ಉತ್ತರಪ್ರದೇಶ| ವ್ಯಕ್ತಿಗೆ ಶಿಕ್ಷಿಸುವ ವೀಡಿಯೊ ವೈರಲ್: ಹುದ್ದೆ ಕಳೆದುಕೊಂಡ ಸರಕಾರಿ ಅಧಿಕಾರಿ

Photo: Twiter@NDTV
ಹೊಸದಿಲ್ಲಿ: ಉತ್ತರ ಪ್ರದೇಶದ ಬರೇಲಿಯಲ್ಲಿ ಒಬ್ಬ ವ್ಯಕ್ತಿಯನ್ನು ತನ್ನ ಕಚೇರಿಯೊಳಗೆ 'ಶಿಕ್ಷಿಸಿದ' ವೀಡಿಯೊ ವೈರಲ್ ಆದ ನಂತರ ಸರಕಾರಿ ಅಧಿಕಾರಿಯನ್ನು ಹುದ್ದೆಯಿಂದ ತೆಗೆದುಹಾಕಲಾಗಿದೆ.
ಬರೇಲಿ ಜಿಲ್ಲೆಯ ಮಿರ್ ಗಂಜ್ ಪಟ್ಟಣದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ ಡಿಎಂ) ಉದಿತ್ ಪವಾರ್, ಸ್ಮಶಾನ ಬೇಕೆಂದು ಕೋರಿ ತನ್ನನ್ನು ಮೂರನೇ ಬಾರಿಗೆ ಭೇಟಿ ಮಾಡಿದ್ದ ಒಬ್ಬ ವ್ಯಕ್ತಿಯನ್ನು 'ಕೋಳಿಯಂತೆ ಕುಣಿಯಲು'' ಹೇಳಿದ್ದ ಆರೋಪ ಕೇಳಿಬಂದಿದೆ.
ಪವಾರ್ ಅವರು ಆರೋಪವನ್ನು ನಿರಾಕರಿಸಿದ್ದು, ತಾನು ಕಚೇರಿಗೆ ಪ್ರವೇಶಿಸಿದಾಗ ಆ ವ್ಯಕ್ತಿ ಅದಾಗಲೇ ಆ ರೀತಿ ಕುಳಿತಿದ್ದ ಹಾಗೂ ನೀನು ಹೀಗೆ ಏಕೆ ಮಾಡುತ್ತಿದ್ದೀಯಾ ಎಂದು ನಾನು ಆತನನ್ನು ಕೇಳಿದ್ದೆ, ಆತನಿಗೆ ಸರಿಯಾಗಿ ನಿಲ್ಲಲು ಸಹಾಯ ಮಾಡಲು ಅಲ್ಲಿದ್ದ ಇತರರಿಗೆ ನಿರ್ದೇಶಿಸಿದ್ದೆ ಎಂದು ಹೇಳಿದ್ದಾರೆ..
ಆದಾಗ್ಯೂ, ಎಸ್ ಡಿಎಂನಿಂದ ತಪ್ಪಾಗಿದೆ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಹೇಳಿದ್ದಾರೆ. ಅವರು ಪವಾರ್ ಅವರನ್ನು ಅವರ ಹುದ್ದೆಯಿಂದ ತೆಗೆದುಹಾಕಿದ್ದಾರೆ ಮತ್ತು ಇಲ್ಲಿಯವರೆಗೆ ಅವರಿಗೆ ಹೊಸ ಪೋಸ್ಟಿಂಗ್ ಅನ್ನು ನಿಯೋಜಿಸಿಲ್ಲ.
ನಾನು ನನ್ನ ಗ್ರಾಮದ ಇತರರೊಂದಿಗೆ ಸ್ಮಶಾನ ಭೂಮಿಗೆ ಸಂಬಂಧಿಸಿದ ಬೇಡಿಕೆಯೊಂದಿಗೆ ಎಸ್ ಡಿಎಂ ಕಚೇರಿಗೆ ಹೋಗಿದ್ದೆ. ಆದರೆ ಎಸ್ ಡಿಎಂ ನನ್ನನ್ನು ಶಿಕ್ಷಿಸಿ ಪತ್ರವನ್ನು ಎಸೆದರು ಎಂದು ಸಂತ್ರಸ್ತ ವ್ಯಕ್ತಿ ಆರೋಪಿಸಿದ್ದಾರೆ.







