ಉತ್ತರ ಪ್ರದೇಶ| ಮುಸ್ಲಿಂ ವಿದ್ಯಾರ್ಥಿಗೆ ಹೊಡೆಯುವಂತೆ ಹಿಂದೂ ವಿದ್ಯಾರ್ಥಿಗಳಿಗೆ ಶಿಕ್ಷಕಿಯ ಸೂಚನೆ; ಆಘಾತಕಾರಿ ವಿಡಿಯೋ ವೈರಲ್

Photo: Twitter
ಮುಝಫ್ಫರ್ ನಗರ: ಮುಸ್ಲಿಂ ವಿದ್ಯಾರ್ಥಿಯ ಕೆನ್ನೆಗೆ ಹೊಡೆಯುವಂತೆ ಹಿಂದೂ ವಿದ್ಯಾರ್ಥಿಗಳನ್ನು ಉತ್ತೇಜಿಸುತ್ತಿರುವ ಶಿಕ್ಷಕಿಯೊಬ್ಬರ ಆಘಾತಕಾರಿ ವಿಡಿಯೊ ವೈರಲ್ ಆಗಿದ್ದು, “ಈ ಘಟನೆಯ ಕುರಿತು ತನಿಖೆ ನಡೆಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಮನ್ಸೂರ್ ಪುರ್ ಠಾಣಾಧಿಕಾರಿಗೆ ಸೂಚಿಸಲಾಗಿದೆ” ಎಂದು ಮುಝಫ್ಫರ್ ಪುರ್ ಪೊಲೀಸರ ಅಧಿಕೃತ ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ.
“ಎಷ್ಟೆಲ್ಲ ಮುಸ್ಲಿಂ ಮಕ್ಕಳಿದ್ದಾರೆ ಅವರಿಗೆ ಹೊಡೆಯುವಂತೆ ನಾನು ಆದೇಶಿಸುತ್ತಿದ್ದೇನೆ..” ಎಂದು ಶಿಕ್ಷಕಿಯೊಬ್ಬರು ತರಗತಿಯಲ್ಲಿನ ಮುಸ್ಲಿಂ ವಿದ್ಯಾರ್ಥಿಗೆ ಹೊಡೆಯುವಂತೆ ಹಿಂದೂ ಮಕ್ಕಳಿಗೆ ಉತ್ತೇಜಿಸುತ್ತಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ತಾನು ಏನು ಮಾಡುತ್ತಿದ್ದೇನೆ ಎಂದು ವ್ಯಕ್ತಿಯೋರ್ವನಿಗೆ ವಿವರಿಸುವಲ್ಲಿ ಶಿಕ್ಷಕಿಯು ನಿರತವಾಗಿರುವುದು ವಿಡಿಯೊದಲ್ಲಿ ಕಂಡುಬಂದಿದೆ.
ವಿದ್ಯಾರ್ಥಿಗಳು ಮುಸ್ಲಿಂ ಎಂದು ತಿಳಿಯಲಾದ ವಿದ್ಯಾರ್ಥಿಗೆ ಹೊಡೆಯುತ್ತಿರುವುದು ಹಾಗೂ ಆ ವಿದ್ಯಾರ್ಥಿ ಅಳತ್ತಿರುವುದು ವಿಡಿಯೋದಲ್ಲಿ ಕಾಣಬಹುದು. “ಏ ಕ್ಯಾ ತುಮ್ ಮಾರ್ ರಹೆ ಹೊ ಇಸ್ಕೆ.. ಜೋರ್ ಸೆ ಮಾರೊ ನಾ.. ಚಲೋ ಔರ್ ಕಿಸ್ಕ ನಂಬರ್ ಹೈಂ” (ಏ ನೀನು ಅವನಿಗೆ ಹೊಡೆಯುತ್ತಿದ್ದೀಯ?.. ಜೋರಾಗಿ ಹೊಡಿ.. ನಡಿ, ಈಗ ಯಾರ ನಂಬರ್ ಇದೆ”) ಎಂದು ವಿದ್ಯಾರ್ಥಿಗಳನ್ನು ಪ್ರಶ್ನಿಸುತ್ತಿದ್ದು, ಹೊಡೆತ ತಿಂದಿರುವ ಮಗುವಿಗೆ ಚೆನ್ನಾಗಿ ಹೊಡಿ ಎಂದು ಮತ್ತೊಬ್ಬ ವಿದ್ಯಾರ್ಥಿಯನ್ನು ಉತ್ತೇಜಿಸುತ್ತಿರುವುದನ್ನು ಕಾಣಬಹುದಾಗಿದೆ.
ವರದಿಗಳ ಪ್ರಕಾರ, ಆ ವಿಡಿಯೊ ಮುಝಾಫ್ಫರ್ ಪುರದ ಖುಬ್ಬಾಪುರ್ ಗ್ರಾಮದಲ್ಲಿನ ನೇಹಾ ಸಾರ್ವಜನಿಕ ಶಾಲೆಗೆ ಸೇರಿರುವುದು ಎನ್ನಲಾಗಿದೆ. ಆ ವಿಡಿಯೊದಲ್ಲಿ ಮಕ್ಕಳು ನೆಲದಲ್ಲಿ ಕುಳಿತಿರುವುದನ್ನು ಕಾಣಬಹುದಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮುಸ್ಲಿಂ ವಿದ್ಯಾರ್ಥಿಯ ತಂದೆ, ಘಟನೆಯ ಕುರಿತು ದೂರು ದಾಖಲಿಸುವುದಿಲ್ಲ ಎಂದು ಹೇಳಿದ್ದಾರೆ. “ನಾವು ನಮ್ಮ ಮಗುವನ್ನು ಶಾಲೆಯಿಂದ ಬಿಡಿಸುವ ನಿರ್ಧಾರಕ್ಕೆ ಬಂದಿದ್ದು, ಈ ಕುರಿತು ಪೊಲೀಸರಿಗೆ ದೂರು ಸಲ್ಲಿಸುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.







