೂ ಮೇಲೆ ಉಗುಳಿ ಅದನ್ನು ನೆಕ್ಕುವಂತೆ ಬಲವಂತಪಡಿಸಿದ. ಎರಡು ದಿನ ನಾನು ಏನನ್ನೂ ಬಹಿರಂಗಪಡಿಸಲಿಲ್ಲ. ಆದರೆ, ಈಗ ಪ್ರಕರಣ ದಾಖಲಿಸಿದ್ದೇನೆ’’ ಎಂದಿದ್ದಾರೆ.
‘‘ನಾವು ಜುಲೈ 8ರಂದು ಸಾಮಾಜಿಕ ಮಾಧ್ಯಮದ ಮೂಲಕ ಎರಡು ವೈರಲ್ ವೀಡಿಯೊಗಳನ್ನು ಸ್ವೀಕರಿಸಿದ್ದೆವು. ಈ ವೀಡಿಯೊದಲ್ಲಿ ಇರುವ ವ್ಯಕ್ತಿಯನ್ನು ತೇಜ್ಬಲಿ ಎಂದು ಗುರುತಿಸಲಾಗಿತ್ತು. ಆತ ದಲಿತ ಯುವಕನ ಮೇಲೆ ಹಲ್ಲೆ ನಡೆಸುತ್ತಿರುವುದು, ಆತನಿಂದ ಬಸ್ಕಿ ತೆಗೆಸುತ್ತಿರುವುದು ಹಾಗೂ ಶೂ ನೆಕ್ಕುವಂತೆ ಬಲವಂತಪಡಿಸುತ್ತಿರುವುದು ಕಂಡು ಬಂದಿದೆ’’ ಎಂದು ಸೋನಭದ್ರ ಸರ್ಕಲ್ ಅಧಿಕಾರಿ (ಘೋರವಾಲ್) ಅಮಿತ್ ಕುಮಾರ್ ತಿಳಿಸಿದ್ದಾರೆ ಪಟೇಲ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ಹಾನಿ ಉಂಟು ಮಾಡುವುದು), 504 (ಶಾಂತಿ ಭಂಗ ಉಂಟು ಮಾಡುವ ಉದ್ದೇಶದಿಂದ ಅವಮಾನ ಮಾಡುವುದು), 506 (ಕ್ರಿಮಿನಲ್ ಬೆದರಿಕೆ), ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.







