ಉತ್ತರ ಪ್ರದೇಶ: ಮಧ್ಯವಯಸ್ಕ ಮಹಿಳೆಯರನ್ನು ಗುರಿಯಾಗಿಸಿ ಹತ್ಯೆ ನಡೆಸುತ್ತಿದ್ದ ಸರಣಿ ಹಂತಕನ ಬಂಧನ

PC : news18.com
ಬರೇಲಿ: ಕಳೆದ ಒಂದು ವರ್ಷದಿಂದ ಉತ್ತರ ಪ್ರದೇಶದ ಬರೇಲಿಯಲ್ಲಿ ಮಧ್ಯಿವಯಸ್ಕ ಮಹಿಳೆಯರನ್ನು ಗುರಿಯಾಗಿಸಿಕೊಂಡು, ಅವರ ಸರಣಿ ಹತ್ಯೆ ನಡೆಸುತ್ತಿದ್ದ ಶಂಕಿತ ಆರೋಪಿಯನ್ನು ಬಂಧಿಸಲಾಗಿದೆ ಎಂದು ಶುಕ್ರವಾರ ಪೊಲೀಸರು ತಿಳಿಸಿದ್ದಾರೆ.
ಆರೋಪಿಯನ್ನು ಕುಲ್ದೀಪ್ ಕುಮಾರ್ ಎಂದು ಗುರುತಿಸಲಾಗಿದ್ದು, ತಾನು ಆರು ಮಂದಿ ಮಹಿಳೆಯರನ್ನು ಹತ್ಯೆಗೈದಿರುವುದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಕುಲ್ದೀಪ್ ಕುಮಾರ್ ನನ್ನು ರೇಖಾ ಚಿತ್ರಗಳು ಹಾಗೂ ಸಿಸಿಟಿವಿ ಕ್ಯಾಮೆರಾ ದೃಶ್ಯಾಲವಳಿಗಳ ನೆರವಿನೊಂದಿಗೆ ಸೆರೆ ಹಿಡಿಯಲಾಯಿತು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅನುರಾಗ್ ಆರ್ಯ ಹೇಳಿದ್ದಾರೆ.
ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ಪರಿಶೀಲನೆ, ಮಾಹಿತಿದಾರರ ನಿಯೋಜನೆ ಹಾಗೂ ಮೊಬೈಲ್ ದತ್ತಾಂಶಗಳ ವಿಶ್ಲೇಷಣೆ ಒಳಗೊಂಡಂತೆ ತೀವ್ರ ಸ್ವರೂಪದ ತನಿಖೆ ಕೈಗೊಂಡ ನಂತರ ಈ ಬಂಧನ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಜನರಹಿತ ಪ್ರದೇಶಗಳಲ್ಲಿ, ಅದರಲ್ಲೂ ಶಾಹಿ ಮತ್ತು ಶೀಶ್ ಗಢ ಪ್ರದೇಶಗಳಲ್ಲಿ ಆರು ಮಂದಿ ಮಹಿಳೆಯರ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆಗಳು 2023-2024ರ ನಡುವೆ ಬೆಳಕಿಗೆ ಬಂದಿದ್ದವು. ಈ ಸಂಬಂಧ ಶಾಹಿ ಮತ್ತು ಶೀಶ್ ಗಢ ಪೊಲೀಸ್ ಠಾಣೆಗಳಲ್ಲಿ ಹತ್ಯೆ ಪ್ರಕರಣಗಳು ದಾಖಲಾಗಿದ್ದವು ಎಂದು ಅನುರಾಗ್ ಆರ್ಯ ಹೇಳಿದ್ದಾರೆ.
35 ವರ್ಷದ ಕುಲ್ದೀಪ್ ಕುಮಾರ್ ನನ್ನು ಸುಳಿವು ಹಾಗೂ ಈ ಹಿಂದೆಯೇ ತಯಾರಿಸಲಾಗಿದ್ದ ರೇಖಾಚಿತ್ರಗಳು ಮತ್ತು ವಿಡಿಯೊಗಳ ನೆರವಿನೊಂದಿಗೆ ಗುರುವಾರ ಶಾಹಿ ಠಾಣೆಯ ಪೊಲೀಸರು ಮಾಥಿಯ ನದಿ ದಡದ ಬಳಿಯಿಂದ ಬಂಧಿಸಿದ್ದಾರೆ.







