Uttarakhand | ರಾಜಾಜಿ ಅಭಯಾರಣ್ಯದಲ್ಲಿ ಸಚಿವರೊಬ್ಬರ ಪುತ್ರನ ಮದುವೆಗೆ ಸಿದ್ಧತೆ: ಅರಣ್ಯ ಇಲಾಖೆಯಿಂದ ಕ್ರಮ

Photo : newindianexpress
ಡೆಹ್ರಾಡೂನ್: ಆನೆ ಮತ್ತು ಹುಲಿಗಳ ಚಲನವಲನಕ್ಕೆ ಹೆಸರುವಾಸಿಯಾದ ಪರಿಸರ ಸೂಕ್ಷ್ಮ ವಲಯದಲ್ಲಿ ಉತ್ತರಾಖಂಡದ ರಾಜಾಜಿ ಅಭಯಾರಣ್ಯದ ಪ್ರದೇಶದಲ್ಲಿರುವ ಸುರೇಶ್ವರಿ ದೇವಿ ದೇವಸ್ಥಾನದಲ್ಲಿ ಸಚಿವರೊಬ್ಬರ ಮಗನ ಅದ್ದೂರಿ ವಿವಾಹ ಸಮಾರಂಭ ನಡೆಸಲು ಕೈಗೊಂಡಿದ್ದ ಸಿದ್ಧತೆಗಳು ವಿವಾದಕ್ಕೆ ಕಾರಣವಾಗಿದ್ದು, ಅರಣ್ಯ ಇಲಾಖೆ ತೆರವುಗೊಳಿಸಿದೆ.
ಉತ್ತರಾಖಂಡ ಸಮಾಜ ಕಲ್ಯಾಣ ಸಚಿವ ಅವರ ಪುತ್ರ ಅನುಜ್ ಅವರ ವಿವಾಹವನ್ನು ಹರಿದ್ವಾರ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶದ ಈ ದೇವಸ್ಥಾನದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ವನ್ಯಜೀವಿಗಳ ಸಂಚಾರಕ್ಕೆ ಪ್ರಮುಖವಾದ ಪರಿಸರ ಸೂಕ್ಷ್ಮ ವಲಯದಲ್ಲೇ ಪೆಂಡಾಲ್, ವೇದಿಕೆ, ಕೂಲರ್ ಗಳು ಮತ್ತು ಜನರೇಟರ್ ಗಳನ್ನು ಅಳವಡಿಸಲಾಗಿತ್ತು.
ಈ ಸಿದ್ಧತೆಗಳಿಂದ ವನ್ಯಜೀವಿ ಆವಾಸಸ್ಥಾನಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹಾಗೂ ವನ್ಯಜೀವಿ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಇದರ ಹಿನ್ನೆಲೆಯಲ್ಲಿ, ಅಭಯಾರಣ್ಯ ಆಡಳಿತವು ಸ್ಥಳಕ್ಕೆ ತೆರಳಿ ಎಲ್ಲಾ ಸಿದ್ಧತೆಗಳನ್ನು ತೆರವುಗೊಳಿಸಿ, ದೇವಾಲಯ ಸಮಿತಿ ಅಧಿಕಾರಿಗಳ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ.
ರವಿವಾರ ಮಧ್ಯಾಹ್ನ ಸಚಿವ ಖಾಜನ್ ದಾಸ್ ತಮ್ಮ ಮಗ ಮತ್ತು ವಧುವಿನ ಕುಟುಂಬದೊಂದಿಗೆ ದೇವಸ್ಥಾನಕ್ಕೆ ಆಗಮಿಸಿದರು. ವಿವಾದದ ಹಿನ್ನೆಲೆಯಲ್ಲಿ ಮದುವೆ ಸಮಾರಂಭವನ್ನು ಸಂಕ್ಷಿಪ್ತಗೊಳಿಸಿ, ಕೇವಲ ಪ್ರಾರ್ಥನೆ ಮತ್ತು ವಿವಾಹ ಪ್ರತಿಜ್ಞೆಗಳಿಗೆ ಮಾತ್ರ ಸೀಮಿತಗೊಳಿಸಲಾಯಿತು ಎಂದು ತಿಳಿದು ಬಂದಿದೆ.
ಸಚಿವ ದಾಸ್ ಪ್ರತಿಕ್ರಿಯಿಸಿ, ತಾವು ವರ್ಷಗಳಿಂದ ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವುದಾಗಿ ಹೇಳಿದರು. “ನನ್ನ ಮಗನ ಆರೋಗ್ಯ ಸುರೇಶ್ವರಿ ದೇವಿಯ ಆಶೀರ್ವಾದದಿಂದ ಸುಧಾರಿಸಿದೆ. ಅದಕ್ಕಾಗಿ ದೇವಸ್ಥಾನದಲ್ಲೇ ಮದುವೆ ನಡೆಸಲು ಬಯಸಿದ್ದೆ,” ಎಂದರು. ಅಗತ್ಯ ಅನುಮತಿ ಪ್ರಕ್ರಿಯೆಗಳ ಬಗ್ಗೆ ತಿಳಿದಿರಲಿಲ್ಲವೆಂದೂ ತಿಳಿಸಿದ್ದಾರೆ.
ಅಧಿಕಾರಿಗಳು ಮೌನವಾಗಿ ಅನುಮೋದನೆ ನೀಡಿದ್ದಾರೆ ಎಂದು ಅವರು ಆರೋಪಿಸಿದರು. “ಕೆಲವು ದಿನಗಳ ಹಿಂದೆ ದೇವಸ್ಥಾನಕ್ಕೆ ಭೇಟಿ ನೀಡಿದಾಗ ರಾಜಾಜಿ ಅಧಿಕಾರಿಗಳು ನನ್ನೊಂದಿಗಿದ್ದರು. ಅರಣ್ಯ ನಿರ್ದೇಶಕರು ಕಾರ್ಯಕ್ರಮಕ್ಕೆ ಒಪ್ಪಿಗೆ ಸೂಚಿಸಿದ್ದರು,” ಎಂದರು. ನಂತರದ ವಿರೋಧವನ್ನು “ರಾಜಕೀಯ ಪಿತೂರಿ” ಎಂದು ಆರೋಪಿಸಿದ್ದಾರೆ.
ಆದರೆ, ಅಭಯಾರಣ್ಯ ಆಡಳಿತವು ಈ ಹೇಳಿಕೆಗಳನ್ನು ತಳ್ಳಿಹಾಕಿದೆ. “ರಾಜಾಜಿ ಹುಲಿ ಮೀಸಲು ಪ್ರದೇಶದೊಳಗೆ ಮದುವೆಗಳಿಗೆ ಅನುಮತಿ ಇಲ್ಲ. ಯಾವುದೇ ಅಧಿಕೃತ ಅನುಮತಿ ಪಡೆಯದೆ ಸಿದ್ಧತೆಗಳನ್ನು ಮಾಡಲಾಗಿತ್ತು. ಮಾಹಿತಿ ಸಿಕ್ಕ ತಕ್ಷಣ ನಮ್ಮ ತಂಡ ತೆರಳಿ ಎಲ್ಲಾ ಸಿದ್ಧತೆಗಳನ್ನು ತೆರವುಗೊಳಿಸಿದೆ,” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಘಟನೆಯ ಹಿನ್ನೆಲೆಯಲ್ಲಿ ರವಿವಾರ ಬೆಳಿಗ್ಗೆ ಅಭಯಾರಣ್ಯದ ದ್ವಾರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದ್ದು, ಭಕ್ತರಿಗೆ ಅನಾನುಕೂಲ ಉಂಟಾಯಿತು. ಮಧ್ಯಾಹ್ನದ ವೇಳೆಗೆ ಪ್ರವೇಶವನ್ನು ಪುನಃ ಆರಂಭಿಸಲಾಯಿತು.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಅರಣ್ಯ ಪಡೆ ಮುಖ್ಯಸ್ಥ ರಂಜನ್ ಮಿಶ್ರಾ ಅವರು, “ದೇವಾಲಯವು ಅಭಯಾರಣ್ಯದ ಮಧ್ಯಭಾಗದಲ್ಲಿರುವುದರಿಂದ ಇಂತಹ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ. ಎಲ್ಲಾ ಡೇರೆಗಳು ಮತ್ತು ಉಪಕರಣಗಳನ್ನು ತೆರವುಗೊಳಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ವಸ್ತುಗಳನ್ನು ಸಂರಕ್ಷಿತ ಪ್ರದೇಶಕ್ಕೆ ಹೇಗೆ ಸಾಗಿಸಲಾಗಿದೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ,” ಎಂದು ಹೇಳಿದರು.






