LIVE UPDATES| ವಕ್ಫ್ ಕಾಯ್ದೆಯ ಕುರಿತು ಮಧ್ಯಂತರ ಆದೇಶವಿಲ್ಲ: ನಾಳೆಗೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

ಹೊಸದಿಲ್ಲಿ: ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಪ್ರಾರಂಭಗೊಂಡಿದ್ದು, ವಕ್ಫ್ ತಿದ್ದುಪಡಿ ಕಾಯ್ದೆಗೆ ತಡೆ ನೀಡುವ ಆಧಾರದಲ್ಲಿ ಯಾವುದೇ ಅರ್ಜಿಗಳ ವಿಚಾರಣೆ ನಡೆಸುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಸ್ಪಷ್ಟಪಡಿಸಿದ್ದಾರೆ.
ಅರ್ಜಿಗಳ ವಿಚಾರಣೆಯನ್ನು ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಲಾಗಲಿ ಅಥವಾ ಅವುಗಳ ಕುರಿತು ನಿರ್ಧಾರ ಕೈಗೊಳ್ಳಲಾಗಲಿ ಸುಪ್ರೀಂ ಕೋರ್ಟ್‌ಗೆ ಯಾವುದೇ ನಿರ್ಬಂಧಗಳಿಲ್ಲ ಎಂದೂ ಅವರು ಹೇಳಿದರು.
ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಅರ್ಜಿದಾರರ ಪರ ನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ವಕ್ಫ್ ತಿದ್ದುಪಡಿ ಕಾಯ್ದೆಯು ದೇಶವ್ಯಾಪಿ ಪರಿಣಾಮ ಹೊಂದಿದ್ದು, ಹೀಗಾಗಿ, ಈ ಕಾಯ್ದೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಹೈಕೋರ್ಟ್‌ಗಳಿಗೆ ಶಿಫಾರಸು ಮಾಡಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು. ಆದರೆ, ಈ ಮನವಿಯನ್ನು ತಳ್ಳಿ ಹಾಕಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ, ಎಲ್ಲ ಅರ್ಜಿಗಳ ವಿಚಾರಣೆ ನಡೆಸುವಂತೆ ಒಂದು ಹೈಕೋರ್ಟ್‌ಗೆ ಸೂಚಿಸಬಹುದಾಗಿದೆ ಎಂದು ಅಭಿಪ್ರಾಯ ಪಟ್ಟರು.
ಭಾರಿ ಪ್ರಮಾಣದ ಭೂಮಿಗಳನ್ನು ವಕ್ಫ್ ಆಸ್ತಿಗಳೆಂದು ಹಕ್ಕು ಚಲಾಯಿಸಲಾಗುತ್ತಿದೆ ಎಂಬ ಆರೋಪಗಳ ಕುರಿತು ಬುಧವಾರ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತು. ಈ ವೇಳೆ, ದಿಲ್ಲಿ ಹೈಕೋರ್ಟ್ ಆವರಣ ಕೂಡಾ ಹಿಂದೊಮ್ಮೆ ವಕ್ಫ್ ಆಸ್ತಿಯಾಗಿತ್ತು ಎಂದು ಹೇಳಲಾಗುತ್ತಿದೆ ಎಂಬುದರತ್ತ ಮುಖ್ಯ ನ್ಯಾಯಮೂರ್ತಿ ಸಂಜೀವ್ ಖನ್ನಾ ಗಮನ ಸೆಳೆದರು.
Live Updates
- 16 April 2025 4:27 PM IST
ವಕ್ಫ್ ಕಾಯ್ದೆಯ ಕುರಿತು ಮಧ್ಯಂತರ ಆದೇಶವಿಲ್ಲ: ನಾಳೆಗೆ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್
ವಕ್ಫ್ ಕಾಯ್ದೆಯ ಕುರಿತು ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡದೆ ನಾಳೆಗೆ (ಗುರುವಾರ) ವಿಚಾರಣೆ ಮುಂದೂಡಿದೆ.
- 16 April 2025 4:20 PM IST
ಸಂವಿಧಾನದ 26ನೇ ವಿಧಿಯ ಉಲ್ಲಂಘನೆ: ಕಪಿಲ್ ಸಿಬಲ್
ವಕ್ಫ್ ತಿದ್ದುಪಡಿ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅರ್ಜಿ ಸಲ್ಲಿಸಿರುವ ಅರ್ಜಿದಾರರ ಪರ ವಾದಿಸಿದ ಮತ್ತೊಬ್ಬ ಹಿರಿಯ ವಕೀಲ ಕಪಿಲ್ ಸಿಬಲ್, "ವಕ್ಫ್ ಮಂಡಳಿಯಲ್ಲಿ ಮುಸ್ಲಿಮೇತರರ ನೇಮಕಕ್ಕೆ ಅವಕಾಶ ನೀಡಿರುವುದು ಸಂವಿಧಾನದ 26ನೇ ವಿಧಿಯ ಉಲ್ಲಂಘನೆ" ಎಂದು ವಾದಿಸಿದರು.
- 16 April 2025 4:11 PM IST
ನೀವು ಹಿಂದೂ ಮಂಡಳಿಗಳಲ್ಲಿ ಮುಸ್ಲಿಮರಿಗೆ ಅವಕಾಶ ನೀಡುತ್ತೀರಾ?: ಕೇಂದ್ರ ಸರಕಾರಕ್ಕೆ ಸುಪ್ರೀಂ ತರಾಟೆ
"ಸರಕಾರವೇನಾದರೂ ಹಿಂದೂ ಧಾರ್ಮಿಕ ದತ್ತಿ ಮಂಡಳಿಗಳಲ್ಲಿ ಮುಸ್ಲಿಮರ ನೇಮಕಕ್ಕೆ ಅವಕಾಶ ನೀಡುತ್ತದೆಯೆ?" ಎಂದು ಕೇಂದ್ರ ಸರಕಾರವನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತು.
ನೂತನ ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿನ ವಿವಿಧ ನಿಯಮಗಳು, ವಿಶೇಷವಾಗಿ ಬಳಕೆದಾರರ ಆಸ್ತಿಯನ್ನು ಬಳಸಿಕೊಳ್ಳುವ ವಕ್ಫ್‌ಗೆ ರೂಪಿಸಲಾಗಿರುವ ನಿಯಮಗಳ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಕಠಿಣ ಪ್ರಶ್ನೆಗಳನ್ನು ಒಡ್ಡಿತು.