Uttar Pradesh | ಜನನಿಬಿಡ ಮಾರುಕಟ್ಟೆಯಲ್ಲಿ ತಂದೆ- ಮಗನ ಗುಂಡಿಕ್ಕಿ ಹತ್ಯೆ

Photo Credit : indiatoday.in
ಲಕ್ನೋ, ಜೂ. 10: ಉತ್ತರಪ್ರದೇಶದ ಬಾಗಪತ್ ಜಿಲ್ಲೆಯ ಜನನಿಬಿಡ ಮಾರುಕಟ್ಟೆಯಲ್ಲಿ ವ್ಯಾಪಾರಿ ಮತ್ತು ಅವರ ಪುತ್ರನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ನಡೆದಿದೆ. ಈ ಘಟನೆಯ ನಂತರ ಉಂಟಾದ ಗೊಂದಲದ ನಡುವೆ ದಾಳಿಕೋರಲ್ಲಿ ಓರ್ವನನ್ನು ಗುಂಡಿಕ್ಕೆ ಹತ್ಯೆಗೈಯಲಾಗಿದೆ.
ಮೃತರನ್ನು ಸೋಹನ್ಲಾಲ್ ಅಗ್ರವಾಲ್ ಮತ್ತು ಅವರ ಪುತ್ರ ವಿಕಾಸ್ ಅಗ್ರವಾಲ್ ಎಂದು ಗುರುತಿಸಲಾಗಿದೆ.
ಮಂಗಳವಾರ ಸಂಜೆ ಸುಮಾರು 5:30ಕ್ಕೆ ಅವರ ಅಂಗಡಿಗೆ ಬಂದ ಮುಸುಕು ಹಾಕಿದ್ದ ಬಂದೂಕುಧಾರಿಗಳು ಅವರನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ.
ಪೊಲೀಸರ ಪ್ರಕಾರ, ದಾಳಿಕೋರರು ತಂದೆ ಹಾಗೂ ಅವರ ಮಗನ ಮೇಲೆ ಅತ್ಯಂತ ಹತ್ತಿರದಿಂದ ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಗ್ರಾಹಕರು ಮತ್ತು ವ್ಯಾಪಾರಿಗಳ ಸಮ್ಮಖದಲ್ಲೇ ಈ ದಾಳಿ ನಡೆದಿದ್ದು, ಅನಂತರ ದಾಳಿಕೋರರು ಓಡಿ ಹೋಗಿದ್ದಾರೆ.
ಸಮೀಪದ ಅಂಗಡಿಯಲ್ಲಿದ್ದ ಸೋಹನ್ಲಾಲ್ ಅವರ ಸಹೋದರ ದೀಪಕ್ ಮತ್ತು ಇತರ ಸ್ಥಳೀಯರು ಕೂಡಲೇ ಹೊರಗೆ ಧಾವಿಸಿದ್ದಾರೆ. ಕೆಲವರು ಗಾಯಗೊಂಡ ಸಂತ್ರಸ್ತರಿಗೆ ನೆರವು ನೀಡಿದರೆ, ಇನ್ನು ಕೆಲವರು ದಾಳಿಕೋರರನ್ನು ಬೆನ್ನಟ್ಟಿದ್ದಾರೆ.
ಕೋಪೋದ್ರಿಕ್ತರಾದ ಸ್ಥಳೀಯರು ದಾಳಿಕೋರರಲ್ಲಿ ಓರ್ವನಾದ ವರುಣ್ ಲೋಹಾರಿಯನ್ನು ಹಿಡಿದು ಥಳಿಸಿದ್ದಾರೆ. ಆನಂತರ ಆತನನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ.
ವರುಣ್ ಲೋಹಾರಿಗೆ ಗುಂಡು ಹಾರಿಸಿದವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆತ ಪೆಟ್ರೋಲ್ ಪಂಪ್ ಬಳಿ ಕುಸಿದು ಬಿದ್ದ ನಂತರದ ದೃಶ್ಯಗಳು ಮೊಬೈಲ್ ಫೋನ್ ವೀಡಿಯೊದಲ್ಲಿ ಸೆರೆಯಾಗಿದ್ದು, ಅದು ವೈರಲ್ ಆಗಿದೆ. ಆ ದೃಶ್ಯಾವಳಿಯಲ್ಲಿ ಎರಡು ಬಾರಿ ಗುಂಡು ಹಾರಿಸಿದ ಸದ್ದು ಕೇಳಿಸುತ್ತಿದ್ದು, ಜನಸಮೂಹದಲ್ಲಿದ್ದ ಯಾರಾದರೂ ಆರೋಪಿಯ ಮೇಲೆ ಗುಂಡು ಹಾರಿಸಿದ್ದಾರೆಯೇ ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.
ದಶಕಕ್ಕೂ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆಗಳು ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಪರಾರಿಯಾದ ಇಬ್ಬರು ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ಹತ್ತು ತಂಡಗಳನ್ನು ರಚಿಸಿದ್ದಾರೆ.






