ಉತ್ತರ ಪ್ರದೇಶ: ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿದ ಯವಕನ ಕಾಲಿಗೆ ಗುಂಡಿಕ್ಕಿ ಬಂಧನ

ಸಾಂದರ್ಭಿಕ ಚಿತ್ರ
ಲಕ್ನೊ: ಮುಸ್ಲಿಮರಿಗೆ ನಿಂದಿಸಿದ್ದಾನೆ ಎನ್ನಲಾದ ಬಸ್ ನಿರ್ವಾಹಕನಿಗೆ ಹಲ್ಲೆ ನಡೆಸಿದ ಆರೋಪದಲ್ಲಿ 20 ವರ್ಷದ ಯುವಕ ಲಾರೆಬ್ ಹಶ್ಮಿಯನ್ನು ಉತ್ತರಪ್ರದೇಶ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಅನಂತರ ಆತನ ಬಲಗಾಲಿಗೆ ಗುಂಡು ಹಾರಿಸಿದ್ದಾರೆ ಹಾಗೂ ಆತ ಗುಂಡು ಹಾರಿಸಿದ ಕಾರಣಕ್ಕೆ ಪ್ರತಿ ದಾಳಿ ನಡೆಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಬಿಟೆಕ್ ವಿದ್ಯಾರ್ಥಿಯಾಗಿರುವ ಹಶ್ಮಿ ಬಸ್ ನಿರ್ವಾಹಕ ಹೃಷಿಕೇಶ್ ವಿಶ್ವಕರ್ಮ ಎಂಬವರಿಗೆ ಪ್ರಯಾಗ್ರಾಜ್ನಲ್ಲಿ ಶುಕ್ರವಾರ ಹಲ್ಲೆ ನಡೆಸಿದ್ದ ಎಂದು ಆರೋಪಿಸಲಾಗಿದೆ. ಇದರಿಂದ ವಿಶ್ವಕರ್ಮ ಅವರ ಕುತ್ತಿಗೆ ಹಾಗೂ ಕೈಗಳಿಗೆ ಗಾಯಗಳಾಗಿವೆ. ಆದರೆ, ಅವರ ಸ್ಥಿತಿ ಸ್ಥಿರವಾಗಿದೆ.
ಅನಂತರ ಹಶ್ಮಿ ಅವರನ್ನು ಸಂಜೆ ಬಂಧಿಸಲಾಯಿತು. ಈ ಸಂದರ್ಭ ಆತ ತಮ್ಮ ಮೇಲೆ ಗುಂಡು ಹಾರಿಸಿದ. ನಾವು ಪ್ರತಿದಾಳಿ ನಡೆಸಿದೆವು. ಇದರಿಂದ ಆತನ ಕಾಲಿಗೆ ಗಾಯವಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಈ ವಾರದ ಆರಂಭದಲ್ಲಿ ಟಿಕೆಟ್ ದರದ ಕುರಿತಂತೆ ಬಸ್ ನಿರ್ವಾಹಕ ಸಾಜಿದ್ ಹಾಗೂ ವೃದ್ಧರೋರ್ವರ ನಡುವೆ ವಾಗ್ವಾದ ನಡೆದಿತ್ತು. ಈ ಹಿನ್ನೆಲೆಯಲ್ಲಿ ವಿಶ್ವಕರ್ಮ ಅವರು ಗುರುವಾರ ಸಾಜಿದ್ ಹಾಗೂ ಮುಸ್ಲಿಮರನ್ನು ನಿಂದಿಸಿದ್ದಾರೆ ಎಂದು ಹೇಳಲಾಗಿದೆ.
‘‘ವಿಶ್ವ ಕರ್ಮ ನಿಂದಿಸುವ ಸಂದರ್ಭ ತನ್ನನ್ನು ಉಲ್ಲೇಖಿಸಿದ್ದರು ಎಂದು ತಾನು ಭಾವಿಸಿದ್ದೆ. ಇದರಿಂದ ಕೆರಳಿ ಆತನಿಗೊಂದು ಪಾಠ ಕಲಿಸಲು ನಿರ್ಧರಿಸಿದೆ ಹಾಗೂ ಆತನ ಮೇಲೆ ಹಲ್ಲೆ ನಡೆಸಲು ಯೋಜನೆ ರೂಪಿಸಿದೆ ಎಂದು ವಿಚಾರಣೆ ಸಂದರ್ಭ ಹಶ್ಮಿ ಹೇಳಿದ್ದಾನೆ’’ ಎಂದು ಪ್ರಯಾಗ್ ರಾಜ್ ಪೊಲೀಸ್ ಉಪ ಆಯುಕ್ತ ಅಜಿತ್ ಸಿಂಗ್ ಚೌಹಾನ್ ತಿಳಿಸಿದ್ದಾರೆ.







