ಕೇಂದ್ರ ಬಜೆಟ್ ಟೀಕಿಸಿದವರನ್ನು ಟ್ರೋಲ್ ಮಾಡಿದ ಬಿಜೆಪಿಯ ಅಮಿತ್ ಮಾಳವೀಯಗೆ ಹಿರಿಯ ಆರೆಸ್ಸೆಸ್ ನಾಯಕನ ಪಾಠ

ರತನ್ ಶಾರ್ದ | PC : scroll.in
ಹೊಸದಿಲ್ಲಿ: ಮಂಗಳವಾರ ಮಂಡನೆಯಾದ ಕೇಂದ್ರ ಬಜೆಟ್ನ ಒಂದು ಅಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಾಮಾಜಿಕ ಜಾಲತಾಣಿಗರನ್ನು ಟ್ರೋಲ್ ಮಾಡಿದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅವರನ್ನು ಹಿರಿಯ ಆರೆಸ್ಸೆಸ್ ನಾಯಕ ಹಾಗೂ ಲೇಖಕ ರತನ್ ಶಾರ್ದ ಟೀಕಿಸಿದ್ದಾರೆ.
ಆಸ್ತಿ ಮಾರಾಟಗಳ ವೇಳೆ ಇಂಡೆಕ್ಸೇಶನ್ ತೆಗೆದುಹಾಕುವ ಸರ್ಕಾರದ ನಿರ್ಧಾರವನ್ನು ಹಲವು ಮಂದಿ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಮಾಳವೀಯ, “ಇಂದು ರಾತ್ರಿ ಎಲ್ಲರೂ ಇಂಡೆಕ್ಸೇಶನ್ ತಜ್ಞರಾಗಿದ್ದಾರೆ,” ಎಂದು ವ್ಯಂಗ್ಯವಾಡಿದ್ದರು. ಈ ಪೋಸ್ಟ್ ಅನ್ನು ಇದೀಗ ಡಿಲೀಟ್ ಮಾಡಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ್ದ ರತನ್ ಶಾರ್ದ, "ಬಿಜೆಪಿ ಐಟಿ ಸೆಲ್ನ ಧೋರಣೆ ಗಂಭೀರ ಸಮಸ್ಯೆ" ಎಂದಿದ್ದಾರೆ.
ಬಜೆಟ್ನ ಉತ್ತಮ ಅಂಶಗಳ ಬಗ್ಗೆ ಸರಳೀಕೃತ ಸಂವಹನದ ಬದಲು ಅವರು ನಾಗರಿಕರನ್ನು ಟ್ರೋಲ್ ಮಾಡುತ್ತಿದ್ದಾರೆ. ಅವರ ಆತಂಕದ ಕುರಿತಂತೆ ಉತ್ತರ ನೀಡಿ, ಅವರನ್ನು ಅವಮಾನಿಸಬೇಡಿ, ಪ್ರಿಯ ಅಮಿತ್ ಮಾಳವೀಯ," ಎಂದು ರತನ್ ಶಾರ್ದ ಟ್ವೀಟ್ ಮಾಡಿದ್ದಾರೆ.
ಬಿಜೆಪಿಯನ್ನು ರತನ್ ಶಾರ್ದ ಟೀಕಿಸಿದ್ದು ಇದು ಎರಡನೇ ಬಾರಿ. ಜೂನ್ 8ರಂದು ಆರ್ಗನೈಸರ್ ಅಂಕಣದಲ್ಲಿ ಅವರು ಬಿಜೆಪಿ ಕುರಿತು ಪ್ರತಿಕ್ರಿಯಿಸಿ “2024 ಲೋಕಸಭಾ ಚುನಾವಣಾ ಫಲಿತಾಂಶಗಳು ಅತಿಯಾದ ಆತ್ಮವಿಶ್ವಾಸ ಹೊಂದಿದ್ದ ಬಿಜೆಪಿ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ವಾಸ್ತವದ ಪರಿಚಯವಾಗಿದೆ. ಪ್ರಧಾನಿ ಮೋದಿಯ 400+ ಕರೆ ಅವರಿಗೆ ಒಂದು ಲಕ್ಷ್ಯ ಮತ್ತು ವಿಪಕ್ಷಗಳಿಗೆ ಸವಾಲು ಎಂದು ಅವರು ಅರಿಯಲಿಲ್ಲ.” ಎಂದು ಬರೆದಿದ್ದರು.







