ವಯನಾಡ್ ಭೂಕುಸಿತ | ಸಾವಿನ ಸಂಖ್ಯೆ 290ಕ್ಕೆ ಏರಿಕೆ; ಆರು ಜಿಲ್ಲೆಗಳಲ್ಲಿ ರಜೆ

PC: x.com/IndianExpress
ವಯನಾಡ್: ಕೇರಳದಲ್ಲಿ ವ್ಯಾಪಕ ಮಳೆ ಮುಂದುವರಿದಿದ್ದು, ವಯನಾಡ್ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 290ಕ್ಕೇರಿದೆ. ತ್ರಿಶೂರ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಭಾರತೀಯ ಹವಾಮಾನ ಇಲಾಖೆ ವಯನಾಡ್ ಸೇರಿದಂತೆ ಈ ಜಿಲ್ಲೆಗಳಲ್ಲಿ ಶನಿವಾರದವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ.
ಇಡುಕ್ಕಿ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿ ಶಾಲೆಗಳನ್ನು ಪರಿಹಾರ ಶಿಬಿರಗಳಾಗಿ ಮಾರ್ಪಡಿಸಲಾಗಿದ್ದು, ಶುಕ್ರವಾರ ಕೂಡಾ ರಜೆ ಮುಂದುವರಿದಿದೆ. ಆಗಸ್ಟ್ 5ರವರೆಗೆ ಕೇರಳದಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.
ಪ್ರತಿಕೂಲ ಹವಾಮಾನದ ನಡುವೆಯೂ ಪರಿಹಾರ ಕಾರ್ಯಾಚರಣೆ ಮುಂದುವರಿದಿದ್ದು, ಮೃತರ ಸಂಖ್ಯೆ 290ನ್ನು ತಲುಪಿದೆ ಎಂದು ವಿಶ್ವಾಸಾರ್ಹ ಮೂಲಗಳು ಹೇಳಿವೆ. ಇದುವರೆಗೆ ಕನಿಷ್ಠ 190 ಮಂದಿ ಮೃತಪಟ್ಟಿರುವುದು ದೃಢಪಟ್ಟಿದೆ. ಹಲವು ಮಂದಿ ಇನ್ನೂ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ವಯನಾಡ್ ಜಿಲ್ಲಾಡಳಿತದ ಹೇಳಿಕೆಯ ಪ್ರಕಾರ, ಮೃತಪಟ್ಟವರಲ್ಲಿ 27 ಮಕ್ಕಳು ಮತ್ತು 76 ಮಂದಿ ಮಹಿಳೆಯರು ಸೇಋಇದ್ದಾರೆ. 225ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಗಾಯಾಳುಗಳು ಮುಂಡಕ್ಕೈ ಮತ್ತು ಚೂರಲ್ ಮಲ ಗ್ರಾಮದವರು.
ಧಾರಾಕಾರ ಮಳೆ, ರಸ್ತೆ ಹಾಗೂ ಸೇತುವೆಗಳು ಕುಸಿದಿರುವುದು, ಸಾಧನ ಸಲಕರಣೆಗಳ ಕೊರತೆ ಮತ್ತಿತರ ಕಾರಣಗಳಿಂದ ತುರ್ತು ಸಿಬ್ಬಂದಿ ರಾಶಿಬಿದ್ದ ಮಣ್ಣನ್ನು ತೆರವುಗೊಳಿಸುವುದು ಕಷ್ಟಸಾಧ್ಯವಾಗಿದೆ. ದೊಡ್ಡ ಮರಗಳು ಕೂಡಾ ಮನೆಗಳ ಮೇಲೆ ಬಿದ್ದಿರುವುದು ಕೂಡಾ ಕಾರ್ಯಾಚರಣೆಗೆ ತಡೆಯಾಗಿದೆ ಎಂದು ಮೂಲಗಳು ವಿವರಿಸಿವೆ.







