ಭಾರತೀಯರಿಗೆ ವೀಸಾ ಮುಕ್ತ ಪ್ರವೇಶ ಸ್ಥಗಿತಗೊಳಿಸಲು ಇರಾನ್ ನಿರ್ಧರಿಸಿದ್ದೇಕೆ?, ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯೆ ಏನು?

ಸಾಂದರ್ಭಿಕ ಚಿತ್ರ | Photo Credit : indiatoday.in
ಹೊಸದಿಲ್ಲಿ: ಇರಾನಿನಲ್ಲಿ ಉದ್ಯೋಗಾವಕಾಶ ಒದಗಿಸುವ ಅಥವಾ ಅಲ್ಲಿಂದ ಬೇರೆ ದೇಶಗಳಿಗೆ ಕಳುಹಿಸುವ ಆಮಿಷಗಳನ್ನೊಡ್ಡಿ ಭಾರತೀಯರನ್ನು ವಂಚಿಸುತ್ತಿರುವ ಘಟನೆಗಳ ನಡುವೆ ಅಲ್ಲಿಯ ಸರಕಾರವು ಸಾಮಾನ್ಯ ಭಾರತೀಯ ಪಾಸ್ಪೋರ್ಟ್ಗಳನ್ನು ಹೊಂದಿರುವವರಿಗೆ ವೀಸಾ ಮುಕ್ತ ಪ್ರವೇಶ ಸೌಲಭ್ಯವನ್ನು ನ.22ರಿಂದ ಸ್ಥಗಿತಗೊಳಿಸಲು ನಿರ್ಧರಿಸಿದೆ.
ಈ ಹಿನ್ನೆಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು, ಸಾಮಾನ್ಯ ಭಾರತೀಯ ಪಾಸ್ಪೋರ್ಟ್ಗಳನ್ನು ಹೊಂದಿರುವವರಿಗೆ ಲಭ್ಯವಿರುವ ವೀಸಾ ವಿನಾಯಿತಿ ಸೌಲಭ್ಯದ ಲಾಭವನ್ನು ಪಡೆದುಕೊಂಡು ಭಾರತೀಯ ಪ್ರಜೆಗಳನ್ನು ಇರಾನಿಗೆ ಪ್ರಯಾಣಿಸುವಂತೆ ಆಮಿಷವೊಡ್ಡಿ ವಂಚಿಸಲಾಗುತ್ತಿರುವ ಘಟನೆಗಳ ಕುರಿತು ಭಾರತ ಸರಕಾರಕ್ಕೆ ಮಾಹಿತಿ ನೀಡಲಾಗಿದೆ ಎಂದು ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ.
ಉದ್ಯೋಗದ ಸುಳ್ಳು ಭರವಸೆಗಳನ್ನು ನೀಡಿ ಅಥವಾ ಮೂರನೇ ದೇಶಕ್ಕೆ ಸಾಗಿಸುವುದಾಗಿ ನಂಬಿಸಿ ಭಾರತೀಯ ಪ್ರಜೆಗಳನ್ನು ಇರಾನಿಗೆ ಆಕರ್ಷಿಸುತ್ತಿರುವ ಹಲವಾರು ಘಟನೆಗಳ ಬಗ್ಗೆ ಭಾರತ ಸರಕಾರದ ಗಮನವನ್ನು ಸೆಳೆಯಲಾಗಿದೆ. ವೀಸಾ ಮುಕ್ತ ಪ್ರವೇಶ ಸೌಲಭ್ಯವನ್ನು ಬಳಸಿಕೊಂಡು ಇರಾನ್ಗೆ ತೆರಳುವ ಭಾರತೀಯರ ಪೈಕಿ ಹೆಚ್ಚಿನವರನ್ನು ಒತ್ತೆ ಹಣಕ್ಕಾಗಿ ಅಪಹರಿಸಿದ ಘಟನೆಗಳೂ ನಡೆದಿವೆ ಎಂದು ಹೇಳಿಕೆಯು ತಿಳಿಸಿದೆ.
ಹೀಗಾಗಿ ಈ ಶೋಷಣೆಯನ್ನು ಅಂತ್ಯಗೊಳಿಸಲು ಭಾರತೀಯರು ಇರಾನ್ ಪ್ರವೇಶಿಸಲು ವೀಸಾ ಹೊಂದಿರುವುದು ಅಗತ್ಯವಾಗಲಿದೆ. ಈ ನೀತಿಯು ನ.22ರಿಂದ ಜಾರಿಗೆ ಬರಲಿದ್ದು, ಕ್ರಿಮಿನಲ್ ಶಕ್ತಿಗಳು ವೀಸಾ ಮುಕ್ತ ಪ್ರವೇಶದ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ನೆರವಾಗಲಿದೆ. ನ.22ರಿಂದ ಸಾಮಾನ್ಯ ಪಾಸ್ಪೋರ್ಟ್ಗಳನ್ನು ಹೊಂದಿರುವ ಭಾರತಿಯರು ಇರಾನ್ ಪ್ರವೇಶಿಸಲು ಅಥವಾ ಇರಾನ್ ಮೂಲಕ ಬೇರೆ ದೇಶಗಳಿಗೆ ಪ್ರಯಾಣಿಸಲು ವೀಸಾ ಪಡೆದುಕೊಳ್ಳಬೇಕಾಗುತ್ತದೆ ಎಂದು ಹೇಳಿಕೆಯು ತಿಳಿಸಿದೆ.
ಇರಾನಿಗೆ ಭೇಟಿ ನೀಡಲು ಉದ್ದೇಶಿಸಿರುವ ಭಾರತೀಯ ಪ್ರಜೆಗಳು ಜಾಗರೂಕರಾಗಿರಬೇಕು ಹಾಗೂ ವೀಸಾ ಮುಕ್ತ ಪ್ರಯಾಣ ಅಥವಾ ಇರಾನ್ ಮೂಲಕ ಮೂರನೇ ದೇಶಗಳಿಗೆ ಪ್ರಯಾಣಿಸಲು ನೆರವಾಗುವ ಏಜೆಂಟರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದೂ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸೂಚಿಸಿದೆ.
ಮಧ್ಯ ಏಷ್ಯಾದೊಂದಿಗೆ ದ್ವಿಪಕ್ಷೀಯ ಸಂಬಂಧಗಳನ್ನು ಬಲಗೊಳಿಸುವ ಮತ್ತು ಪ್ರವಾಸೋದ್ಯಮವನ್ನು ಉತ್ತೇಜಿಸುವ ಪ್ರಯತ್ನವಾಗಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಸರಕಾರವು ಸಾಮಾನ್ಯ ಪಾಸ್ಪೋರ್ಟ್ಗಳನ್ನು ಹೊಂದಿರುವ ಭಾರತೀಯರಿಗೆ ವೀಸಾ ಅಗತ್ಯವನ್ನು ಮನ್ನಾ ಮಾಡಲು ನಿರ್ಧರಿಸಿತ್ತು.
ಇರಾನ್ ತನ್ನ ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆಯಿಂದಾಗಿ ಭಾರತದಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗಳನ್ನು ಆಕರ್ಷಿಸುತ್ತಿದೆ. ಆದರೆ ಇತ್ತೀಚಿನ ನಿರ್ಧಾರವು ನೀತಿಯಲ್ಲಿ ಪ್ರಮುಖ ಬದಲಾವಣೆಯನ್ನು ಸೂಚಿಸಿದೆ.







