ವಿಬಿ ಜಿ ರಾಮ್ ಜಿ ಯೋಜನೆಯಿಂದ ರಾಜ್ಯಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ; ಉದ್ಯೋಗ ಸೃಷ್ಟಿಯಲ್ಲೂ ವಿಫಲ: ವರದಿ

ಸಾಂದರ್ಭಿಕ ಚಿತ್ರ Photo Credit : x.com/Vijaykulange
ಹೊಸದಿಲ್ಲಿ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಿಂದ ನಿಂದ ವಿಬಿ ಜಿ ರಾಮ್ ಜಿ ಆಗಿ ಬದಲಾದ ಯೋಜನೆಯು ರಾಜ್ಯ ಸರ್ಕಾರಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಹೇರಲಿದೆ. ಅಷ್ಟೇ ಅಲ್ಲದೆ, ಗ್ರಾಮೀಣ ಪ್ರದೇಶಗಳು ಹವಾಮಾನ ವೈಪರೀತ್ಯದಿಂದ ತತ್ತರಿಸುತ್ತಿರುವ ಈ ಸಮಯದಲ್ಲಿ, ಇದು ಉದ್ಯೋಗ ಸೃಷ್ಟಿಯಲ್ಲೂ ವಿಫಲವಾಗಬಹುದು ಎಂದು Systematix Group ಅಧ್ಯಯನ ವರದಿ ತಿಳಿಸಿದೆ.
ವರದಿಯ ಪ್ರಕಾರ , ವಿಬಿ ಜಿ ರಾಮ್ ಜಿ ಯೋಜನೆಯಡಿ ರಾಜ್ಯ ಸರ್ಕಾರಗಳು 2026-27ರ ಹಣಕಾಸು ವರ್ಷದಲ್ಲಿ ಸುಮಾರು 35,300 ಕೋಟಿ ರೂ.ಗಳನ್ನು ವೆಚ್ಚ ಮಾಡಬೇಕಾಗುತ್ತದೆ. ಇದು ಕಳೆದ ವರ್ಷ ಎಂಜಿಎನ್ಆರ್ಇಜಿಎ ಅಡಿಯಲ್ಲಿ ವೆಚ್ಚ ಮಾಡಿದ 8,690 ಕೋಟಿ ರೂ.ಗಳಿಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಾಗಿದೆ. ಈ ವೆಚ್ಚದ ಏರಿಕೆಯು ಪಶ್ಚಿಮ ಬಂಗಾಳ (24 ಪಟ್ಟು), ಉತ್ತರ ಪ್ರದೇಶ (21.3 ಪಟ್ಟು), ಪಂಜಾಬ್ (6 ಪಟ್ಟು) ಮತ್ತು ಕರ್ನಾಟಕ (5.6 ಪಟ್ಟು) ರಾಜ್ಯಗಳಲ್ಲಿ ತೀವ್ರವಾಗಿರಲಿದೆ .
ರಾಜ್ಯಗಳ ಮೇಲೆ ಆರ್ಥಿಕ ಹೊರೆ ಹೆಚ್ಚಾಗುತ್ತಿದ್ದರೂ, ಗ್ರಾಮೀಣ ಉದ್ಯೋಗ ಸೃಷ್ಟಿ ಮಾತ್ರ ಕುಸಿಯುತ್ತಿದೆ. 2026-27ರ ಮೊದಲ ತ್ರೈಮಾಸಿಕದಲ್ಲಿ ಕೇವಲ 622.6 ದಶಲಕ್ಷ ವ್ಯಕ್ತಿ-ದಿನಗಳ ಕೆಲಸ ಸೃಷ್ಟಿಯಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸುಮಾರು 40% ಕಡಿಮೆಯಾಗಿದೆ. ಕಳೆದ 12 ತಿಂಗಳುಗಳ ಸರಾಸರಿಯು ಹಿಂದಿನ 12 ತಿಂಗಳುಗಳಿಗಿಂತ ಸುಮಾರು 32% ಕಡಿಮೆಯಾಗಿದೆ. ಈ ವ್ಯಕ್ತಿ-ದಿನಗಳು ಕಳೆದ 12 ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ತಲುಪಿವೆ ಎಂದು Systematix Group ನ Institutional Equities ವಿಭಾಗದ ಮುಖ್ಯಸ್ಥರಾದ ಧನಂಜಯ್ ಸಿನ್ಹಾ ಹೇಳಿದ್ದಾರೆ.






