ಮೋದಿ, ರಾಹುಲ್ ಬಳಿಕ ಪ್ರಧಾನಿ ಆಯ್ಕೆಯಲ್ಲಿ ವಿಜಯ್ಗೆ ಮೂರನೇ ಸ್ಥಾನ: MOTN ಸಮೀಕ್ಷೆ
ಕೇಜ್ರಿವಾಲ್ ರನ್ನು ಹಿಂದಿಕ್ಕಿದ CJP ಸಂಚಾಲಕ ಅಭಿಜಿತ್ ದೀಪ್ಕೆ!

Photo: x.com/ians_india
ಹೊಸದಿಲ್ಲಿ, ಆ.27: ತಮಿಳುನಾಡು ಮುಖ್ಯಮಂತ್ರಿ ಹಾಗೂ ತಮಿಳಗ ವೆಟ್ರಿ ಕಳಗಂ (TVK) ಸಂಸ್ಥಾಪಕ ಸಿ. ಜೋಸೆಫ್ ವಿಜಯ್ ಅವರು ದೇಶದ ಮುಂದಿನ ಪ್ರಧಾನಿಯಾಗಿ ಆಯ್ಕೆಯಾಗಬಹುದಾದ ನಾಯಕರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ. ಇಂಡಿಯಾ ಟುಡೇ–ಸಿವೋಟರ್ನ ‘ಮೂಡ್ ಆಫ್ ದಿ ನೇಷನ್’ (MOTN) ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬಳಿಕ ವಿಜಯ್ ಸ್ಥಾನ ಪಡೆದಿದ್ದಾರೆ.
ಮುಂದಿನ ಪ್ರಧಾನಿಯಾಗಿ ಯಾರನ್ನು ನೋಡಲು ಬಯಸುತ್ತೀರಿ ಎಂಬ ಪ್ರಶ್ನೆಗೆ ಶೇ 9.2ರಷ್ಟು ಮಂದಿ ವಿಜಯ್ ಅವರ ಹೆಸರನ್ನು ಸೂಚಿಸಿದ್ದಾರೆ. ಮೋದಿ ಅವರಿಗೆ ಶೇ 48.7 ಮತ್ತು ರಾಹುಲ್ ಗಾಂಧಿ ಅವರಿಗೆ ಶೇ 27.1ರಷ್ಟು ಬೆಂಬಲ ವ್ಯಕ್ತವಾಗಿದೆ.
ವಿಜಯ್ ಅವರು ತೃಣಮೂಲ ಕಾಂಗ್ರೆಸ್ (TMC) ಮುಖ್ಯಸ್ಥೆ ಮಮತಾ ಬ್ಯಾನರ್ಜಿ (ಶೇ 2), ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (ಶೇ 1.7), ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಹಾಗೂ ಸಂಚಾಲಕ ಅಭಿಜಿತ್ ದೀಪ್ಕೆ (ಶೇ 1.3) ಮತ್ತು ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ (ಶೇ 1.2) ಅವರಿಗಿಂತ ಮುಂದಿದ್ದಾರೆ.
ಪ್ರಧಾನಿ ಆಯ್ಕೆಗಳ ಪಟ್ಟಿಯಲ್ಲಿ ವಿಜಯ್ ಕಾಣಿಸಿಕೊಂಡಿರುವುದು ಇದೇ ಮೊದಲ ಬಾರಿ. 2024ರಲ್ಲಿ ರಾಜಕೀಯ ಪ್ರವೇಶಿಸಿದ ನಟ–ರಾಜಕಾರಣಿ, ಕೇವಲ ಎರಡು ವರ್ಷಗಳಲ್ಲಿ ರಾಜ್ಯ ರಾಜಕೀಯವನ್ನು ಮೀರಿ ರಾಷ್ಟ್ರೀಯ ರಾಜಕೀಯ ಚರ್ಚೆಯಲ್ಲೂ ಸ್ಥಾನ ಪಡೆದಿದ್ದಾರೆ.
ತಮಿಳುನಾಡಿನಲ್ಲಿ TVK ಸರ್ಕಾರಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಹೀಗಾಗಿ, ಪ್ರಧಾನಿ ಆಯ್ಕೆಯಲ್ಲಿ ವಿಜಯ್ ಅವರು ರಾಹುಲ್ ಗಾಂಧಿ ಬಳಿಕ ಮೂರನೇ ಸ್ಥಾನ ಪಡೆದಿರುವುದು ಗಮನಾರ್ಹವಾಗಿದೆ.
ವಿರೋಧ ಪಕ್ಷಗಳ ಮೈತ್ರಿ ನಾಯಕತ್ವದಲ್ಲೂ ವಿಜಯ್
ವಿರೋಧ ಪಕ್ಷಗಳ ಮೈತ್ರಿಕೂಟವನ್ನು ಮುನ್ನಡೆಸಲು ಪ್ರಸ್ತುತ ಯಾವ ನಾಯಕ ಸೂಕ್ತ ಎಂಬ ಪ್ರಶ್ನೆಗೂ ವಿಜಯ್ ಅವರಿಗೆ ಗಮನಾರ್ಹ ಬೆಂಬಲ ವ್ಯಕ್ತವಾಗಿದೆ. ಈ ಪಟ್ಟಿಯಲ್ಲಿ ರಾಹುಲ್ ಗಾಂಧಿ ಶೇ 29ರಷ್ಟು ಬೆಂಬಲದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ವಿಜಯ್ ಶೇ 12.2ರಷ್ಟು ಬೆಂಬಲದೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.
TMCಯ ಮಮತಾ ಬ್ಯಾನರ್ಜಿ ಶೇ 8.5, AAPನ ಅರವಿಂದ್ ಕೇಜ್ರಿವಾಲ್ ಶೇ 7.5 ಮತ್ತು ಅಖಿಲೇಶ್ ಯಾದವ್ ಶೇ 6.9ರಷ್ಟು ಬೆಂಬಲ ಪಡೆದಿದ್ದಾರೆ.
ಮುಖ್ಯಮಂತ್ರಿಯಾಗಿ ಮೊದಲ ಅವಧಿಯ ಆರಂಭಿಕ ತಿಂಗಳುಗಳಲ್ಲಿರುವ ವಿಜಯ್ ಅವರು ತಮಿಳುನಾಡಿನಾಚೆಗೂ ತಮ್ಮ ರಾಜಕೀಯ ಗುರುತನ್ನು ವೇಗವಾಗಿ ವಿಸ್ತರಿಸಿಕೊಂಡಿರುವುದನ್ನು ಈ ಅಂಕಿ-ಅಂಶಗಳು ತೋರಿಸುತ್ತವೆ.
25,184 ಮಂದಿಯ ನೇರ ಸಮೀಕ್ಷೆ
ಇಂಡಿಯಾ ಟುಡೇ ಸಮೂಹವು ಸುಮಾರು ಎರಡು ದಶಕಗಳಿಂದ ‘ಮೂಡ್ ಆಫ್ ದಿ ನೇಷನ್’ ಸಮೀಕ್ಷೆಯನ್ನು ದ್ವೈವಾರ್ಷಿಕವಾಗಿ ನಡೆಸುತ್ತಿದೆ. 2026ರ ಆಗಸ್ಟ್ ಆವೃತ್ತಿಗಾಗಿ ಜುಲೈ 1ರಿಂದ ಆಗಸ್ಟ್ 25ರವರೆಗೆ 25,184 ಮಂದಿಯನ್ನು ನೇರವಾಗಿ ಸಮೀಕ್ಷೆ ಮಾಡಲಾಗಿದೆ.
ಸಿವೋಟರ್ ನ ನಿಯಮಿತ ಟ್ರ್ಯಾಕಿಂಗ್ ನ ಭಾಗವಾಗಿ ಕಳೆದ ಆರು ತಿಂಗಳಲ್ಲಿ ನಡೆಸಲಾದ 91,795 ಸಂದರ್ಶನಗಳ ಮಾಹಿತಿಯನ್ನೂ ಆಗಸ್ಟ್ 2026ರ MOTN ಸಮೀಕ್ಷೆಯ ಸಂಶೋಧನೆ ರೂಪಿಸಲು ಬಳಸಲಾಗಿದೆ.
ಬೆಳ್ಳಿ ಪರದೆಯಿಂದ ರಾಜಕೀಯ ಮುಂಚೂಣಿಗೆ
ಭಾರತೀಯ ರಾಜಕೀಯದಲ್ಲಿ ಅಪರೂಪವಾಗಿ ಕಂಡುಬರುವ ವೇಗದಲ್ಲಿ ವಿಜಯ್ ಅವರ ರಾಜಕೀಯ ಪಯಣ ಸಾಗಿದೆ. ಸೂಪರ್ಸ್ಟಾರ್ ಆಗಿದ್ದ ಅವರು 2024ರಲ್ಲಿ TVK ಸ್ಥಾಪಿಸುವ ಮೂಲಕ ಅಧಿಕೃತವಾಗಿ ರಾಜಕೀಯ ಪ್ರವೇಶಿಸಿದರು.
ಎರಡು ವರ್ಷಗಳಲ್ಲೇ ಪಕ್ಷವು ತನ್ನ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿ ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದಿದ್ದು, 2026ರಲ್ಲಿ ವಿಜಯ್ ಮುಖ್ಯಮಂತ್ರಿಯಾಗಿದ್ದಾರೆ. ಸರ್ಕಾರದ ಮೊದಲ ವರ್ಷ ಪೂರ್ಣಗೊಳ್ಳುವ ಮೊದಲೇ ದೇಶದ ರಾಜಕೀಯ ಮನಸ್ಥಿತಿಯನ್ನು ಅಳೆಯುವ ಸಮೀಕ್ಷೆಯಲ್ಲಿ ಅವರ ಹೆಸರು ರಾಷ್ಟ್ರೀಯ ನಾಯಕರೊಂದಿಗೆ ಕಾಣಿಸಿಕೊಂಡಿದೆ.
ಇತ್ತೀಚಿನ ವಾರಗಳಲ್ಲಿ TVK ನಾಯಕರು ವಿಜಯ್ ಅವರನ್ನು ರಾಷ್ಟ್ರೀಯ ರಾಜಕೀಯ ನಾಯಕ ಹಾಗೂ 2029ರ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವ ಮಾತುಗಳನ್ನು ಆಡುತ್ತಿದ್ದಾರೆ. ಇದೀಗ MOTN ಸಮೀಕ್ಷೆಯ ಅಂಕಿ-ಅಂಶಗಳು ಆ ಚರ್ಚೆಗೆ ಚುನಾವಣಾ ಆಯಾಮವನ್ನು ನೀಡಿವೆ.
2029ರ ಸಾರ್ವತ್ರಿಕ ಚುನಾವಣೆ ಇನ್ನೂ ಮೂರು ವರ್ಷ ಸಮಯವಿದೆ. ಜನಪ್ರಿಯತೆಯನ್ನು ರಾಷ್ಟ್ರೀಯ ಚುನಾವಣಾ ಮೈತ್ರಿ ಹಾಗೂ ಮತಗಳಾಗಿ ಪರಿವರ್ತಿಸುವುದು ವಿಭಿನ್ನ ಸವಾಲಾಗಿದೆ. ಆದರೂ, 2029ರಲ್ಲಿ ಪ್ರಧಾನಿ ಹುದ್ದೆಗೆ ವಿಜಯ್ ಅವರನ್ನು ಅಭ್ಯರ್ಥಿಯಾಗಿ ನೋಡುವ ಕಲ್ಪನೆ ಇನ್ನು ತಮಿಳುನಾಡಿನ ರಾಜಕೀಯ ವಲಯಕ್ಕೆ ಮಾತ್ರ ಸೀಮಿತವಾಗಿಲ್ಲ ಎಂಬುದನ್ನು ಸಮೀಕ್ಷೆ ಸೂಚಿಸಿದೆ.
2029ರ ಪ್ರಧಾನಿ ಅಭ್ಯರ್ಥಿಯಾಗಿ ವಿಜಯ್ ಬಿಂಬಿಸುವ ಪ್ರಯತ್ನ
TVK ನಾಯಕರಿಂದ ವಿಜಯ್ ಅವರನ್ನು ಪ್ರಧಾನಿಯಾಗಿ ಬಿಂಬಿಸುವ ಹೇಳಿಕೆಗಳು ಇತ್ತೀಚಿನ ದಿನಗಳಲ್ಲಿ ಬಹಿರಂಗವಾಗಿ ಕೇಳಿಬರುತ್ತಿವೆ.
ಆಗಸ್ಟ್ 18ರಂದು TVK ಸಚಿವ ಶರತ್ಕುಮಾರ್ ಅವರು ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿ ವಿಜಯ್ ಅವರನ್ನು ಭವಿಷ್ಯದ ಪ್ರಧಾನಿ ಎಂದು ಬಿಂಬಿಸಿದ್ದರು. ಮುಖ್ಯಮಂತ್ರಿಯ ಕಾರ್ಯಶೈಲಿಯನ್ನು ಶ್ಲಾಘಿಸಿದ ಅವರು, ವಿಜಯ್ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಹೇಳಿದ್ದರು.
‘ನಮ್ಮ ಹೃದಯದಲ್ಲಿ, ಮನೆಯಲ್ಲಿ ಮತ್ತು ಸೇಂಟ್ ಜಾರ್ಜ್ ಕೋಟೆಯಲ್ಲಿ ಮುಖ್ಯಮಂತ್ರಿಯಾಗಿರುವ ನಮ್ಮ ನಾಯಕ ಮುಂದಿನ ಭಾರತೀಯ ಪ್ರಧಾನಿ. ನೀವು ಮುಂದಿನ ಪ್ರಧಾನಿ. ನೀವು ಬೆಳಿಗ್ಗೆ ಅಥವಾ ಸಂಜೆ ನೋಡದೆ ಕೆಲಸ ಮಾಡುತ್ತೀರಿ. ನೀವು ಖಂಡಿತವಾಗಿಯೂ ಮುಂದಿನ ಪ್ರಧಾನಿ’ ಎಂದು ಶರತ್ಕುಮಾರ್ ಹೇಳಿದ್ದರು.
ಕೇವಲ ಎರಡು ವರ್ಷಗಳ ರಾಜಕೀಯ ಅನುಭವ ಹೊಂದಿರುವ ಪಕ್ಷವೊಂದು ತಮಿಳುನಾಡಿನ 2026ರ ಗೆಲುವಿನಲ್ಲೇ ತನ್ನ ರಾಜಕೀಯ ದಿಗಂತವನ್ನು ಸೀಮಿತಗೊಳಿಸುವುದಿಲ್ಲ ಎಂಬ ಸಂದೇಶವನ್ನು ಈ ಹೇಳಿಕೆ ನೀಡಿತ್ತು.
ಇದಕ್ಕೆ ಒಂದು ದಿನ ಮುನ್ನ, ತಮಿಳುನಾಡಿನ ಲೋಕೋಪಯೋಗಿ ಸಚಿವ ಹಾಗೂ TVK ನಾಯಕ ಆಧವ್ ಅರ್ಜುನ ಅವರು ‘ಇಂಡಿಯಾ ಟುಡೇ’ ರೌಂಡ್ಟೇಬಲ್ನಲ್ಲಿ ದಕ್ಷಿಣ ಭಾರತದಿಂದ ಪ್ರಧಾನಮಂತ್ರಿ ಹೊರಹೊಮ್ಮಬೇಕು ಎಂಬ ವಾದ ಮಂಡಿಸಿದ್ದರು.
‘ದಕ್ಷಿಣದಿಂದ ಪ್ರಧಾನಿ ಹೊರಹೊಮ್ಮಬೇಕು ಮತ್ತು ದಕ್ಷಿಣದಿಂದ ಪ್ರಧಾನಿ ಹೊರಹೊಮ್ಮುತ್ತಾರೆ. ಬಹುಶಃ ಈಗ ಅಲ್ಲ. ಭವಿಷ್ಯದಲ್ಲಿ, ಅವರು ಪ್ರತಿಯೊಬ್ಬ ಭಾರತೀಯನನ್ನು ಪ್ರತಿನಿಧಿಸುತ್ತಾರೆ ಮತ್ತು ಪ್ರತಿಯೊಬ್ಬ ಭಾರತೀಯನನ್ನೂ ಸಮಾನವಾಗಿ ಪರಿಗಣಿಸುತ್ತಾರೆ’ ಎಂದು ಅವರು ಹೇಳಿದ್ದರು.
ಒಂದೇ ದಿನದ ಅಂತರದಲ್ಲಿ ಬಂದ ಈ ಎರಡು ಹೇಳಿಕೆಗಳು ವಿಜಯ್ ಅವರ ವೈಯಕ್ತಿಕ ರಾಜಕೀಯ ಮಹತ್ವಾಕಾಂಕ್ಷೆಯನ್ನು TVKಯ ಹೆಚ್ಚು ಸ್ಪಷ್ಟವಾದ ರಾಜಕೀಯ ನಿರೂಪಣೆಯಾಗಿ ರೂಪಿಸಿವೆ.
ಆಗಸ್ಟ್ನ MOTN ಸಮೀಕ್ಷೆಯ ಫಲಿತಾಂಶವು ವಿಜಯ್ ಅವರನ್ನು TVK ಒಳಗೆ ಮಾತ್ರವಲ್ಲದೆ ಸಾರ್ವಜನಿಕರಲ್ಲಿಯೂ ಪ್ರಧಾನಿ ಅಭ್ಯರ್ಥಿಯಾಗಿ ಪರಿಗಣಿಸುವ ಮನೋಭಾವ ಮೂಡಿದೆ ಎಂಬುದನ್ನು ತೋರಿಸಿದೆ. ಜನಪ್ರಿಯತೆಯ ಸ್ಪರ್ಧೆಯಲ್ಲಿ ಅವರು ಹಲವು ವರ್ಷಗಳಿಂದ ರಾಷ್ಟ್ರೀಯ ರಾಜಕೀಯದಲ್ಲಿರುವ ನಾಯಕರನ್ನೂ ಹಿಂದಿಕ್ಕಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.






