Uttar Pradesh | ಮನೆಯಲ್ಲಿ beef ಅಡುಗೆ ಮಾಡಿದ ಆರೋಪ: ಮೂವರು ಮಹಿಳೆಯರನ್ನು ಬಂಧಿಸಿದ ಪೊಲೀಸರು

ಸಾಂದರ್ಭಿಕ ಚಿತ್ರ
ಲಕ್ನೊ: ಉತ್ತರ ಪ್ರದೇಶದ ಕೌಶಾಂಬಿ ಜಿಲ್ಲೆಯಲ್ಲಿ ದನದ ಮಾಂಸವನ್ನು ಅಡುಗೆ ಮಾಡಿದ ಆರೋಪದಲ್ಲಿ ಪೊಲೀಸರು ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ.
ಮುಸ್ಲಿಂ ಕುಟುಂಬವೊಂದು ಗೋಮಾಂಸ ಅಡುಗೆ ಮಾಡುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಅದರಂತೆ ಉಪ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಸಿಂಗ್ ನೇತೃತ್ವದಲ್ಲಿ ಪೊಲೀಸರ ತಂಡ ಮನೆಯ ಮೇಲೆ ದಾಳಿ ನಡೆಸಿ ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ.
ದಾಳಿಯ ವೇಳೆ ಅಡುಗೆ ಮಾಡುತ್ತಿದ್ದ ಒಂದು ಕೆಜಿ ಮಾಂಸ ಹಾಗೂ ಪ್ಲಾಸ್ಟಿಕ್ ಚೀಲದಲ್ಲಿದ್ದ ಒಂದು ಕೆಜಿ ಹಸಿ ಮಾಂಸವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಮಹಿಳೆಯರ ವಿರುದ್ಧ ಸರಾಯಿ ಅಕಿಲ್ ಪೊಲೀಸ್ ಠಾಣೆಯಲ್ಲಿ ಉತ್ತರ ಪ್ರದೇಶ ಗೋಹತ್ಯೆ ತಡೆ ಕಾಯ್ದೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಉಪ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಸಿಂಗ್, “ನಾವು ಮೂವರು ಮಹಿಳೆಯರನ್ನು ಬಂಧಿಸಿದ್ದೇವೆ. ವಿಚಾರಣೆಯ ವೇಳೆ ಅವರು ಅದು ದನದ ಮಾಂಸವಾಗಿತ್ತು. ಆ ಮಾಂಸವನ್ನು ನಮ್ಮ ಕುಟುಂಬದ ಸದಸ್ಯರು ಹೊರಗಿನಿಂದ ತಂದಿದ್ದರು ಎಂದು ತಿಳಿಸಿದ್ದಾರೆ” ಎಂದು ಹೇಳಿದ್ದಾರೆ.
ವಶಪಡಿಸಿಕೊಳ್ಳಲಾಗಿರುವ ಮಾಂಸವನ್ನು ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಈ ಕುರಿತ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.






