ಕೋಳಿ ಸಾಗಣೆ ಲಾರಿಯನ್ನು ತಡೆದ ಅನಂತ್ ಅಂಬಾನಿ ವೀಡಿಯೊ ಮತ್ತೆ ಮುನ್ನೆಲೆಗೆ
“ವನತಾರದಲ್ಲಿನ ಹುಲಿ-ಸಿಂಹಗಳಿಗೆ ಈ ವಿದೂಷಕ ಏನು ತಿನ್ನಿಸುತ್ತಾನೆ?” ಎಂದ ಜನರು

ಅನಂತ್ ಅಂಬಾನಿ | Photo Credit : x
ಅಹಮದಾಬಾದ್: ಮಾಂಸಕ್ಕಾಗಿ ಸಾಗಿಸಲಾಗುತ್ತಿದ್ದ ಸುಮಾರು 250 ಕೋಳಿಗಳನ್ನು ರಕ್ಷಿಸಿ, ಗುಜರಾತ್ ನ ಜಾಮ್ನಗರದಲ್ಲಿರುವ ತಮ್ಮ ವನತಾರಾ ಕೇಂದ್ರಕ್ಕೆ ಕಳುಹಿಸಿದ್ದ ಅನಂತ್ ಅಂಬಾನಿ ಅವರ ಹಳೆಯ ವೀಡಿಯೊ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 2025ರ ಏಪ್ರಿಲ್ನಲ್ಲಿ ಅವರು ನಡೆಸಿದ್ದ ಜಾಮ್ನಗರ–ದ್ವಾರಕಾ ಪಾದಯಾತ್ರೆಯ ಸಂದರ್ಭದಲ್ಲಿ ನಡೆದಿದ್ದ ಈ ಘಟನೆ ಇದೀಗ ಚರ್ಚೆಗೆ ಕಾರಣವಾಗಿದೆ.
ಕೋಳಿಗಳನ್ನು ಸಾಗಿಸುತ್ತಿದ್ದ ವಾಹನವನ್ನು ತಡೆದಿದ್ದ ಅನಂತ್ ಅಂಬಾನಿ, ಅವುಗಳ ಮಾಲೀಕರಿಗೆ ಹಣ ನೀಡಿ ಕೋಳಿಗಳನ್ನು ಖರೀದಿಸಿದ್ದರು. ಮಾರುಕಟ್ಟೆ ಬೆಲೆಗಿಂತ ಎರಡು ಪಟ್ಟು ಹಣ ಪಾವತಿಸಿದ್ದರು ಎನ್ನಲಾಗಿದೆ. ಬಳಿಕ ಅವುಗಳನ್ನು ವನತಾರಾ ವನ್ಯಜೀವಿ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದರು.
ಈ ಘಟನೆಯನ್ನು ಶ್ಲಾಘಿಸಿ @Dr_Priyanka0 ಎಂಬ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಲಾಗಿತ್ತು. ಅನಂತ್ ಅಂಬಾನಿ ಅವರ ಈ ನಡೆ ಅವರಲ್ಲಿರುವ ಕರುಣೆಯ ಮನೋಭಾವಕ್ಕೆ ಸಾಕ್ಷಿ ಎಂದು ಪೋಸ್ಟ್ನಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿತ್ತು.
ಆದರೆ, ಈ ಪೋಸ್ಟ್ಗೆ ಪ್ರತಿಕ್ರಿಯಿಸಿರುವ ಹಲವರು ಅನಂತ್ ಅಂಬಾನಿ ಅವರ ನಡೆಗೆ ವ್ಯಂಗ್ಯವಾಡಿದ್ದು, ವನತಾರಾದಲ್ಲಿ ಸಾಕಲಾಗುತ್ತಿರುವ ಸಿಂಹ, ಹುಲಿ ಮತ್ತು ಚಿರತೆಗಳಿಗೆ ನೀಡುವ ಮಾಂಸ ಎಲ್ಲಿಂದ ಬರುತ್ತದೆ ಎಂದು ಪ್ರಶ್ನಿಸಿದ್ದಾರೆ.
ವನತಾರಾದಲ್ಲಿ ಸುಮಾರು 200 ಸಿಂಹಗಳು, 200 ಚಿರತೆಗಳು ಹಾಗೂ 150ಕ್ಕೂ ಹೆಚ್ಚು ಹುಲಿಗಳಿವೆ ಎಂಬ ವರದಿಗಳನ್ನು ಉಲ್ಲೇಖಿಸಿರುವ ನೆಟ್ಟಿಗರು, ಇಷ್ಟೊಂದು ಮಾಂಸಾಹಾರಿ ಪ್ರಾಣಿಗಳಿಗೆ ಪ್ರತಿದಿನ ಮಾಂಸ ಒದಗಿಸಲು ಇತರ ಪ್ರಾಣಿಗಳನ್ನು ವಧೆ ಮಾಡಬೇಕಾಗುತ್ತದೆ. ಹಾಗಾದರೆ ಕೋಳಿಗಳನ್ನು ರಕ್ಷಿಸುವ ಅನಂತ್ ಅಂಬಾನಿ, ಸಿಂಹ ಮತ್ತು ಹುಲಿಗಳಿಗೆ ಯಾವ ಪ್ರಾಣಿಗಳ ಮಾಂಸ ನೀಡುತ್ತಾರೆ? ಆ ಮಾಂಸ ಎಲ್ಲಿಂದ ಬರುತ್ತದೆ? ಅದರ ಮೂಲ ಮತ್ತು ಪೂರೈಕೆ ವ್ಯವಸ್ಥೆ ಏನು? ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ.
@ChekrishnaCk ಎಂಬ ಖಾತೆಯಿಂದ, “ವನತಾರಾದಲ್ಲಿ ಸಿಂಹಗಳಿಗೆ ಈ ವಿದೂಷಕ ಏನು ತಿನ್ನಿಸುತ್ತಾನೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತೇನೆ” ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡಲಾಗಿದೆ.
@bbfr74 ಎಂಬ ಖಾತೆಯ ಬಳಕೆದಾರರು, ವನತಾರಾದಲ್ಲಿರುವ ಸಿಂಹ, ಹುಲಿ ಮತ್ತು ಚಿರತೆಗಳ ಆಹಾರಕ್ಕಾಗಿ ವರ್ಷಕ್ಕೆ ಅಂದಾಜು 785ರಿಂದ 1,113 ಟನ್ ಗಳಷ್ಟು ಮಾಂಸ ಬೇಕಾಗಬಹುದು ಎಂದು ಉಲ್ಲೇಖಿಸಿ, ಅದಕ್ಕಾಗಿ ಯಾವ ಪ್ರಾಣಿಗಳನ್ನು ವಧಿಸಲಾಗುತ್ತದೆ? ಮೇಕೆ, ಎಮ್ಮೆ ಅಥವಾ ಕೋಳಿಗಳ ಮಾಂಸ ಬಳಸಲಾಗುತ್ತದೆಯೇ? ಮಾಂಸವನ್ನು ಎಲ್ಲಿಂದ ಸಂಗ್ರಹಿಸಲಾಗುತ್ತದೆ? ಎಂಬ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಇನ್ನೊಂದು ಪೋಸ್ಟ್ ನಲ್ಲಿ, “ಒಂದೆಡೆ ಕೋಳಿಗಳನ್ನು ರಕ್ಷಿಸುವ ವ್ಯಕ್ತಿಯೇ ಮತ್ತೊಂದೆಡೆ ಸಿಂಹ ಮತ್ತು ಹುಲಿಗಳಿಗೆ ಟನ್ಗಟ್ಟಲೆ ಮಾಂಸ ಒದಗಿಸುತ್ತಿದ್ದಾರೆ. ಇದು ಪ್ರಚಾರದ ನಾಟಕ” ಎಂದು ಟೀಕಿಸಲಾಗಿದೆ. ಕೆಲವು ನೆಟ್ಟಿಗರು ಸಿಂಹಗಳಿಗೆ ದಾಲ್, ಅನ್ನ, ಪನೀರ್ ಅಥವಾ ಗೋಬಿ ಮಂಚೂರಿಯನ್ ನೀಡುತ್ತಾರೆಯೇ ಎಂದು ವ್ಯಂಗ್ಯವಾಡಿದ್ದಾರೆ.
ಅನಂತ್ ಅಂಬಾನಿ ಅವರ ವಿವಾಹಪೂರ್ವ ಸಂಗೀತ ಕಾರ್ಯಕ್ರಮದಲ್ಲಿ ಮೊಸಳೆಯ ಚರ್ಮದ ದುಬಾರಿ ಜಾಕೆಟ್ ಧರಿಸಿದ್ದ ವಿಚಾರವನ್ನೂ ಕೆಲವರು ಪ್ರಸ್ತಾಪಿಸಿದ್ದಾರೆ. ಪ್ರಾಣಿಗಳ ಮೇಲಿನ ಕಾಳಜಿ ಆಯ್ದ ಸಂದರ್ಭಗಳಿಗೆ ಮಾತ್ರ ಸೀಮಿತವಾಗಿದೆಯೇ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ. ರಿಲಯನ್ಸ್ ಗೆ ಸಂಬಂಧಿಸಿದ ಜಿಯೋಮಾರ್ಟ್ ನಲ್ಲಿ ಮಾಂಸ ಉತ್ಪನ್ನಗಳ ಮಾರಾಟ ನಡೆಯುತ್ತಿರುವುದನ್ನೂ ಕೆಲವರು ಟೀಕಿಸಿದ್ದಾರೆ.






