ವಾರದ ಹಿಂದೆಯೇ ನಿಜ್ಜರ್ ಹತ್ಯೆ ಪುರಾವೆ ಭಾರತದ ಜತೆ ಹಂಚಿಕೊಂಡಿದ್ದೇವೆ: ಕೆನಡಾ ಪ್ರಧಾನಿ

ಹೊಸದಿಲ್ಲಿ: ಖಲಿಸ್ತಾನಿ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಕುರಿತಂತೆ ಇರುವ ಆರೋಪಕ್ಕೆ ಸಂಬಂಧಿಸಿದ ಪುರಾವೆಗಳನ್ನು ವಾರದ ಹಿಂದೆಯೇ ಭಾರತ ಸರ್ಕಾರದ ಜತೆ ಹಂಚಿಕೊಂಡಿದ್ದಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಹೇಳಿದ್ದಾರೆ.
"ನಾನು ಸೋಮವಾರ ಮಾತನಾಡಿರುವ ವಿಶ್ವಾಸಾರ್ಹ ಆರೋಪಗಳ ಬಗೆಗಿನ ಮಾಹಿತಿಯನ್ನು ಬಹಳಷ್ಟು ಹಿಂದೆಯೇ ಭಾರತದ ಜತೆ ಹಂಚಿಕೊಂಡಿದ್ದೇವೆ" ಎಂದು ಒಟ್ಟಾವದಲ್ಲಿ ಸುದ್ದಿಗೋಷ್ಠಿ ನಡೆಸಿದ ಟ್ರೂಡೊ ಸ್ಪಷ್ಟಪಡಿಸಿದ್ದಾರೆ. "ಭಾರತದ ಜತೆ ರಚನಾತ್ಮಕವಾಗಿ ಕಾರ್ಯನಿರ್ವಹಿಸಲು ನಾವು ಸಿದ್ಧ. ನಮ್ಮ ಜತೆ ಅವರೂ ಕೈಜೋಡಿಸಿದಲ್ಲಿ ಈ ಗಂಭೀರ ವಿಷಯದ ಮೂಲಕ್ಕೆ ಹೋಗಲು ಸಾಧ್ಯ" ಎಂದು ಅಭಿಪ್ರಾಯಪಟ್ಟಿದ್ದಾರೆ.
ಬ್ರಿಟಿಷ್ ಕೊಲಂಬಿಯಾದಲ್ಲಿ ಜೂನ್ 18ರಂದು ನಡೆದ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತೀಯ ಏಜೆಂಟರು ಷಾಮೀಲಾಗಿರುವ ಸಾಧ್ಯತೆ ಇದೆ ಎಂದು ಕೆನಡಾ ಪ್ರಧಾನಿ ಆರೋಪ ಮಾಡಿರುವುದು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಹದಗೆಡಲು ಕಾರಣವಾಗಿತ್ತು. ಭಾರತ 2020ರಲ್ಲಿ ನಿಜ್ಜರ್ ನನ್ನು ಉಗ್ರಗಾಮಿ ಎಂದು ಘೋಷಿಸಿತ್ತು.
ಕೆನಡಾ ಪ್ರಧಾನಿ ಹೇಳಿಕೆಯನ್ನು ಭಾರತ 'ಅರ್ಥಹೀನ' ಮತ್ತು 'ದುರುದ್ದೇಶಪೂರಿತ' ಎಂದು ತಿರಸ್ಕರಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತೀಯ ರಾಜತಾಂತ್ರಿಕ ಅಧಿಕಾರಿಯನ್ನು ಉಚ್ಚಾಟಿಸಿದ ಕ್ರಮಕ್ಕೆ ಪ್ರತೀಕಾರವಾಗಿ ಕೆನಡಾ ರಾಜತಾಂತ್ರಿಕ ಅಧಿಕಾರಿಯನ್ನು ಭಾರತ ಉಚ್ಚಾಟಿಸಿತ್ತು.
ಕೆನಡಾ ತನ್ನ ಹೇಳಿಕೆಗೆ ಪುರಾವೆಯಾಗಿ ಸಾರ್ವಜನಿಕವಾಗಿ ಯಾವುದೇ ಮಾಹಿತಿಯನ್ನು ಒದಗಿಸಿಲ್ಲ. ಫೈವ್ ಐ ನೆಟ್ವರ್ಕ್ ಎಂಬ ಐದು ದೇಶಗಳ ಗುಪ್ತಚರ ಚಾಲ ನೀಡಿದ ಮಾಹಿತಿಯ ಆಧಾರದಲ್ಲಿ ಒಟ್ಟಾವ ಈ ಆರೋಪ ಮಾಡಿದೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.







