ಅಯೋಧ್ಯೆ ರಾಮ ಮಂದಿರ ದೇಣಿಗೆ ವಿವಾದ: SIT ರಚಿಸಿದ ಸರಕಾರ; ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ

Photo | indiatoday
ಅಯೋಧ್ಯೆ,ಜೂ.13: ರಾಮ ಮಂದಿರದ ದೇಣಿಗೆ ಹಣ ಲೂಟಿ ಆರೋಪದಲ್ಲಿ ಉತ್ತರ ಪ್ರದೇಶ ಸರಕಾರ ಮೂವರು ಸದಸ್ಯರ ವಿಶೇಷ ತನಿಖಾ ತಂಡವನ್ನು (SIT) ರಚಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ಕಾರ್ಯಾಚರಣೆ ಗುಂಪು (SOG) ಓರ್ವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮನವಿಯ ಮೇರೆಗೆ ಈ ಕುರಿತು ತನಿಖೆಗೆ SIT ರಚಿಸಲಾಗಿದೆ. ಎಸ್ಐಟಿ ತಂಡದಲ್ಲಿ ಲಕ್ನೋ ವಿಭಾಗೀಯ ಆಯುಕ್ತ ವಿಜಯ್ ವಿಶ್ವಾಸ್ ಪಂತ್, ಪೊಲೀಸ್ ಮಹಾನಿರ್ದೇಶಕ ಕಿರಣ್ ಎಸ್ ಹಾಗೂ ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್ ರತನ್ ಸದಸ್ಯರಾಗಿದ್ದಾರೆ. ದೇಣಿಗೆ ಮತ್ತು ಹಣಕಾಸು ನಿರ್ವಹಣೆಗೆ ಸಂಬಂಧಿಸಿದ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ತಂಡಕ್ಕೆ ಸೂಚಿಸಲಾಗಿದೆ.
ತನಿಖೆಯ ಭಾಗವಾಗಿ ರುಡೌಲಿಯ ಶುಜಗಂಜ್ ಪ್ರದೇಶದ ಮೀನಾಪುರ್ ಫಾಗೋಲಿ ಗ್ರಾಮದ ನಿವಾಸಿ ಲವ್ ಕುಶ್ ಎಂಬಾತನನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಆತನ ಬಳಿ ನಗದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಇದರ ಬಗ್ಗೆ ಪೊಲೀಸರು ಅಥವಾ ಟ್ರಸ್ಟ್ ಅಧಿಕೃತ ಮಾಹಿತಿ ನೀಡಿಲ್ಲ.
ದೇಣಿಗೆ ಎಣಿಕೆ ಕಾರ್ಯದಲ್ಲಿ ತೊಡಗಿದ್ದ ಹಲವಾರು ಉದ್ಯೋಗಿಗಳನ್ನು ನಿಗಾದಲ್ಲಿರಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ವಿವಿಧ ಸಾಕ್ಷ್ಯಗಳನ್ನು ಪರಿಶೀಲಿಸಲಾಗುತ್ತಿದೆ.
ಈ ತಿಂಗಳ ಆರಂಭದಲ್ಲಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ರಾಮ ಮಂದಿರಕ್ಕೆ ಬಂದ ಕೋಟ್ಯಂತರ ರೂಪಾಯಿ ದೇಣಿಗೆ ಹಣ ಕಾಣೆಯಾಗಿದೆ ಎಂಬ ವರದಿಗಳನ್ನು ಉಲ್ಲೇಖಿಸಿ ನ್ಯಾಯಾಲಯಗಳು ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದ್ದರು. ಇದರಿಂದ ವಿವಾದ ರಾಜಕೀಯ ಸ್ವರೂಪ ಪಡೆದುಕೊಂಡಿತ್ತು.
ಬಿಜೆಪಿಯ ಮಾಜಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ದೇಣಿಗೆ ಹಣದ ದುರುಪಯೋಗದ ಬಗ್ಗೆ ಮಾಹಿತಿ ಇದೆ ಎಂದು ಹೇಳಿದ್ದರೆ, ಬಿಜೆಪಿ ನಾಯಕ ರಜನೀಶ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದು ಟ್ರಸ್ಟ್ ನ ಹಣಕಾಸು ವ್ಯವಹಾರಗಳ ವಿವರಗಳನ್ನು ಬಹಿರಂಗಪಡಿಸಲು ಒತ್ತಾಯಿಸಿದ್ದರು. ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಅವರು ಹಾಲಿ ಹೈಕೋರ್ಟ್ ನ್ಯಾಯಮೂರ್ತಿಯ ನೇತೃತ್ವದಲ್ಲಿ ಸ್ವತಂತ್ರ ತನಿಖೆ ನಡೆಸುವಂತೆ ಆಗ್ರಹಿಸಿದ್ದರು.
ಆರೋಪಗಳನ್ನು ತಳ್ಳಿಹಾಕಿರುವ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಆಂತರಿಕ ಲೆಕ್ಕಪರಿಶೋಧನೆ ನಡೆಯುತ್ತಿದ್ದು, ಆರೋಪಗಳನ್ನು ದೃಢಪಡಿಸಲು ಯಾವುದೇ ಸಾಕ್ಷ್ಯ ದೊರೆತಿಲ್ಲ ಎಂದು ಹೇಳಿದ್ದಾರೆ.
ಈ ನಡುವೆ ಬಿಜೆಪಿ ಹಿರಿಯ ನಾಯಕ ಹಾಗೂ ಮಾಜಿ ಸಂಸದ ವಿನಯ್ ಕಟಿಯಾರ್, ರಾಮ ಮಂದಿರಕ್ಕೆ ಸಂಬಂಧಿಸಿದ ಯಾವುದೇ ಭ್ರಷ್ಟಾಚಾರ ಅಥವಾ ಕಳ್ಳತನವು ಲಕ್ಷಾಂತರ ಭಕ್ತರ ನಂಬಿಕೆಗೆ ದ್ರೋಹವಾಗಲಿದೆ ಎಂದು ಹೇಳಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.






