Uttarakhand | ಚಾರಣಕ್ಕೆ ತೆರಳಿದ್ದ ಎಂಬಿಎ ವಿದ್ಯಾರ್ಥಿನಿ ನಾಪತ್ತೆ : 6 ದಿನಗಳಿಂದ ಮುಂದುವರಿದ ಶೋಧ

Photo | NDTV
ಡೆಹ್ರಾಡೂನ್: ಆರು ದಿನಗಳ ಹಿಂದೆ ಉತ್ತರಾಖಂಡದ ದಯಾರ ಬುಗ್ಯಾಲ್ ಗೆ ಚಾರಣಕ್ಕೆಂದು ತೆರಳಿ ನಾಪತ್ತೆಯಾಗಿದ್ದ 24 ವರ್ಷದ ಎಂಬಿಎ ವಿದ್ಯಾರ್ಥಿನಿಗಾಗಿ ವ್ಯಾಪಕ ಶೋಧ ಕಾರ್ಯ ನಡೆಯುತ್ತಿದೆ. ಈ ನಡುವೆ, ವಿದ್ಯಾರ್ಥಿನಿ ಕುಟುಂಬದ ಸದಸ್ಯರು ನೀಡಿದ ದೂರಿನ ಮೇರೆಗೆ ಆಕೆಯ ಇಬ್ಬರು ಸ್ನೇಹಿತರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ.
ನೈನಿತಾಲ್ ನ ನಿವಾಸಿಯಾದ ಬಬಿತಾ ಪಾಂಡೆ ತನ್ನ ಇಬ್ಬರು ಸ್ನೇಹಿತರಾದ ಉತ್ತರಾಖಂಡದ ಉಧಂ ಸಿಂಗ್ ನಗರ್ ನ ನಿವಾಸಿ ಹರ್ಮನ್ ಪಾಲ್ ಸಿಂಗ್ ಹಾಗೂ ಉತ್ತರ ಪ್ರದೇಶದ ಶಹಜಹಾನ್ ಪುರ್ ಜಿಲ್ಲೆಯ ಹರ್ಮನ್ ಪ್ರೀತ್ ಸಿಂಗ್ ಎಂಬವರೊಂದಿಗೆ ಉತ್ತರ ಕಾಶಿಗೆ ತೆರಳಿದ್ದರು.
ಅವರು ಮೊದಲು ಮೇ 25ರಂದು ಡೆಹ್ರಾಡೂನ್ ಗೆ ತೆರಳಿದ್ದರು. ಬಳಿಕ, ಹರ್ಸಿಲ್, ಗಂಗೋತ್ರಿ ಮತ್ತು ಸಮೀಪದ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ್ದರು. ಮೇ 28ರಂದು ರೈತಾಲ್ ಗ್ರಾಮಕ್ಕೆ ತೆರಳಿದ್ದ ಈ ಮೂವರು, ಅಲ್ಲೇ ಉಳಿದುಕೊಂಡಿದ್ದರು. ಈ ಕುರಿತ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಒಂದು ದಿನದ ಬಳಿಕ ಅವರೆಲ್ಲ ರೈತಾಲ್ ನಿಂದ ಉತ್ತರಾಖಂಡದ ಜನಪ್ರಿಯ ಚಾರಣ ಪ್ರದೇಶವಾದ ದಯಾರ ಬುಗ್ಯಾಲ್ ಗೆ ಚಾರಣ ಪ್ರಾರಂಭಿಸಿದ್ದಾರೆ. ಆ ರಾತ್ರಿ ಅವರೆಲ್ಲ ಗೋಯಿ ಬೇಸ್ ಕ್ಯಾಂಪ್ ನಲ್ಲಿ ಉಳಿದುಕೊಂಡಿದ್ದಾರೆ. ಮಧ್ಯರಾತ್ರಿ ವೇಳೆ ಆ ಕ್ಯಾಂಪ್ ನಿಂದ ಬಬಿತಾ ಪಾಂಡೆ ನಾಪತ್ತೆಯಾಗಿದ್ದಾರೆ ಎಂದು ಉತ್ತರ ಕಾಶಿ ಪೊಲೀಸ್ ವರಿಷ್ಠಾಧಿಕಾರಿ ಕಮಲೇಶ್ ಉಪಾಧ್ಯಾಯ್ ತಿಳಿಸಿದ್ದಾರೆ.
ಇಂಡೊ-ಟಿಬೆಟಿಯನ್ ಗಡಿ ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ, ಪೊಲೀಸರು, ಅರಣ್ಯ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ತಂಡಗಳು ಸೇರಿದಂತೆ ಸುಮಾರು 150 ಸದಸ್ಯರ ತಂಡ ವಿದ್ಯಾರ್ಥಿನಿಗಾಗಿ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಬಬಿತಾ ಪಾಂಡೆಯನ್ನು ಪತ್ತೆ ಹಚ್ಚಲು ಐದು ಕಿಮೀ ವ್ಯಾಪ್ತಿಯ ದಟ್ಟಾರಣ್ಯ, ಚಾರಣ ಮಾರ್ಗಗಳು ಹಾಗೂ ಗುಹೆಗಳಲ್ಲಿ ಅವರು ಶ್ವಾನ ದಳ, ಡ್ರೋನ್ ಕಣ್ಗಾವಲು ಬಳಸುತ್ತಿದ್ದಾರೆ.
ಗೋಯಿ ಕ್ಯಾಂಪ್ ಸ್ಥಳದ ಬಳಿಯಿರುವ ಕೆರೆಯಲ್ಲೂ ಆರು ಮಂದಿ ಮುಳುಗು ತಜ್ಞರ ತಂಡ ಶೋಧ ಕಾರ್ಯ ನಡೆಸಿದೆ.
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಬಬಿತಾ ಪಾಂಡೆಯ ಭಾವಚಿತ್ರವನ್ನೂ ಬಿಡುಗಡೆ ಮಾಡಿರುವ ಪೊಲೀಸರು, ಆಕೆಯನ್ನು ಪತ್ತೆ ಹಚ್ಚಲು ನೆರವು ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.






