ಇಂಫಾಲದಲ್ಲಿ ನಮ್ಮನ್ನು ಬಲವಂತದಿಂದ ತೆರವುಗೊಳಿಸಲಾಗಿದೆ: ಐದು ಕುಕಿ ಕುಟುಂಬಗಳ ಆರೋಪ

ಹೊಸದಿಲ್ಲಿ: ಭದ್ರತಾ ಪಡೆಗಳು ನಮ್ಮ ಮನೆಗಳಿಂದ ನಮ್ಮನ್ನು ಬಲವಂತವಾಗಿ ಹೊರಹಾಕಿದ್ದಾರೆ ಎಂದು ಮಣಿಪುರದ ರಾಜಧಾನಿ ಇಂಫಾಲ್ ನಲ್ಲಿ ವಾಸಿಸುತ್ತಿದ್ದ ಐದು ಕುಕಿ ಕುಟುಂಬಗಳು ಮಂಗಳವಾರ ಆರೋಪಿಸಿವೆ
ಗೃಹ ಇಲಾಖೆಯ ನಿರ್ದೇಶನದ ಮೇರೆಗೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಶಸ್ತ್ರಸಜ್ಜಿತ ಸಿಬ್ಬಂದಿ ಹೇಳಿಕೊಂಡಿದ್ದಾರೆ ಎಂದು ನ್ಯೂ ಲಂಬುಲೇನ್ ಪ್ರದೇಶದ ನಿವಾಸಿಗಳು ತಿಳಿಸಿದ್ದಾರೆ.
ನಮ್ಮಲ್ಲಿನ ಇಪ್ಪತ್ನಾಲ್ಕು ಜನರಿಗೆ ನಮ್ಮ ಸಾಮಾನು-ಸರಂಜಾಮುಗಳನ್ನು ಪ್ಯಾಕ್ ಮಾಡಲು ಸಮಯವನ್ನು ಸಹ ನೀಡಲಾಗಿಲ್ಲ. ನಮ್ಮನ್ನು ಅಕ್ಷರಶಃ ಕ್ಯಾಸ್ಪರ್ ಬುಲೆಟ್ ಪ್ರೂಫ್ ವಾಹನಕ್ಕೆ ತಳ್ಳಲಾಯಿತು, ”ಎಂದು ಕುಕಿಗಳು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
"ನಮ್ಮಲ್ಲಿ ಅನೇಕರನ್ನು ನಿದ್ರೆಯಿಂದ ಎಚ್ಚರಗೊಳಿಸಿ ನಾವು ಧರಿಸಿದ್ದ ಬಟ್ಟೆಗಳೊಂದಿಗೆ ಕಾಯುವ ವಾಹನಕ್ಕೆ ತಳ್ಳಿದ್ದಾರೆ’’ ಎಂದು ಕುಕಿಗಳು ಆರೋಪಿಸಿದ್ದಾರೆ.
ಮೇ 3 ರಂದು ರಾಜ್ಯದಲ್ಲಿ ಜನಾಂಗೀಯ ಹಿಂಸಾಚಾರ ಆರಂಭವಾದ ನಂತರ ನ್ಯೂ ಲಂಬುಲೇನ್ ಪ್ರದೇಶದಲ್ಲಿ ವಾಸಿಸುವ ಸುಮಾರು 300 ಕುಕಿ ಕುಟುಂಬಗಳು ತಮ್ಮ ಮನೆಗಳನ್ನು ತೊರೆದಿದ್ದರು. ಆದಾಗ್ಯೂ, 24 ಸದಸ್ಯರನ್ನು ಒಳಗೊಂಡ ಐದು ಕುಟುಂಬಗಳು ಇಂಫಾಲದಲ್ಲೇ ಉಳಿದುಕೊಂಡಿದ್ದವು. ದಿ ಹಿಂದೂ ಪ್ರಕಾರ, ಈ ಪ್ರದೇಶವನ್ನು ಕೇಂದ್ರ ಭದ್ರತಾ ಪಡೆಗಳು ದಿನದ 24 ಗಂಟೆಯು ಕಾವಲು ಕಾಯುತ್ತಿದ್ದವು.







