ಉತ್ತರ ಪ್ರದೇಶ | ಬುರ್ಖಾ ಧರಿಸಿದ್ದಕ್ಕೆ ಪೇರೆಂಟ್ಸ್ ಮೀಟಿಂಗ್ಗೆ ಅವಕಾಶ ನಿರಾಕರಣೆ

ಸಾಂದರ್ಭಿಕ ಚಿತ್ರ
ಕಾನ್ಪುರ, ಅ. 2: ಇಲ್ಲಿನ ಚಾಕೇರಿ ಪ್ರದೇಶದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಬುರ್ಖಾ ಧರಿಸಿದ ಮಹಿಳೆಯರಿಗೆ ಪೇರೆಂಟ್ಸ್ ಮೀಟಿಂಗ್ಗೆ ಪ್ರವೇಶ ನಿರಾಕರಿಸಿದ್ದು, ವಿವಾದಕ್ಕೆ ಕಾರಣವಾಗಿದೆ.
ನ್ಯೂ ವಿಷನ್ ಇಂಟರ್ ಕಾಲೇಜಿನ ಭದ್ರತಾ ಸಿಬ್ಬಂದಿ ಪ್ರವೇಶ ದ್ವಾರದ ಬಳಿ ಬುರ್ಖಾ ಧರಿಸಿದ್ದ ಮಹಿಳೆಯರ ಬಳಿ ಬುರ್ಖಾ ತೆಗೆಯುವಂತೆ ಸೂಚಿಸಿ, “ಬುರ್ಖಾ ಧರಿಸಿದ್ದರಿಂದ ಸಂವಹನ ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ. ನಾವು ಸಾಕಷ್ಟು ಹೊತ್ತು ಕಾಯುತ್ತಿದ್ದರೂ ಒಳಗೆ ಬಿಡಲಿಲ್ಲ. ಕೊನೆಯಲ್ಲಿ ನಿರಾಶೆಯಿಂದ ಹಿಂತಿರುಗಬೇಕಾಯಿತು” ಎಂದು ಪೋಷಕರಲ್ಲಿ ಒಬ್ಬರಾದ ರೆಹಾನಾ ಅವರು ಅಸಮಾಧಾನ ವ್ಯಕ್ತಪಡಿಸಿದರು.
ಆದರೆ, ಕಾಲೇಜು ತನ್ನ ನಿಲುವನ್ನು ಸಮರ್ಥಿಸಿಕೊಂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಕಾಲೇಜಿನ ಪ್ರಾಂಶುಪಾಲರು, “ಈ ನೀತಿ ಧಾರ್ಮಿಕ ಕಾರಣದಿಂದ ಜಾರಿಗೊಂಡದ್ದಲ್ಲ. ಗುರುತು ದೃಢೀಕರಣಕ್ಕಾಗಿ ಪ್ರತಿಯೊಬ್ಬರೂ ತಮ್ಮ ಮುಖವನ್ನು ತೋರಿಸುವುದು ಕಡ್ಡಾಯ” ಎಂದು ಸ್ಪಷ್ಟಪಡಿಸಿದರು.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ತೆರಳಿ ಪೋಷಕರು ಮತ್ತು ಕಾಲೇಜಿನ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿದ್ದಾರೆ. ಪರಿಸ್ಥಿತಿ ಪ್ರಸ್ತುತ ಶಾಂತವಾಗಿದೆ. ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.







