ಉಪರಾಷ್ಟ್ರಪತಿ ಚುನಾವಣೆ | ಪ್ರತಿಪಕ್ಷ ಸದಸ್ಯರಿಂದ ಅಡ್ಡ ಮತದಾನ!

PC : PTI
ಹೊಸದಿಲ್ಲಿ,ಸೆ.9: ಮಂಗಳವಾರ ನಡೆದ ಚುನಾವಣೆಯಲ್ಲಿ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿ ಬಿ.ಸುದರ್ಶನ್ ರೆಡ್ಡಿಯವರನ್ನು ಸೋಲಿಸಿದ ಎನ್ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಅವರು ಭಾರತದ 15ನೇ ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಮತದಾನ ಮುಗಿದ ಕೆಲವೇ ಸಮಯದ ಬಳಿಕ ರಾಧಾಕೃಷ್ಣನ್ ವಿಜೇತರಾಗಿದ್ದಾರೆ ಎಂದು ಘೋಷಿಸಲಾಯಿತು. ಅವರು 452 ಮತಗಳನ್ನು ಗಳಿಸಿದ್ದರೆ ಸುದರ್ಶನ ರೆಡ್ಡಿಯವರಿಗೆ 300 ಮತಗಳು ಬಿದ್ದಿವೆ.
ಪ್ರಸ್ತುತ ಮಹಾರಾಷ್ಟ್ರದ ರಾಜ್ಯಪಾಲರಾಗಿರುವ 67ರ ಹರೆಯದ ರಾಧಾಕೃಷ್ಣನ್ ಎರಡನೇ ಅತ್ಯುನ್ನತ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಲಿರುವ ತಮಿಳುನಾಡಿನ ಮೂರನೇ ನಾಯಕರಾಗಿದ್ದಾರೆ.
ಚುನಾವಣಾಧಿಕಾರಿ ಹಾಗೂ ರಾಜ್ಯಸಭಾ ಮಹಾ ಕಾರ್ಯದರ್ಶಿ ಪಿ.ಸಿ.ಮೋದಿ ಅವರು ರಾಧಾಕೃಷ್ಣನ್ ಅವರ ಆಯ್ಕೆಯನ್ನು ಘೋಷಿಸಿದರು.
ಗೌಂಡರ್-ಕೊಂಗು ವೆಲ್ಲಾರ್ ಒಬಿಸಿ ಸಮುದಾಯಕ್ಕೆ ಸೇರಿದ ರಾಧಾಕೃಷ್ಣನ್ ಅವರು ಉಪರಾಷ್ಟ್ರಪತಿ ಹುದ್ದೆಗೆ ತನ್ನ ಅಭ್ಯರ್ಥಿ ಎಂದು ಎನ್ಡಿಎ ಆ.17ರಂದು ಹೆಸರಿಸಿತ್ತು. ಅವರ ಪ್ರತಿಸ್ಪರ್ಧಿಯಾಗಿದ್ದ ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಾಧೀಶ ಸುದರ್ಶನ ರೆಡ್ಡಿ ಅವರೂ ದಕ್ಷಿಣ ಭಾರತದವರೇ ಆಗಿದ್ದಾರೆ.
ಮತದಾನ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಆರಂಭಗೊಂಡಿದ್ದು ಸಂಜೆ ಐದು ಗಂಟೆಯವರೆಗೂ ಮುಂದುವರಿದಿತ್ತು. ರಾಜ್ಯಸಭೆ ಮತ್ತು ಲೋಕಸಭೆಯ ಎಲ್ಲ ಸದಸ್ಯರು ಹಾಜರಿದ್ದರು.
ಉಪರಾಷ್ಟ್ರಪತಿ ಚುನಾವಣೆಗೆ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರು ಸೇರಿದಂತೆ ಒಟ್ಟು 781 ಮತದಾರರಿದ್ದು,ಒಟ್ಟು 315 ಪ್ರತಿಪಕ್ಷ ಸದಸ್ಯರು ಮತ ಚಲಾಯಿಸಿದ್ದರು.
ಕೊಯಮತ್ತೂರಿನಿಂದ ಎರಡು ಸಲ ಲೋಕಸಭಾ ಸದಸ್ಯರಾಗಿರುವ ರಾಧಾಕೃಷ್ಣನ್ ಸುದೀರ್ಘ ಕಾಲದಿಂದ ಬಿಜೆಪಿಯೊಂದಿಗೆ ಗುರುತಿಸಿಕೊಂಡಿದ್ದಾರೆ. 1998ರಲ್ಲಿ ಅಟಲ್ ಬಿಹಾರಿ ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಅವರು ಕೇಂದ್ರ ಸಚಿವ ಹುದ್ದೆಯ ಸಮೀಪ ಬಂದಿದ್ದರೂ ಆಗಿನ ಬಿಜೆಪಿ ಸದನ ನಾಯಕರಿಂದ ಅವರ ಹೆಸರಿನ ಕುರಿತು ಗೊಂದಲದಿಂದಾಗಿ ಸಚಿವ ಹುದ್ದೆಯನ್ನು ತಮಿಳರೇ ಆದ ಪೊನ್ ರಾಧಾಕೃಷ್ಣನ್ ಅವರಿಗೆ ಕಳೆದುಕೊಳ್ಳಬೇಕಾಯಿತು.
ಆರೆಸ್ಸೆಸ್ ನೊಂದಿಗೆ ರಾಜಕೀಯ ವೃತ್ತಿ ಜೀವನವನ್ನು ಆರಂಭಿಸಿದ್ದ ರಾಧಾಕೃಷ್ಣನ್ ಕ್ರಮೇಣ ಸಂಘದಲ್ಲಿ ಮತ್ತು ಬಿಜೆಪಿಯಲ್ಲಿ ಉನ್ನತ ಹುದ್ದೆಗಳಿಗೆ ಏರುವ ಮೂಲಕ ಪಕ್ಷದಲ್ಲಿ ಮತ್ತು ಸರಕಾರದಲ್ಲಿ ಸ್ವೀಕಾರಾರ್ಹತೆಯನ್ನು ಗಳಿಸಿದ್ದರು.
► ಕಾಡಿದ ಅಡ್ಡಮತದಾನ
ಸುದರ್ಶನ ಅವರ ಹೋರಾಟ ಇಂಡಿಯಾ ಮೈತ್ರಿಕೂಟದ ಒಗ್ಗಟ್ಟಿಗೆ ನಿದರ್ಶನವಾಗಿತ್ತಾದರೂ ಇಲ್ಲೂ ಅಡ್ಡಮತದಾನ ಕಾಡಿತ್ತು.
ಒಟ್ಟು 767 ಮತದಾರರು ಮತಗಳನ್ನು ಚಲಾಯಿಸಿದ್ದು,15 ಮತಗಳು ಅಸಿಂಧುಗೊಂಡಿದ್ದವು. ರಾಧಾಕೃಷ್ಣನ್ ಮೊದಲ ಪ್ರಾಶಸ್ತ್ಯದ 452 ಮತಗಳನ್ನು ಮತ್ತು ಸುದರ್ಶನ ರೆಡ್ಡಿ 300 ಮತಗಳನ್ನು ಪಡೆದಿದ್ದರು. ಗೆಲುವಿಗೆ 377 ಮತಗಳು ಅಗತ್ಯವಾಗಿದ್ದವು.
ಉಭಯ ಸದನಗಳಲ್ಲಿ ಎನ್ಡಿಎ ಬಲದ ಪ್ರಕಾರ ರಾಧಾಕೃಷ್ಣನ್ ಕನಿಷ್ಠ 427 ಮತಗಳನ್ನು ಪಡೆಯುವ ನಿರೀಕ್ಷೆಯಿತ್ತು. ವೈಎಸ್ಆರ್ ಕಾಂಗ್ರೆಸ್(11 ಸಂಸದರು) ಸದಸ್ಯರ ಬೆಂಬಲದೊಂದಿಗೆ ಅವರು 438 ಮತಗಳನ್ನು ಪಡೆಯುತ್ತಿದ್ದರು. ಪಕ್ಷೇತರರು ಮತ್ತು ತಟಸ್ಥ ಸಂಸದರನ್ನು ಲೆಕ್ಕಕ್ಕೆ ಹಿಡಿದಿದ್ದರೂ ಅವರು 449 ಮತಗಳನ್ನು ಗಳಿಸುತ್ತಿದ್ದರು.
ಇಂಡಿಯಾ ಮೈತ್ರಿಕೂಟದ ಎಲ್ಲ ಸಂಸದರು ಮತ ಚಲಾಯಿಸಿದ್ದರಿಂದ ಸುದರ್ಶನ ರೆಡ್ಡಿ 315 ಮತಗಳನ್ನು ಗಳಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು.
ಆದರೆ ಫಲಿತಾಂಶ ಪ್ರಕಟಗೊಂಡಾಗ ರಾಧಾಕೃಷ್ಣನ್ ನಿರೀಕ್ಷೆಗಿಂತ ಹೆಚ್ಚು ಮತ್ತು ಸುದರ್ಶನ ರೆಡ್ಡಿ ನಿರೀಕ್ಷೆಗಿಂತ ಕಡಿಮೆ ಗಳಿಸಿದ್ದಾರೆ.
ಅಸಿಂಧುಗೊಂಡ ಎಲ್ಲ 15 ಮತಗಳು ಪ್ರತಿಪಕ್ಷದ್ದಾಗಿದ್ದರೂ ಆಗಲೂ ರಾಧಾಕೃಷ್ಣನ್ ನಿರೀಕ್ಷೆಗಿಂತ ಹೆಚ್ಚಿನ ಮತಗಳನ್ನು ಪಡೆದಿರುತ್ತಿದ್ದರು. ಇದು ಪ್ರತಿಪಕ್ಷ ಸದಸ್ಯರಿಂದ ಅಡ್ಡ ಮತದಾನವನ್ನು ಸೂಚಿಸಿದೆ.
ಒಟ್ಟು 11 ಮತಗಳನ್ನು ಹೊಂದಿದ್ದ ಬಿಜೆಡಿ ಮತ್ತು ಬಿಆರ್ಎಸ್ನಂತಹ ಪಕ್ಷಗಳು ಮತದಾನದಿಂದ ದೂರವುಳಿದಿದ್ದವು.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ರಹಸ್ಯ ಮತದಾನ ನಡೆಯುತ್ತದೆ ಮತ್ತು ಸಂಸದರು ಪಕ್ಷದ ಸಚೇತಕಾಜ್ಞೆಗಳಿಗೆ ಬದ್ಧತೆಯನ್ನು ಹೊಂದಿಲ್ಲವಾದರೂ ಅಡ್ಡ ಮತದಾನವು ಇಂಡಿಯಾ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದನ್ನು ಸೂಚಿಸಿದೆ.







