ಉತ್ತರಪ್ರದೇಶ: ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಟೆಂಪೋ ವ್ಯಾನ್ ಪಲ್ಟಿ; ಇಬ್ಬರು ಮೃತ್ಯು, 13 ಮಂದಿಗೆ ಗಾಯ

ಪ್ರತಾಪಗಢ(ಉತ್ತರ ಪ್ರದೇಶ): ಉತ್ತರಪ್ರದೇಶದ ಪ್ರತಾಪಗಢದಲ್ಲಿ ಶುಕ್ರವಾರ ಟೆಂಪೋ ವ್ಯಾನ್ ಪಲ್ಟಿಯಾದ ಪರಿಣಾಮ ಇಬ್ಬರು ಮಹಿಳಾ ಭಕ್ತರು ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಭಭೌರಾ ಗ್ರಾಮದ ಬಳಿಯ ಲಾಲ್ಗಂಜ್-ಕಲಕಂಕರ್ ರಸ್ತೆಯಲ್ಲಿ ಸುಮಾರು 15 ಮಂದಿ ಸಂಗ್ರಾಮ್ಗಢದಿಂದ ಇಲ್ಲಿನ ಬಾಬಾ ಘುಯಿಸರನಾಥ್ ಧಾಮ್ ಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಪಶ್ಚಿಮ) ರೋಹಿತ್ ಮಿಶ್ರಾ ತಿಳಿಸಿದ್ದಾರೆ.
ಟೆಂಪೋ ವ್ಯಾನ್ ನ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದ್ದು, ಮೂವರು ಮಕ್ಕಳು ಹಾಗೂ ಚಾಲಕ ಸೇರಿದಂತೆ ಎಲ್ಲಾ ಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ.
ಗಾಯಾಳುಗಳನ್ನು ಲಾಲ್ಗಂಜ್ ನ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಸೀಮಾ ಹಾಗೂ ಕೋಮಲ್ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಇಬ್ಬರೂ 18 ವರ್ಷ ವಯಸ್ಸಿನವರು.
ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.





