ಮುಸ್ಲಿಂ ಮಗುವಿಗೆ ಸಹಪಾಠಿಗಳಿಂದ ಕಪಾಳಮೋಕ್ಷ: ‘ನನಗೆ ನಾಚಿಕೆಯಾಗುವುದಿಲ್ಲ’ ಎಂದ ಶಿಕ್ಷಕಿ

Photo Credit: X Screengrab
ಹೊಸದಿಲ್ಲಿ: ತಮ್ಮ ಮುಸ್ಲಿಂ ಸಹಪಾಠಿಗೆ ಕಪಾಳಮೋಕ್ಷ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದ ಉತ್ತರ ಪ್ರದೇಶದ ಶಾಲಾ ಶಿಕ್ಷಕಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ . ಘಟನೆಯ ವೀಡಿಯೊ ವೈರಲ್ ಆಗಿದ್ದು, ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಮುಝಾಫರ್ನಗರದ ನೇಹಾ ಪಬ್ಲಿಕ್ ಸ್ಕೂಲ್ ನ ಪ್ರಾಂಶುಪಾಲರೂ ಆಗಿರುವ ತ್ರಿಪ್ತಾ ತ್ಯಾಗಿ ತನ್ನ ಅತಿರೇಕದ ಕೃತ್ಯಕ್ಕೆ "ನಾಚಿಕೆಪಡುವುದಿಲ್ಲ" ಎಂದಿದ್ದಾರೆ.
"ನನಗೆ ನಾಚಿಕೆಯಾಗುವುದಿಲ್ಲ. ನಾನು ಶಿಕ್ಷಕಿಯಾಗಿ ಈ ಗ್ರಾಮದ ಜನರಿಗೆ ಸೇವೆ ಸಲ್ಲಿಸಿದ್ದೇನೆ. ಅವರೆಲ್ಲರೂ ನನ್ನೊಂದಿಗೆ ಇದ್ದಾರೆ" ಎಂದು ತ್ಯಾಗಿ NDTVಗೆ ತಿಳಿಸಿದರು.
ತ್ಯಾಗಿ 7 ವರ್ಷದ ಬಾಲಕನಿಗೆ ಕಪಾಳಮೋಕ್ಷ ಮಾಡುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿರುವುದು, ಕೋಮುವಾದಿ ಟೀಕೆ ಮಾಡಿದ್ದು ಪೆಟ್ಟು ತಿಂದ ಬಾಲಕನು ಕಣ್ಣೀರು ಸುರಿಸುತ್ತಾ ಅಸಹಾಯಕರಾಗಿ ನಿಂತಿರುವುದು ವೀಡಿಯೊದಲ್ಲಿ ಕಂಡುಬಂದಿದೆ.
ಶಾಲೆಯಲ್ಲಿ ಮಕ್ಕಳನ್ನು "ನಿಯಂತ್ರಿಸುವುದು" ಮುಖ್ಯ ಎಂದು ಹೇಳುವ ಮೂಲಕ ತ್ಯಾಗಿ ತನ್ನ ಕೃತ್ಯವನ್ನು ಸಮರ್ಥಿಸಲು ಪ್ರಯತ್ನಿಸಿದರು. ''ಅವರು ಕಾನೂನುಗಳನ್ನು ಮಾಡಿದ್ದಾರೆ, ಆದರೆ ನಾವು ಶಾಲೆಗಳಲ್ಲಿ ಮಕ್ಕಳನ್ನು ನಿಯಂತ್ರಿಸಬೇಕಾಗಿದೆ” ಎಂದು ತ್ಯಾಗಿ ಹೇಳಿದರು.
ಈ ಹಿಂದೆ ವೈರಲ್ ವೀಡಿಯೊದ ಮೇಲಿನ ವಿವಾದವನ್ನು 'ಕ್ಷುಲ್ಲಕ ವಿಚಾರ' ಎಂದು ತ್ಯಾಗಿ ತಳ್ಳಿಹಾಕಿದ್ದರು.
"ಇದನ್ನು ನಾನು ಉದ್ದೇಶಪೂರ್ವಕವಾಗಿ ಮಾಡಿರಲಿಲ್ಲ. ನನ್ನ ತಪ್ಪನ್ನು ನಾನು ಒಪ್ಪಿಕೊಳ್ಳುತ್ತಿದ್ದೇನೆ, ಆದರೆ ಇದು ಅನಗತ್ಯವಾಗಿ ದೊಡ್ಡ ವಿವಾದವಾಗಿ ಮಾರ್ಪಟ್ಟಿದೆ" ಎಂದು ತ್ಯಾಗಿ ಹೇಳಿದರು.
"ಶಿಕ್ಷಕಿಯ ವಿರುದ್ಧ ಪ್ರಥಮ ಮಾಹಿತಿ ವರದಿ ಅಥವಾ ಎಫ್ಐಆರ್ ದಾಖಲಿಸಲಾಗಿದೆ . ನಾವು ಸಂಪೂರ್ಣ ತನಿಖೆ ನಡೆಸಿದ್ದೇವೆ. ಮಗುವಿನ ತಂದೆಯ ದೂರಿನ ಮೇರೆಗೆ ನಾವು ಆರೋಪಿ ಶಿಕ್ಷಕಿಯ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದೇವೆ. ಶಿಕ್ಷಕನ ವಿರುದ್ಧ ಇಲಾಖಾ ಕ್ರಮವನ್ನು ಸಹ ತೆಗೆದುಕೊಳ್ಳಲಾಗುತ್ತಿದೆ" ಎಂದು ಮುಝಾಫರ್ ನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ಅರವಿಂದ ಮಲ್ಲಪ್ಪ ಬಂಗಾರಿ ತಿಳಿಸಿದ್ದಾರೆ.







