Uttar Pradesh | ವಾಹನ ನಿಲುಗಡೆ ವಿಚಾರಕ್ಕೆ ಜಗಳ; ಗುಂಡಿನ ದಾಳಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವಕ ಸೇರಿ ಮೂವರು ಮೃತ್ಯು
ನೆರೆಹೊರೆಯ ಕುಟುಂಬಗಳ ನಡುವಿನ ವಿವಾದ: ಆರು ಮಂದಿ ಬಂಧನ

Photo credit : timesofindia
ಲಕ್ನೋ: ಉತ್ತರ ಪ್ರದೇಶದ ಲಕ್ನೋ ನಗರದ ಸಾದತ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ನೌಬಸ್ತಾದ ಬ್ರಾಹ್ಮಣಿ ತೋಲಾ ಪ್ರದೇಶದಲ್ಲಿ ಅ. 26ರಂದು ನಡೆದ ಗುಂಡಿನ ದಾಳಿಯಲ್ಲಿ ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಮೃತರನ್ನು ನಿವೃತ್ತ ಸರಕಾರಿ ನೌಕರ ಶಿವಾಜಿ ತಿವಾರಿ (62), ಲಕ್ನೋ ವಿಶ್ವವಿದ್ಯಾಲಯದಲ್ಲಿ ಉದ್ಯೋಗದಲ್ಲಿದ್ದ ಅವರ ಸಹೋದರ ಶಿವೇಂದ್ರ ತಿವಾರಿ ಅಲಿಯಾಸ್ ಶಂಭು (55) ಹಾಗೂ ಅಮೀನಾಬಾದ್ ನಲ್ಲಿ ವಿದ್ಯುತ್ ಬಿಡಿಭಾಗಗಳ ಅಂಗಡಿ ನಡೆಸುತ್ತಿದ್ದ ಸುಯಶ್ ತಿವಾರಿ (30) ಎಂದು ಗುರುತಿಸಲಾಗಿದೆ. ಸುಯಶ್ ತಿವಾರಿಗೆ ಡಿ. 5ರಂದು ಮದುವೆ ನಿಶ್ಚಯವಾಗಿತ್ತು ಎಂದು ತಿಳಿದು ಬಂದಿದೆ.
ವಾಹನ ನಿಲುಗಡೆ ವಿಚಾರದಲ್ಲಿ ವಿವಾದ :
ತಿವಾರಿ ಮತ್ತು ಶುಕ್ಲಾ ಕುಟುಂಬಗಳು ಹಲವು ವರ್ಷಗಳಿಂದ ಅಕ್ಕಪಕ್ಕದ ಮನೆಗಳಲ್ಲಿ ವಾಸಿಸುತ್ತಿದ್ದವು. ಆರಂಭದಲ್ಲಿ ಎರಡೂ ಕುಟುಂಬಗಳ ನಡುವೆ ಉತ್ತಮ ಸಂಬಂಧವಿತ್ತು. ಆದರೆ, ಖಾಲಿ ಜಾಗದಲ್ಲಿ ವಾಹನ ನಿಲುಗಡೆ ಹಾಗೂ ಅರಳಿ ಮರದ ಸುತ್ತ ಕಟ್ಟೆ ನಿರ್ಮಿಸುವ ವಿಚಾರವಾಗಿ ವಿವಾದ ಉಂಟಾಗಿತ್ತು ಎನ್ನಲಾಗಿದೆ.
ಘಟನೆಯ ದಿನ ಕಾರು ನಿಲುಗಡೆ ವಿಚಾರವಾಗಿ ಎರಡು ಕುಟುಂಬಗಳ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಶುಕ್ಲಾ ಕುಟುಂಬದ ಕೆಲವರು ನಿಂದಿಸಿ, ದೊಣ್ಣೆ ಹಾಗೂ ಕಲ್ಲುಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಬಳಿಕ ರಿಷಭ್ ಶುಕ್ಲಾ ಗುಂಡಿನ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ಗುಂಡೇಟಿನಿಂದ ಶಿವಾಜಿ ಹಾಗೂ ಸುಯಶ್ ಸ್ಥಳದಲ್ಲೇ ಮೃತಪಟ್ಟರೆ, ಗಂಭೀರವಾಗಿ ಗಾಯಗೊಂಡಿದ್ದ ಶಿವೇಂದ್ರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.
ರಿಷಭ್ ಶುಕ್ಲಾ (29) ಪ್ರಮುಖ ಆರೋಪಿಯಾಗಿದ್ದು, ಈ ಹಿಂದೆ ಮರ್ಚೆಂಟ್ ನೇವಿಯಲ್ಲಿ ನ್ಯಾವಿಗೇಷನ್ ಅಧಿಕಾರಿಯಾಗಿ ಕೆಲಸ ಮಾಡಿದ್ದ ಎನ್ನಲಾಗಿದೆ. ಘಟನಾ ಸ್ಥಳದಲ್ಲಿ ದೇಶಿ ನಿರ್ಮಿತ ಪಿಸ್ತೂಲ್ ಹೊಂದಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಪಿಸ್ತೂಲ್, ಜೀವಂತ ಗುಂಡುಗಳು, ಖಾಲಿ ಕಾರ್ಟ್ರಿಡ್ಜ್ಗಳು ಹಾಗೂ ಮ್ಯಾಗಜೀನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ್ ಶುಕ್ಲಾ ಅಲಿಯಾಸ್ ಮುನ್ನಾ ಬಾಬು, ಗಿರೀಶ್ ಕುಮಾರ್ ಶುಕ್ಲಾ, ದಿನೇಶ್ ಶುಕ್ಲಾ ಅಲಿಯಾಸ್ ಛುನ್ನು, ಪ್ರಿಯಾ ಶುಕ್ಲಾ ಹಾಗೂ ಅದಿತಿ ಶುಕ್ಲಾ ಸೇರಿದಂತೆ ಇತರ ಐವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಒಟ್ಟು ಎಂಟು ಮಂದಿಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ಅಧಿಕಾರಿಗಳ ಅಮಾನತು :
ಈ ಹಿಂದೆ ನೀಡಿದ್ದ ದೂರುಗಳ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿರಲಿಲ್ಲ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಸಾದತ್ಗಂಜ್ ಪೊಲೀಸ್ ಠಾಣೆಯ ಠಾಣಾಧಿಕಾರಿ ಹಾಗೂ ಸ್ಥಳೀಯ ಪೊಲೀಸ್ ಹೊರಠಾಣೆಯ ಉಸ್ತುವಾರಿ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು, ತ್ವರಿತ ವಿಚಾರಣೆ ನಡೆಸುವುದು ಹಾಗೂ ಕುಟುಂಬದ ಉಳಿದ ಸದಸ್ಯರಿಗೆ ಭದ್ರತೆ ಒದಗಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಆರೋಪಿಯ ಆಸ್ತಿಯ ಕೆಲವು ಭಾಗಗಳ ವಿರುದ್ಧ ಲಕ್ನೋ ಅಭಿವೃದ್ಧಿ ಪ್ರಾಧಿಕಾರ ಕ್ರಮ ಕೈಗೊಂಡಿರುವ ಬಗ್ಗೆಯೂ ವರದಿಯಾಗಿದೆ.
ಘಟನೆಯ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಕುಟುಂಬಗಳ ನಡುವಿನ ಹಳೆಯ ವಿವಾದ, ಹಿಂದಿನ ದೂರುಗಳು, ವಿಧಿವಿಜ್ಞಾನ ಸಾಕ್ಷ್ಯಗಳು ಹಾಗೂ ಆರೋಪಿಗಳ ಪಾತ್ರದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
A live triple murder in Lucknow's Sadatganj. In the video, the accused Rishabh Shukla is seen firing three family members, father Shivaji Tiwari, son Suyash Tiwari, and Shivendra Tiwari. The deceased Suyash was to be married on December 5. https://t.co/CfwxiYg3HX
— Mohammed Zubair (@zoo_bear) October 29, 2026






