ಉತ್ತರಪ್ರದೇಶ: ಪಂಪ್ ರಿಪೇರಿಗೆ ಬಾವಿಗೆ ಇಳಿದ ಮೂವರು ರೈತರು ಉಸಿರುಗಟ್ಟಿ ಮೃತ್ಯು

Photo: PTI
ಬುಲಂದ್ಶಹರ್: ಉತ್ತರಪ್ರದೇಶದ ಬುಲಂದ್ ಶಹರ್ ನ ಹಳ್ಳಿಯೊಂದರಲ್ಲಿ ಮೋಟಾರ್ ಪಂಪ್ ರಿಪೇರಿ ಮಾಡಲು ಬಾವಿಗೆ ಇಳಿದ ಮೂವರು ರೈತರು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಆದಿತ್ಯನಾಥ್ ಮೃತರ ಸಂಬಂಧಿಕರಿಗೆ ತಲಾ 5 ಲಕ್ಷ ರೂ. ನೆರವು ಘೋಷಿಸಿದ್ದಾರೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಪ್ರಕಾಶ್ ಸಿಂಗ್ ತಿಳಿಸಿದ್ದಾರೆ.
ಖಾನ್ಪುರ ಪ್ರದೇಶದ ಜಾದೌಲ್ ಗ್ರಾಮದ ನಿವಾಸಿಗಳಾದ ಕೈಲಾಶ್ (42 ವರ್ಷ), ಹಂಸರಾಜ್ (38 ವರ್ಷ) ಮತ್ತು ಅನಿಲ್ (30 ವರ್ಷ) ಬೆಳಗ್ಗೆ 8 ಗಂಟೆ ಸುಮಾರಿಗೆ ಹೊಲಗಳಿಗೆ ಹೋಗಿದ್ದರು. ಕೆಲವು ಗಂಟೆಗಳ ನಂತರ ಕೃಷಿ ಬಾವಿಯೊಳಗೆ ಮೂವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಗ್ರಾಮಸ್ಥರು ಕಂಡರು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಪ್ರಕಾಶ್ ತಿಳಿಸಿದ್ದಾರೆ.
ಗ್ರಾಮಸ್ಥರು ಮೂವರನ್ನುಬಾವಿಯಿಂದ ಹೊರತೆಗೆದು ಜಹಾಂಗೀರಾಬಾದ್ ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದ ಅವರನ್ನು ಅಲ್ಲಿಂದ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಡಿಎಂ ತಿಳಿಸಿದ್ದಾರೆ.
ಜಿಲ್ಲಾ ಆಸ್ಪತ್ರೆಯ ವೈದ್ಯರು ಮೂವರು ರೈತರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು, ನಂತರ ಮೃತರ ಸಂಬಂಧಿಕರಿಗೆ ಮಾಹಿತಿ ನೀಡಲಾಯಿತು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದರು.





