ಉತ್ತರ ಪ್ರದೇಶ: ಲೈಂಗಿಕ ಕಿರುಕುಳ ವಿರೋಧಿಸಿದ್ದಕ್ಕೆ ಸ್ಯಾನಿಟೈಸರ್ ಕುಡಿಸಿದ ದುಷ್ಕರ್ಮಿಗಳು; ಬಾಲಕಿ ಮೃತ್ಯು

ಬರೇಲಿ: ಲೈಂಗಿಕ ಕಿರುಕುಳಕ್ಕೆ ವಿರೋಧ ವ್ಯಕ್ತಪಡಿಸಿದ ಬಾಲಕಿಗೆ ಯುವಕರ ಗುಂಪೊಂದು ಬಲವಂತವಾಗಿ ಸ್ಯಾನಿಟೈಸರ್ ಕುಡಿಸಿದ್ದು, ಆಕೆ ಮಂಗಳವಾರ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಜುಲೈ 27ರಂದು 11ನೇ ತರಗತಿ ವಿದ್ಯಾರ್ಥಿನಿಯಾಗಿರುವ ಬಾಲಕಿ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಳು. ಈ ಸಂದರ್ಭ ಮಠ ಲಕ್ಷ್ಮೀಪುರ ಪ್ರದೇಶದ ನಿವಾಸಿ ಉದೇಶ್ ರಾಥೋಡ್ (21) ಆಕೆಯನ್ನು ತಡೆದು ನಿಲ್ಲಿಸಿ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಾಥೋಡ್‌ನೊಂದಿಗೆ ಇತರ ಮೂವರು ಸೇರಿಕೊಂಡು ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಆರಂಭಿಸಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಬಾಲಕಿಗೆ ಅವರು ಬಲವಂತವಾಗಿ ಸ್ಯಾನಿಟೈಸರ್ ಕುಡಿಸಿದ್ದಾರೆ ಎಂದು ಪೊಲೀಸ್ ಅಧೀಕ್ಷಕ (ನಗರ) ರಾಹುಲ್ ಭಾಟಿ ತಿಳಿಸಿದ್ದಾರೆ.
ಬಾಲಕಿಯ ಸಹೋದರ ಮಧ್ಯಪ್ರವೇಶಿಸಿದಾಗ ಆರೋಪಿಗಳು ಆತನಿಗೆ ಥಳಿಸಿದ್ದಾರೆ. ಅಲ್ಲದೆ, ಎಲ್ಲಾ ಕೃತ್ಯವನ್ನು ವೀಡಿಯೊ ರೆಕಾರ್ಡ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಆರೋಪಿಗಳು ಬಲವಂತವಾಗಿ ಸ್ಯಾನಿಟೈಸರ್ ಕುಡಿಸಿದ ಬಳಿಕ ಬಾಲಕಿಯ ಪರಿಸ್ಥಿತಿ ಹದಗೆಡಲು ಆರಂಭವಾಯಿತು. ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಯಿತು. ಅನಂತರ ಜಿಲ್ಲಾಸ್ಪತ್ರೆಗೆ ವರ್ಗಾಯಿಸಲಾಯಿತು. ಆದರೆ, ಆಕೆ ಆಗಲೇ ಮೃತಪಟ್ಟಿದ್ದಾಳೆಂದು ವೈದ್ಯರು ಘೋಷಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.







