ತಮಿಳುನಾಡು | ಪ್ರಮುಖ 52 ದೇವಾಲಯಗಳಲ್ಲಿ ಸ್ಮಾರ್ಟ್ ಫೋನ್ ನಿಷೇಧ

Phono | ANI
ಚೆನ್ನೈ: ತಮಿಳುನಾಡಿನ ವಿಜಯ್ ಸರಕಾರ ರಾಜ್ಯದ 52 ಪ್ರಮುಖ ದೇವಾಲಯಗಳ ಒಳಗೆ ಸ್ಮಾರ್ಟ್ ಫೋನ್ಗಳನ್ನು ಕೊಂಡೊಯ್ಯುವುದು ಹಾಗೂ ಬಳಸುವುದನ್ನು ನಿಷೇಧಿಸಿದೆ. ಮಂಗಳವಾರದಿಂದಲೇ ಈ ಹೊಸ ನಿಯಮ ಜಾರಿಗೆ ಬಂದಿದೆ.
ಸ್ಮಾರ್ಟ್ ಫೋನ್ಗಳನ್ನು ಕೊಂಡೊಯ್ದ ಭಕ್ತರು ಅವುಗಳನ್ನು ದೇವಾಲಯದ ಆವರಣದಲ್ಲಿರುವ ನಿಗದಿತ ಕೌಂಟರ್ಗಳಲ್ಲಿ ಇಡಬೇಕು. ಪ್ರತಿ ಫೋನ್ಗೆ 5 ರೂ. ಶುಲ್ಕ ಪಾವತಿಸಬೇಕಾಗುತ್ತದೆ. ಆದರೆ ಕ್ಯಾಮೆರಾ ಇಲ್ಲದ ಮೊಬೈಲ್ ಫೋನ್ಗಳನ್ನು ದೇವಾಲಯದೊಳಗೆ ಕೊಂಡೊಯ್ಯಲು ಅವಕಾಶವಿದೆ.
ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ ಸಚಿವ ರಮೇಶ್ ಅವರು ಈ ನಿರ್ಬಂಧವನ್ನು ಪ್ರಕಟಿಸಿದ್ದಾರೆ. ಈ ಕ್ರಮವು ಈ ಹಿಂದೆ ಮದ್ರಾಸ್ ಹೈಕೋರ್ಟ್ ನೀಡಿದ್ದ ನಿರ್ದೇಶನಗಳಿಗೆ ಅನುಗುಣವಾಗಿದೆ ಎಂದು ಹೇಳಿದ್ದಾರೆ.
ದೇವಾಲಯದ ನಿಯಮಗಳನ್ನು ಉಲ್ಲಂಘಿಸಿ ದೇವಾಲಯದ ಆವರಣದಲ್ಲಿ ಫೋಟೋ ತೆಗೆಯುವುದು, ರೀಲ್ಸ್ ಮಾಡುವುದು ಹಾಗೂ ವಿಡಿಯೊಗಳನ್ನು ಚಿತ್ರೀಕರಿಸುವುದು ಹೆಚ್ಚಾಗಿರುವ ಬಗ್ಗೆ ವ್ಯಕ್ತವಾದ ಕಳವಳದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವ ರಮೇಶ್ ಹೇಳಿದ್ದಾರೆ.
ಕಾಂಚೀಪುರಂನ ಪ್ರಸಿದ್ಧ ದೇವರಾಜಸ್ವಾಮಿ–ಅಥಿ ವರದರ್ ದೇವಾಲಯದಲ್ಲಿ ಮಂಗಳವಾರ ಬೆಳಗ್ಗೆ 6 ಗಂಟೆಯಿಂದ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಮೊಬೈಲ್ ಫೋನ್ಗಳನ್ನು ಸಂಗ್ರಹಿಸಲು ಇಬ್ಬರು ಕಂಪ್ಯೂಟರ್ ಆಪರೇಟರ್ಗಳು ಹಾಗೂ ಇಬ್ಬರು ಸಹಾಯಕರನ್ನು ನಿಯೋಜಿಸಲಾಗಿದೆ.
ಭಕ್ತರ ಪೋಟೊ, ಮೊಬೈಲ್ ಫೋನ್ನ ಮಾದರಿ ಹಾಗೂ ಫೋನ್ ಸಂಖ್ಯೆಯನ್ನು ನೋಂದಾಯಿಸಲಾಗುತ್ತದೆ. ನೋಂದಾಯಿಸಿದ ವಿವರಗಳನ್ನು ಪರಿಶೀಲಿಸಿದ ನಂತರ ಭಕ್ತರಿಗೆ ಅವರ ಮೊಬೈಲ್ ಫೋನ್ಗಳನ್ನು ಹಿಂತಿರುಗಿಸಲಾಗುತ್ತದೆ.
ಸ್ಮಾರ್ಟ್ ಫೋನ್ ನಿಷೇಧದ ಕುರಿತು ಭಕ್ತರಿಗೆ ಮಾಹಿತಿ ನೀಡಲು ದೇವಾಲಯದ ಸುತ್ತಮುತ್ತಲಿನ ಪಾರ್ಕಿಂಗ್ ಸ್ಥಳಗಳು ಹಾಗೂ ಇತರ ಪ್ರಮುಖ ಸ್ಥಳಗಳಲ್ಲಿ ಬಹುಭಾಷೆಯಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ.
ಈ ನಿರ್ಬಂಧಕ್ಕೆ ಭಕ್ತರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ದೇವಾಲಯಗಳ ಪಾವಿತ್ರ್ಯ ಹಾಗೂ ಶಾಂತ ವಾತಾವರಣವನ್ನು ಕಾಪಾಡುವ ದೃಷ್ಟಿಯಿಂದ ಈ ಕ್ರಮವನ್ನು ಕೆಲವರು ಸ್ವಾಗತಿಸಿದ್ದಾರೆ. ಆದರೆ ಮೊಬೈಲ್ ಫೋನ್ಗಳ ಸುರಕ್ಷತೆ ಬಗ್ಗೆ ಕೆಲವರು ಪ್ರಶ್ನೆ ಎತ್ತಿದ್ದಾರೆ. ಅಲ್ಲದೆ, ಮೊಬೈಲ್ಗಳನ್ನು ಠೇವಣಿ ಇಡುವ ಕೌಂಟರ್ಗಳಲ್ಲಿ ದೀರ್ಘ ಸರತಿ ಸಾಲುಗಳು ಉಂಟಾಗುವ ಸಾಧ್ಯತೆಯ ಬಗ್ಗೆಯೂ ಆತಂಕ ವ್ಯಕ್ತವಾಗಿದೆ. ದೆ̤






