ದೇಶದ ಪ್ರತಿ ಸಂಸ್ಥೆಯಲ್ಲೂ ದಲಿತರು, ದುರ್ಬಲ ವರ್ಗದ ಜನರು ನಾಯಕತ್ವ ವಹಿಸಿಕೊಳ್ಳುವ ದಿನಕ್ಕಾಗಿ ಕಾಯುತ್ತಿದ್ದೇನೆ: ರಾಹುಲ್ ಗಾಂಧಿ

ರಾಹುಲ್ ಗಾಂಧಿ (PTI)
ಪಾಟ್ನಾ: ದೇಶದಾದ್ಯಂತ ಜಾತಿ ಜನಗಣತಿಯ ಅಗತ್ಯವನ್ನು ಪುನರುಚ್ಚರಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತದ ಪ್ರತಿಯೊಂದು ಸಂಸ್ಥೆಯಲ್ಲಿ ದಲಿತರು ಮತ್ತು ದುರ್ಬಲ ವರ್ಗಗಳ ಜನರು ನಾಯಕತ್ವದ ಸ್ಥಾನವನ್ನು ವಹಿಸಿಕೊಳ್ಳುವ ದಿನಕ್ಕಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.
ಸ್ವಾತಂತ್ರ್ಯ ಹೋರಾಟಗಾರ ಜಗಲಾಲ್ ಚೌಧರಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ಮತ್ತು ಆರೆಸ್ಸೆಸ್ ದೀನದಲಿತರಿಗೆ ಹಕ್ಕುಗಳನ್ನು ಖಾತರಿಪಡಿಸುವ ಸಂವಿಧಾನಕ್ಕೆ ವಿರುದ್ಧವಾಗಿವೆ. ದೇಶದ ಪ್ರಸ್ತುತ ಅಧಿಕಾರ ವರ್ಗದಲ್ಲಿ ಮತ್ತು ಸಂಸ್ಥೆಗಳಲ್ಲಿ ದಲಿತರು ಮತ್ತು ದುರ್ಬಲ ವರ್ಗದವರ ಭಾಗವಹಿಸುವಿಕೆ ಇಲ್ಲ. ದಲಿತರು, ಅಲ್ಪಸಂಖ್ಯಾತರು ಮತ್ತು ಸಮಾಜದ ದುರ್ಬಲ ವರ್ಗಗಳ ನಿಖರವಾದ ಸಂಖ್ಯೆಯನ್ನು ಗುರುತಿಸಲು ಭಾರತದಾದ್ಯಂತ ಜಾತಿಗಣತಿಯ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.
ದಲಿತರು ಮತ್ತು ದುರ್ಬಲ ವರ್ಗಗಳು ದೇಶದ ಪ್ರತಿಯೊಂದು ಸಂಸ್ಥೆಯಲ್ಲಿ ನಾಯಕತ್ವದ ಸ್ಥಾನದಲ್ಲಿರುವ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ. ದೀನದಲಿತರ ಪರವಾಗಿ ನನ್ನ ಹೋರಾಟವನ್ನು ಮುಂದುವರಿಸುತ್ತೇನೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.