Tamil Nadu | ಪ್ರತಿ ಕುಟುಂಬಕ್ಕೆ ವರ್ಷಕ್ಕೆ 3 ಉಚಿತ LPG ಸಿಲಿಂಡರ್, ಟ್ರಾನ್ಸ್ಜೆಂಡರ್ಗಳಿಗೆ ಉಚಿತ ಬಸ್ ಪ್ರಯಾಣ: CM ವಿಜಯ್ ಘೋಷಣೆ
ಪರಂದೂರಿನಲ್ಲಿ ಪ್ರಸ್ತಾವಿತ ವಿಮಾನ ನಿಲ್ದಾಣ ಯೋಜನೆ ಮುಂದುವರಿಸದಿರಲು ನಿರ್ಧಾರ

Photo | PTI
ಚೆನ್ನೈ: ವಾರ್ಷಿಕ 2.5 ಲಕ್ಷ ರೂ.ಗಿಂತ ಕಡಿಮೆ ಆದಾಯ ಹೊಂದಿರುವ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ಮೂರು ಉಚಿತ LPG ಸಿಲಿಂಡರ್ ಗಳನ್ನು ನೀಡುವ ‘ಅನ್ನಪೂರ್ಣನಿ ಸೂಪರ್ ಸಿಕ್ಸ್’ ಯೋಜನೆಯನ್ನು ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಸೋಮವಾರ ವಿಧಾನಸಭೆಯಲ್ಲಿ ಘೋಷಿಸಿದರು.
2027ರ ಪೊಂಗಲ್ ನಿಂದ ಯೋಜನೆ ಜಾರಿಗೆ ಬರಲಿದ್ದು, ಸುಮಾರು 1.30 ಕೋಟಿ ಕುಟುಂಬಗಳಿಗೆ ಇದರ ಪ್ರಯೋಜನ ದೊರೆಯಲಿದೆ. ಯೋಜನೆಯಡಿ ಅರ್ಹ ಫಲಾನುಭವಿಗಳು ಖರೀದಿಸುವ ಮೂರು LPG ಸಿಲಿಂಡರ್ ಗಳ ವೆಚ್ಚವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಇದರಿಂದ ರಾಜ್ಯದ ಖಜಾನೆಗೆ ವಾರ್ಷಿಕ ಸುಮಾರು 4,000 ಕೋಟಿ ರೂ. ಹೊರೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಗಲ್ಫ್ ಪ್ರದೇಶದಲ್ಲಿನ ಪ್ರಸಕ್ತ ಯುದ್ಧ ಪರಿಸ್ಥಿತಿಯಿಂದಾಗಿ ಅಡುಗೆ ಅನಿಲ ಸಿಲಿಂಡರ್ ಗಳ ಕೊರತೆ ಉಂಟಾಗಿದ್ದು, ಸಿಲಿಂಡರ್ ಗಳ ಬೆಲೆಯೂ ಹೆಚ್ಚಾಗಿದೆ. ಇದರಿಂದ ಕುಟುಂಬಗಳ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಿದೆ ಎಂದು ವಿಜಯ್ ಹೇಳಿದರು.
‘ಆರ್ಥಿಕವಾಗಿ ನಿರ್ಬಂಧಿತ ಪರಿಸ್ಥಿತಿಯಲ್ಲಿಯೂ ಇದನ್ನು ಗಮನದಲ್ಲಿಟ್ಟುಕೊಂಡು, ಸಾರ್ವಜನಿಕರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು, ಅವರ ಕಲ್ಯಾಣವನ್ನು ರಕ್ಷಿಸಲು ಹಾಗೂ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಲು, ಅಡುಗೆ ಅನಿಲ ಸಿಲಿಂಡರ್ ಗಳಿಗೆ ಖರ್ಚು ಮಾಡಿದ ಮೊತ್ತವನ್ನು ಅವರಿಗೆ ಒದಗಿಸಲು ಸರಕಾರ ನಿರ್ಧರಿಸಿದೆ’ ಎಂದು ಅವರು ವಿಧಾನಸಭೆಯಲ್ಲಿ ಹೇಳಿದರು.
ಚುನಾವಣೆಗೆ ಮುನ್ನ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ವರ್ಷಕ್ಕೆ ಆರು ಉಚಿತ LPG ಸಿಲಿಂಡರ್ಗಳನ್ನು ಒದಗಿಸುವುದಾಗಿ ಭರವಸೆ ನೀಡಿತ್ತು.
ಟ್ರಾನ್ಸ್ ಜೆಂಡರ್ ಗಳಿಗೆ ಉಚಿತ ಪ್ರಯಾಣ
ಟ್ರಾನ್ಸ್ ಜೆಂಡರ್ ಗಳಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ಕಲ್ಪಿಸುವುದಾಗಿ ವಿಜಯ್ ಘೋಷಿಸಿದರು. ಜತೆಗೆ ಮಹಿಳೆಯರಿಗೆ ಜಾರಿಯಲ್ಲಿರುವ ‘ವೆಟ್ರಿ ಪಯಣ ತಿಟ್ಟಂ’ ಯೋಜನೆಯ ವ್ಯಾಪ್ತಿಯನ್ನೂ ವಿಸ್ತರಿಸುವುದಾಗಿ ತಿಳಿಸಿದರು. ವಿಸ್ತೃತ ಯೋಜನೆಯಡಿ ಮಹಿಳೆಯರು ಸಾಮಾನ್ಯ ಬಸ್ ಗಳ ಜತೆಗೆ ಎಕ್ಸ್ಪ್ರೆಸ್, LSS ಹಾಗೂ ಡಿಲಕ್ಸ್ ಸೇವೆಗಳಲ್ಲೂ ಉಚಿತವಾಗಿ ಪ್ರಯಾಣಿಸಬಹುದು. ವಿಸ್ತೃತ ಯೋಜನೆ ಅಕ್ಟೋಬರ್ 2ರಂದು ಜಾರಿಗೆ ಬರಲಿದೆ.
‘ಮಹಿಳೆಯರ ಪ್ರಯಾಣ ಸ್ವಾತಂತ್ರ್ಯವು ಅವರ ಆರ್ಥಿಕ ಸ್ವಾತಂತ್ರ್ಯ ಮತ್ತು ಕುಟುಂಬಗಳ ಪ್ರಗತಿಗೆ ಅಡಿಪಾಯವಾಗುತ್ತದೆ’ ಎಂದು ವಿಜಯ್ ಹೇಳಿದರು.
ಪ್ರಸ್ತುತ ಉಚಿತ ಪ್ರಯಾಣ ಯೋಜನೆಯಡಿ ಮಹಾನಗರ ಮತ್ತು ನಗರ ಪ್ರದೇಶಗಳ ಸಾಮಾನ್ಯ ಹಾಗೂ ಗುಡ್ಡಗಾಡು ಬಸ್ ಗಳಲ್ಲಿ ಮಹಿಳೆಯರಿಗೆ 40 ಕಿ.ಮೀ.ವರೆಗೆ ಮಾತ್ರ ಉಚಿತ ಪ್ರಯಾಣಕ್ಕೆ ಅವಕಾಶವಿದೆ. ಎಕ್ಸ್ ಪ್ರೆಸ್, LSS, ಡಿಲಕ್ಸ್ ಹಾಗೂ ಉಪನಗರ ಸೇವೆಗಳಲ್ಲಿ ಈ ಸೌಲಭ್ಯ ಇಲ್ಲ ಎಂದು ಅವರು ತಿಳಿಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನವಾದ ಅಕ್ಟೋಬರ್ 2ರಿಂದ ‘ವೆಟ್ರಿ ಪಯಣಂ’ (ವಿಜಯಶಾಲಿ ಪ್ರಯಾಣ) ಹೆಸರಿನಲ್ಲಿ ಮಹಿಳೆಯರ ಉಚಿತ ಬಸ್ ಪ್ರಯಾಣ ಯೋಜನೆಯನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಲು ಸರಕಾರ ನಿರ್ಧರಿಸಿದೆ ಎಂದರು.
ಪರಂದೂರಿನಲ್ಲಿ ಪ್ರಸ್ತಾವಿತ ವಿಮಾನ ನಿಲ್ದಾಣ ಯೋಜನೆ ಮುಂದುವರಿಸದಿರಲು ನಿರ್ಧಾರ
ರೈತ ಸಂಘಟನೆಗಳು ಮತ್ತು ಸ್ಥಳೀಯ ನಿವಾಸಿಗಳ ತೀವ್ರ ವಿರೋಧ ಎದುರಿಸುತ್ತಿರುವ ಚೆನ್ನೈ ಸಮೀಪದ ಪರಂದೂರಿನಲ್ಲಿ ಪ್ರಸ್ತಾವಿತ ವಿಮಾನ ನಿಲ್ದಾಣ ಯೋಜನೆಯನ್ನು ಮುಂದುವರಿಸದಿರಲು ತಮ್ಮ ಸರಕಾರ ಕೈಗೊಂಡಿರುವ ನಿರ್ಧಾರವನ್ನು ವಿಜಯ್ ವಿಧಾನಸಭೆಯಲ್ಲಿ ಪುನರುಚ್ಚರಿಸಿದರು.
ಪ್ರಸ್ತಾವಿತ ವಿಮಾನ ನಿಲ್ದಾಣ ಯೋಜನೆಯಿಂದ ಸಂತ್ರಸ್ತರಾಗಲಿರುವ ನಿವಾಸಿಗಳೊಂದಿಗೆ ತಮ್ಮ ಸರಕಾರ ದೃಢವಾಗಿ ನಿಲ್ಲಲಿದೆ ಎಂದು ಅವರು ಹೇಳಿದರು.






