WFI ಮೇಲಿನ ನಿಷೇಧ ರದ್ದು: ಕೇಂದ್ರ ಸರಕಾರದ ನಿರ್ಧಾರಕ್ಕೆ ವಿನೇಶ್ ಫೋಗಟ್ ಆಕ್ಷೇಪ
ಇದು ಕುಸ್ತಿ ಒಕ್ಕೂಟವನ್ನು ಕ್ರಿಮಿನಲ್ ಗಳಿಗೆ ಹಸ್ತಾಂತರಿಸುವ ಕ್ರಮ ಎಂದ ಕುಸ್ತಿ ಪಟು

ವಿನೇಶ್ ಫೋಗಟ್ (PTI)
ಚಂಡೀಗಢ: ಭಾರತೀಯ ಕುಸ್ತಿ ಒಕ್ಕೂಟ(WFI)ದ ಮೇಲೆ ಹೇರಲಾಗಿದ್ದ ನಿಷೇಧವನ್ನು ಹಿಂಪಡೆಯುವ ಕೇಂದ್ರ ಸರಕಾರದ ನಿರ್ಧಾರವನ್ನು ಒಲಿಪಿಂಕ್ ಪದಕ ವಿಜೇತೆ ಕುಸ್ತಿ ಪಟು ಹಾಗೂ ಹರ್ಯಾಣದ ಕಾಂಗ್ರೆಸ್ ಶಾಸಕಿ ವಿನೇಶ್ ಫೋಗಟ್ ಟೀಕಿಸಿದ್ದು, “ಇದು ಭಾರತೀಯ ಕುಸ್ತಿ ಒಕ್ಕೂಟವನ್ನು ಗೂಂಡಾಗಳು ಹಾಗೂ ಕ್ರಿಮಿನಲ್ ಗಳಿಗೆ ಹಸ್ತಾಂತರಿಸುವ ಕ್ರಮ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ಸಂಸದ ಬೃಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ, ಈ ಮುನ್ನ ಭಾರತೀಯ ಕುಸ್ತಿ ಒಕ್ಕೂಟದ ಮೇಲೆ ನಿಷೇಧ ಹೇರಲಾಗಿತ್ತು.
ಅಂಡರ್ 15 ಹಾಗೂ ಅಂಡರ್ 19 ರಾಷ್ಟ್ರೀಯ ತಂಡಗಳಿಗೆ ಕ್ರೀಡಾಪಟುಗಳನ್ನು ಪ್ರಕಟಿಸಬೇಕಾಗಿದ್ದುದರಿಂದ, ಚುನಾವಣೆ ನಡೆದ ಕೆಲವೇ ದಿನಗಳಲ್ಲಿ ಸಂಜಯ್ ಸಿಂಗ್ ನೇತೃತ್ವದ ಭಾರತೀಯ ಕುಸ್ತಿ ಒಕ್ಕೂಟವನ್ನು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಅಮಾನತುಗೊಳಿಸಿತ್ತು. ನಂತರ, ಭಾರತೀಯ ಕುಸ್ತಿ ಒಕ್ಕೂಟದ ಕಾರ್ಯಾಚರಣೆಯ ಮೇಲುಸ್ತುವಾರಿಯನ್ನು ತಾತ್ಕಾಲಿಕವಾಗಿ ವಹಿಸಿಕೊಳ್ಳುವಂತೆ ಭಾರತೀಯ ಒಲಿಂಪಿಕ್ ಒಕ್ಕೂಟಕ್ಕೆ ಸೂಚಿಸಲಾಗಿತ್ತು. ಆದರೆ, ಸೋಮವಾರ ದಿಲ್ಲಿ ಹೈಕೋರ್ಟ್ ನೀಡಿರುವ ಆದೇಶದ ಹಿನ್ನೆಲೆಯಲ್ಲಿ, ಭಾರತೀಯ ಕುಸ್ತಿ ಒಕ್ಕೂಟವನ್ನು ಅಮಾನತುಗೊಳಿಸಿದ್ದ ನಿರ್ಧಾರವನ್ನು ಯುವಜನ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಹಿಂಪಡೆದಿದೆ.
ಯುವಜನ ವ್ಯವಹಾರಗಳು ಹಾಗೂ ಕ್ರೀಡಾ ಸಚಿವಾಲಯದ ಈ ನಡೆಯನ್ನು ಖಂಡಿಸಿರುವ ವಿನೇಶ್ ಫೋಗಟ್, ಕುಸ್ತಿ ಒಕ್ಕೂಟದ ಮನೋಸ್ಥೈರ್ಯವನ್ನು ಕ್ರಿಮಿನಲ್ ಹಿನ್ನೆಲೆಯಿರುವವರಿಗೆ ಹಸ್ತಾಂತರಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. “ಈ ವಿಷಯವನ್ನು ಮಾಧ್ಯಮಗಳು ಬಲವಾಗಿ ಪ್ರಶ್ನಿಸಬೇಕು ಎಂದು ನಾನು ಕೋರುತ್ತೇನೆ. ಇದು ಸಂಪೂರ್ಣವಾಗಿ ತಪ್ಪಾಗಿದೆ. ಕ್ರೀಡೆಗಳು ದುಸ್ಥಿತಿಯಲ್ಲಿರುವ ದೇಶವೊಂದರಲ್ಲಿ, ಕುಸ್ತಿ ಒಕ್ಕೂಟವನ್ನು ಗೂಂಡಾಗಳು ಹಾಗೂ ಕ್ರಿಮಿನಲ್ ಗಳ ಕೈಗೆ ಹಸ್ತಾಂತರಿಸಲಾಗುತ್ತಿದೆ” ಎಂದು ಕಿಡಿ ಕಾರಿದ್ದಾರೆ.
ಭಾರತೀಯ ಕುಸ್ತಿ ಒಕ್ಕೂಟದ ನಾಯಕತ್ವದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದ ವಿನೇಶ್ ಫೋಗಟ್, “ನಾವು ಮಾತ್ರ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ನಮ್ಮ ಹೋರಾಟವೆಂದಿಗೂ ಸತ್ಯ ಮತ್ತು ಪ್ರಾಮಾಣಿಕತೆಗಾಗಿಯಾಗಿದ್ದು, ನಾವು ಆ ಮಾರ್ಗದಲ್ಲಿ ಮುಂದುವರಿಯಲಿದ್ದೇವೆ” ಎಂದು ಘೋಷಿಸಿದ್ದಾರೆ.
ಬೃಜ್ ಭೂಷಣ್ ಶರಣ್ ಸಿಂಗ್ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಭಾರತೀಯ ಕುಸ್ತಿ ಒಕ್ಕೂಟದ ವಿರುದ್ಧ ನಡೆದ ಹೋರಾಟದಲ್ಲಿ ತಮ್ಮ ಸಹ ಕುಸ್ತಿ ಪಟುಗಳಾದ ಬಜರಂಗ್ ಪುನಿಯಾ ಹಾಗೂ ಸಾಕ್ಷಿ ಮಲಿಕ್ ರೊಂದಿಗೆ ವಿನೇಶ್ ಫೋಗಟ್ ಮುಂಚೂಣಿಯಲ್ಲಿದ್ದರು. ಅಲ್ಲದೆ, ಭಾರತೀಯ ಕುಸ್ತಿ ಒಕ್ಕೂಟದ ಹಾಲಿ ಅಧ್ಯಕ್ಷ ಸಂಜಯ್ ಸಿಂಗ್ ಗೆ ಬೃಜ್ ಭೂಷಣ್ ಶರಣ್ ಸಿಂಗ್ ರೊಂದಿಗೆ ಸಂಬಂಧವಿದೆ ಎಂದೂ ಅವರು ಆರೋಪಿಸಿದರು.
ಈ ನಡುವೆ, ಕೇಂದ್ರ ಸರಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಕೇಂದ್ರ ಕ್ರೀಡಾ ಸಚಿವ ಡಾ. ಮನ್ಸುಖ್ ಮಾಂಡವಿಯಾ, ಹೈಕೋರ್ಟ್ ಆದೇಶದನ್ವಯ ನಿಷೇಧವನ್ನು ಹಿಂಪಡೆಯಲಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ. “ಈ ಕ್ರಮದಿಂದ ನಮ್ಮ ಕುಸ್ತಿ ಪಟುಗಳು ಏಶ್ಯ ಹಾಗೂ ವಿಶ್ವ ಚಾಂಪಿಯನ್ ಶಿಪ್ ಗಳಲ್ಲಿ ಭಾಗವಹಿಸಲು ಅವಕಾಶ ದೊರೆಯಲಿದ್ದು, ಅವರಿಗೆ ಭವಿಷ್ಯದಲ್ಲಿ ನ್ಯಾಯ ದೊರೆಯುವುದನ್ನು ಖಾತರಿ ಪಡಿಸಲಾಗಿದೆ” ಎಂದು ಅವರು ಹೇಳಿದ್ದಾರೆ.