ಉತ್ತರ ಪ್ರದೇಶ: ಹಣಕ್ಕಾಗಿ ಮಗಳನ್ನೇ ಮಾರಿದ ತಾಯಿ; ಆರೋಪ
ಲಕ್ನೋ: ಮದುವೆ ನೆಪದಲ್ಲಿ ತಾಯಿಯೇ ನನ್ನನ್ನು ಹರ್ಯಾಣದ ವ್ಯಕ್ತಿಯೊಬ್ಬರಿಗೆ ನಾಲ್ಕು ಲಕ್ಷ ರೂಪಾಯಿಗೆ ಮಾರಾಟ ಮಾಡಿರುವುದಾಗಿ 18 ವರ್ಷದ ಯುವತಿ, ತಾಯಿಯ ವಿರುದ್ಧ ಪೊಲೀಸರಿಗೆ ದೂರು ನೀಡಿರುವ ಘಟನೆ ಉತ್ತರ ಪ್ರದೇಶದ ಗೋರಖ್ಪುರ ಜಿಲ್ಲೆಯ ಮಹ್ಸೆರಾದ ಲ್ಲಿ ನಡೆದಿದೆ.
ತಾಯಿ ಹರ್ಯಾಣ ವ್ಯಕ್ತಿಯಿಂದ 4 ಲಕ್ಷ ರೂಪಾಯಿಗಳನ್ನು ಪಡೆದುಕೊಂಡು, ಆತನ ಜತೆಗೆ ನನ್ನ ವಿವಾಹ ಮಾಡಿಕೊಟ್ಟಿದ್ದಾರೆ. ನವೆಂಬರ್ 23ರಂದು ಮನೆಯಲ್ಲಿ ವಿವಾಹ ನಡೆದಿತ್ತು. ವಿವಾಹವಾದ ವ್ಯಕ್ತಿ ದೌರ್ಜನ್ಯ ಎಸಗಿದ್ದು ಮಾತ್ರವಲ್ಲದೇ, ಅಕ್ರಮ ಚಟುವಟಿಕೆಗಳಿಗೆ ಬಲವಂತಪಡಿಸಿದ್ದಾಗಿ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಬುಧವಾರ ಠಾಣೆಗೆ ಆಗಮಿಸಿ, ತಾನು ಚಿಲುವಾತಾಲ್ ಠಾಣೆ ವ್ಯಾಪ್ತಿಯ ಮಹ್ಸೆರಾದವಳಾಗಿದ್ದು, ತನ್ನನ್ನು ಹರ್ಯಾಣ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಲಾಗಿದೆ. ಆತ ತನ್ನನ್ನು ವಿವಾಹವಾಗಿದ್ದಾಗಿ ಯುವತಿ ದೂರಿನಲ್ಲಿ ವಿವರಿಸಿದ್ದಾಳೆ ಎಂದು ಎಸ್ಪಿ ಮನೋಜ್ ಅವಸ್ಥಿ ಹೇಳಿದ್ದಾರೆ.
ಈ ಆರೋಪಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಈ ಯುವತಿಯ ಇಬ್ಬರು ಅಕ್ಕಂದಿರನ್ನು ಕೂಡಾ ಹರ್ಯಾಣಕ್ಕೆ ಮದುವೆ ಮಾಡಿ ಕೊಡಲಾಗಿದೆ. ತಾಯಿ ಮತ್ತು ಕುಟುಂಬದವರು ಈ ಆರೋಪವನ್ನು ನಿರಾಕರಿಸಿದ್ದಾರೆ. ಆದರೂ ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ ಎಂದು ಚಿಲುವಾತಾಲ್ ಠಾಣೆಯ ಅಧಿಕಾರಿ ಸಂಜಯ್ ಮಿಶ್ರಾ ವಿವರ ನೀಡಿದ್ದಾರೆ.