ಉತ್ತರಾಖಂಡ | ಮದ್ಯಪಾನ ಮಾಡಿ ಕಾರು ಚಲಾಯಿಸಿದ್ದರಿಂದ ಸಂಭವಿಸಿದ ಅಪಘಾತದಲ್ಲಿ ಪತ್ರಕರ್ತ ರಾಜೀವ್ ಪ್ರತಾಪ್ ಮೃತ್ಯು: ಮಾಹಿತಿ ನೀಡಿದ ತನಿಖಾ ತಂಡ

ರಾಜೀವ್ ಪ್ರತಾಪ್ (Photo: @IIMCAA)
ಉತ್ತರಾಖಂಡ : ಪತ್ರಕರ್ತ ರಾಜೀವ್ ಪ್ರತಾಪ್ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದರಿಂದ ಉಂಟಾದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವಿಶೇಷ ತನಿಖಾ ತಂಡ ಅಂತಿಮ ತೀರ್ಮಾನಕ್ಕೆ ಬಂದಿದೆ ಎಂದು ವರದಿಯಾಗಿದೆ.
ಪತ್ರಕರ್ತ ರಾಜೀವ್ ಪ್ರತಾಪ್ ಸೆಪ್ಟೆಂಬರ್ 18ರಂದು ನಾಪತ್ತೆಯಾಗಿದ್ದರು. ಅವರ ವಾಹನ ಸೆಪ್ಟೆಂಬರ್ 20ರಂದು ಭಾಗೀರಥಿ ನದಿ ದಂಡೆಯಲ್ಲಿ ಪತ್ತೆಯಾಗಿತ್ತು. ಆದರೆ ಅವರ ಮೃತದೇಹ ಸೆಪ್ಟೆಂಬರ್ 28 ರಂದು ಉತ್ತರಕಾಶಿ ಜಿಲ್ಲೆಯ ಜೋಶಿಯಾರಾ ಅಣೆಕಟ್ಟಿನ ಬಳಿ ಪತ್ತೆಯಾಗಿತ್ತು.
ರಾಜೀವ್ ಪ್ರತಾಪ್ ಸೆಪ್ಟೆಂಬರ್ 18ರಂದು ಉತ್ತರಕಾಶಿ ಬಸ್ ನಿಲ್ದಾಣದಲ್ಲಿರುವ ಚೌಹಾಣ್ ಹೋಟೆಲ್ನಲ್ಲಿ ತನ್ನ ಸ್ನೇಹಿತನೊಂದಿಗೆ ಊಟ ಮಾಡಿದ ನಂತರ ಸ್ನೇಹಿತನ ಕಾರಿನಲ್ಲಿ ತೆರಳಿದ್ದರು. ಆದರೆ ಆ ಬಳಿಕ ಅವರು ವಾಪಾಸ್ಸಾಗಿರಲಿಲ್ಲ. ಅವರ ಸ್ನೇಹಿತ ಸೆಪ್ಟೆಂಬರ್ 19ರಂದು ಪೊಲೀಸರು ಮತ್ತು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. 10 ದಿನಗಳ ನಂತರ ಅವರ ಮೃತದೇಹ ಪತ್ತೆಯಾಗಿತ್ತು.
"ಕೆಲವು ಸುದ್ದಿ ವರದಿ ಮಾಡಿದ ನಂತರ ಅವರಿಗೆ ಬೆದರಿಕೆ ಕರೆಗಳು ಬರುತ್ತಿತ್ತು" ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದರು. ಕೆಲವು ಪತ್ರಕರ್ತರ ಸಂಘಟನೆಗಳು ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿತ್ತು. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಎದೆ ಮತ್ತು ಹೊಟ್ಟೆಗೆ ಆಂತರಿಕ ಗಾಯಗಳಾಗಿದ್ದರಿಂದ ರಾಜೀವ್ ಪ್ರತಾಪ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿತ್ತು.





