Uttarakhand | ಜೋಶಿಮಠದ ಬಳಿ ಹೆಲಿಕಾಪ್ಟರ್ ಪತನ; ಪ್ರಯಾಣಿಕರೆಲ್ಲರೂ ಬೆಂಗಳೂರಿನವರು
ಹೆಲಿಕಾಪ್ಟರ್ ಬೆಟ್ಟಕ್ಕೆ ಅಪ್ಪಳಿಸಿರುವ ಶಂಕೆ; ಸಂಪರ್ಕ ಕಡಿತಗೊಂಡ ಸ್ಥಳದಲ್ಲಿ ಸೇನೆ, SDRFನಿಂದ ಶೋಧ

Photo Credit ; X
ಹೊಸದಿಲ್ಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪ ಶುಕ್ರವಾರ ಮಧ್ಯಾಹ್ನ ಆರು ಮಂದಿ ಇದ್ದ ಹೆಲಿಕಾಪ್ಟರ್ ಪತನಗೊಂಡಿದೆ. ಅದರಲ್ಲಿದ್ದ ಐವರು ಪ್ರಯಾಣಿಕರು ಬೆಂಗಳೂರಿನವರು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಪೈಲಟ್ ನ ಊರಿನ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಘಟನೆಯಲ್ಲಿ ಸಾವು-ನೋವು ಸಂಭವಿಸಿರುವ ಬಗ್ಗೆ ತಕ್ಷಣಕ್ಕೆ ದೃಢೀಕರಣ ದೊರೆತಿಲ್ಲ.
‘ಟ್ರಾನ್ಸ್ ಭಾರತ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್ ಬದರಿನಾಥದಿಂದ ಡೆಹ್ರಾಡೂನ್ ನ ಸಹಸ್ತ್ರಧಾರಾ ಹೆಲಿಪ್ಯಾಡ್ ಗೆ ತೆರಳುತ್ತಿತ್ತು. ಮಧ್ಯಾಹ್ನ ಸುಮಾರು 1.15ಕ್ಕೆ ಹಾರಾಟ ಆರಂಭಿಸಿದ್ದ ಹೆಲಿಕಾಪ್ಟರ್, 2.20ರ ವೇಳೆಗೆ ಜೋಶಿಮಠ ಕಣಿವೆಯ ಮೇಲೆ ಹಾರುತ್ತಿದ್ದಾಗ ಸಂಪರ್ಕ ಕಳೆದುಕೊಂಡಿತ್ತು. ಅದೇ ಸಮಯದಲ್ಲಿ ಅದರ ಹಾರಾಟದ ಮೇಲೆ ನಿಗಾ ಇರಿಸಿದ್ದ ಟ್ರ್ಯಾಕಿಂಗ್ ವ್ಯವಸ್ಥೆಯಲ್ಲಿಯೂ ಹೆಲಿಕಾಪ್ಟರ್ ನ ಸಂಪರ್ಕ ಕಡಿತಗೊಂಡಿತ್ತು ಎಂದು ತಿಳಿದುಬಂದಿದೆ.
ಜೋಶಿಮಠದ ಮಾರ್ವಾರಿ ಸೇತುವೆ ಸಮೀಪದ ಜೆ.ಪಿ. ವಿದ್ಯುತ್ ಸ್ಥಾವರದ ಬಳಿಯ ಬೆಟ್ಟದ ಇಳಿಜಾರಿಗೆ ಹೆಲಿಕಾಪ್ಟರ್ ಅಪ್ಪಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಪತನಗೊಂಡ ನಿಖರ ಸ್ಥಳವನ್ನು ಇನ್ನೂ ಪತ್ತೆಹಚ್ಚಲಾಗಿಲ್ಲ ಎಂದು ಉತ್ತರಾಖಂಡ ನಾಗರಿಕ ವಿಮಾನಯಾನ ಅಭಿವೃದ್ಧಿ ಪ್ರಾಧಿಕಾರ (ಯುಸಿಎಡಿಎ) ತಿಳಿಸಿದೆ. ಜೋಶಿಮಠದ ಸಮೀಪದ ಚಾಯ್ ಗ್ರಾಮದ ಬಳಿ ಹೆಲಿಕಾಪ್ಟರ್ ಅಪಘಾತ ಸಂಭವಿಸಿರುವ ಬಗ್ಗೆ ಮಾಹಿತಿ ಬಂದಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹೇಳಿದ್ದಾರೆ.
ಬೆಂಗಳೂರಿನ ಐವರು ಪ್ರಯಾಣಿಕರು
ಹೆಲಿಕಾಪ್ಟರ್ ನಲ್ಲಿ ಪೈಲಟ್ ಕ್ಯಾಪ್ಟನ್ ಹಿಮಾಂಶು ಮತ್ತು ಐವರು ಪ್ರಯಾಣಿಕರಿದ್ದರು. ಅವರನ್ನು ಪ್ರತಾಪ, ಅರುಣ್, ಶಂಕರ್ ಗೌಡ, ಸುಧೀರ್ ಕೆ. ಹಾಗೂ ಎಚ್.ಎಸ್. ನಟರಾಜ ಎಂದು ಗುರುತಿಸಲಾಗಿದೆ. ಈ ಐವರೂ ಬೆಂಗಳೂರಿನವರು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.
ಯುಸಿಎಡಿಎ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಜೈನ್ ಅವರು ಪ್ರಯಾಣಿಕರ ವಿವರಗಳನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ. ಹವಾಮಾನ ತಿಳಿಯಾದ ಕೂಡಲೇ ನಾಪತ್ತೆಯಾಗಿರುವ ಹೆಲಿಕಾಪ್ಟರ್ ಪತ್ತೆಗಾಗಿ ಮತ್ತೊಂದು ರಕ್ಷಣಾ ಹೆಲಿಕಾಪ್ಟರ್ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ಎಲ್ಲ ಹೆಲಿಕಾಪ್ಟರ್ಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಗೆ ಹಲವು ತಂಡಗಳು
ಚಮೋಲಿ ಜಿಲ್ಲಾಡಳಿತ, ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್), ಸೇನೆ ಮತ್ತು ಇಂಡೊ-ಟಿಬೆಟನ್ ಗಡಿ ಪೊಲೀಸ್ (ಐಟಿಬಿಪಿ) ಸಿಬ್ಬಂದಿ ಸ್ಥಳಕ್ಕೆ ತೆರಳಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ.
ಉತ್ತರಾಖಂಡದಲ್ಲಿ ಶುಕ್ರವಾರ ಮಳೆ ಮತ್ತು ಮೋಡ ಕವಿದ ವಾತಾವರಣವಿತ್ತು. ಕೇದಾರನಾಥದಲ್ಲಿ ಈ ಋತುವಿನ ಮೊದಲ ಭಾರಿ ಹಿಮಪಾತವೂ ವರದಿಯಾಗಿತ್ತು. ಹವಾಮಾನ ಇಲಾಖೆಯು ಬೆಟ್ಟದ ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿತ್ತು.
ಅಕ್ಟೋಬರ್ 29ರಂದು ಉತ್ತರಕಾಶಿ, ತೆಹ್ರಿ, ಹರಿದ್ವಾರ ಸೇರಿದಂತೆ ಎಂಟರಿಂದ ಒಂಬತ್ತು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇತ್ತು. ಅಕ್ಟೋಬರ್ 30ರಂದು ಕೂಡ ಇದೇ ರೀತಿಯ ಮಳೆಯ ಮುನ್ಸೂಚನೆ ನೀಡಲಾಗಿತ್ತು. ಕುಮಾವೂನ್ ಪ್ರದೇಶದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯನ್ನೂ ಇಲಾಖೆ ತಿಳಿಸಿತ್ತು. ಅಕ್ಟೋಬರ್ 31ರಂದು ಬೆಟ್ಟದ ಜಿಲ್ಲೆಗಳಲ್ಲಿ ಹಗುರದಿಂದ ಅತಿ ಹಗುರ ಮಳೆಯಾಗುವ ಹಾಗೂ ನವೆಂಬರ್ 1 ಮತ್ತು 2ರಂದು ಉತ್ತರದ ಬೆಟ್ಟದ ಜಿಲ್ಲೆಗಳ ಕೆಲವೆಡೆ ಚದುರಿದಂತೆ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿತ್ತು.
ಜಿಲ್ಲಾಧಿಕಾರಿ ಪ್ರಶಾಂತ್ ಆರ್ಯ ಅವರು ಗುರುವಾರ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರವನ್ನು (ಡಿಇಒಸಿ) ಸಕ್ರಿಯಗೊಳಿಸುವಂತೆ ಸೂಚಿಸಿದ್ದರು. ಗಂಗೋತ್ರಿ ಮತ್ತು ಯಮುನೋತ್ರಿ ದೇವಸ್ಥಾನಗಳ ಪರಿಸ್ಥಿತಿ ಹಾಗೂ ರಸ್ತೆ ಸಂಚಾರದ ಮೇಲೆ ನೇರ ಸಿಸಿಟಿವಿ ದೃಶ್ಯಗಳ ಮೂಲಕ ನಿಗಾ ಇರಿಸಲಾಗಿತ್ತು. ಯಾತ್ರಿಕರು ಚಳಿಯಿಂದ ರಕ್ಷಿಸಿಕೊಳ್ಳಲು ಅಗತ್ಯ ಮುನ್ನೆಚ್ಚರಿಕೆ ವಹಿಸುವಂತೆ ಹಾಗೂ ಜಿಲ್ಲಾಡಳಿತ ಮತ್ತು ಪೊಲೀಸರ ಸೂಚನೆಗಳನ್ನು ಪಾಲಿಸುವಂತೆ ಸಲಹೆ ನೀಡಲಾಗಿತ್ತು.
ಕಾರ್ಯಾಚರಣೆ ಮೇಲೆ ಸಿಎಂ ನಿಗಾ
ಹೆಲಿಕಾಪ್ಟರ್ ಅಪಘಾತದ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಜಿಲ್ಲಾಡಳಿತ, ವಿಪತ್ತು ನಿರ್ವಹಣಾ ಇಲಾಖೆ ಮತ್ತು ಎಸ್ಡಿಆರ್ಎಫ್ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ.
‘ಪರಿಸ್ಥಿತಿಯನ್ನು ನಾನು ವೈಯಕ್ತಿಕವಾಗಿ ಗಮನಿಸುತ್ತಿದ್ದೇನೆ. ಗಂಭೀರವಾಗಿ ಗಾಯಗೊಂಡವರನ್ನು ಉತ್ತಮ ಚಿಕಿತ್ಸೆಗಾಗಿ ತಕ್ಷಣವೇ ಉನ್ನತ ವೈದ್ಯಕೀಯ ಸೌಲಭ್ಯವಿರುವ ಆಸ್ಪತ್ರೆಗೆ ವಿಮಾನದ ಮೂಲಕ ಕರೆದೊಯ್ಯುವಂತೆ ಸೂಚಿಸಿದ್ದೇನೆ. ಹೆಲಿಕಾಪ್ಟರ್ನಲ್ಲಿರುವ ಎಲ್ಲ ಪ್ರಯಾಣಿಕರ ಸುರಕ್ಷತೆಗಾಗಿ ಪ್ರಾರ್ಥಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.






