ಕಾಂಗ್ರೆಸ್ ನೀಡಿದ ಪಿಒಕೆ ವಾಪಾಸು ತರುತ್ತೇವೆ: ರಾಜ್ಯಸಭೆಯಲ್ಲಿ ಅಮಿತ್ ಶಾ

ಹೊಸದಿಲ್ಲಿ: ರಾಜ್ಯಸಭೆಯಲ್ಲಿ ಬುಧವಾರ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಗೃಹಸಚಿವ ಅಮಿತ್ ಶಾ,"ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಕಾಶ್ಮೀರದ ಭಾಗವನ್ನು ಪಾಕಿಸ್ತಾನಕ್ಕೆ ನೀಡಿದೆ; ಆದರೆ ಬಿಜೆಪಿ ಸರ್ಕಾರ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಾಸು ತರಲಿದೆ" ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ 2008ರ ಮುಂಬೈ ಉಗ್ರರ ದಾಳಿಯ ಬಳಿಕ ಹಿಂದೂ ಉಗ್ರಗಾಮಿ ಎಂಬ ಪದವನ್ನು ಆರಂಭಿಸಿತು. ಆದರೆ ಹಿಂದೂಗಳು ಎಂದೂ ಉಗ್ರಗಾಮಿಗಳಾಗಲು ಸಾಧ್ಯವಿಲ್ಲ. ಭಯೋತ್ಪಾದನೆ ವಿಚಾರದಲ್ಲಿ ಬಿಜೆಪಿಯನ್ನು ಪ್ರಶ್ನಿಸುವ ಹಕ್ಕು, ಓಲೈಕೆ ರಾಜಕಾರಣದಲ್ಲಿ ತೊಡಗಿರುವ ಕಾಂಗ್ರೆಸ್ ಪಕ್ಷಕ್ಕಿಲ್ಲ. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಈ ಪಿಡುಗನ್ನು ನಿವಾರಿಸಲು ಯಾವುದೇ ದಿಟ್ಟ ನೀತಿಯನ್ನು ಜಾರಿಗೊಳಿಸಿಲ್ಲ ಎಂದು ಆಪಾದಿಸಿದರು.
ಸದನದಲ್ಲಿ ಆಪರೇಷನ್ ಸಿಂಧೂರ ಬಗೆಗಿನ ಚರ್ಚೆಯಲ್ಲಿ ಮಾತನಾಡಿದ ಅವರು, ಉಗ್ರರ ದಾಳಿಗಳ ಬಳಿಕ ಯುಪಿಎ ಸರ್ಕಾರ ಎಂದೂ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ; ಆದರೆ ಮೋದಿ ಸರ್ಕಾರ ಅಂಥ ಪ್ರತಿ ಘಟನೆಗಳ ಬಳಿಕವೂ ಕ್ರಮ ಕೈಗೊಂಡಿದೆ ಎಂದು ಸಮರ್ಥಿಸಿಕೊಂಡರು. ಬಾಲಾಕೋಟ್ ಘಟನೆ ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್ ಮತ್ತು ಪಹಲ್ಗಾಮ್ ದಾಳಿಯ ಬಳಿಕ ನಡೆದ ಆಪರೇಷನ್ ಸಿಂಧೂರ ಹಾಗೂ ಆಪರೇಷನ್ ಮಹಾದೇವ್ ಕಾರ್ಯಾಚರಣೆಯನ್ನು ಉದಾಹರಿಸಿದರು.
ಚೀನಾಗೆ ಸಂಬಂಧಿಸಿದಂತೆ ಸರ್ಕಾರದ ವಿದೇಶಾಂಗ ನೀತಿಯನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡ ಅವರು, 1960ರ ದಶಕದಿಂದಲೂ ಚೀನಾ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಪ್ರೀತಿ ಇತ್ತು. ಕಾಂಗ್ರೆಸ್ ನ ಆದ್ಯತೆ ಎಂದೂ ದೇಶದ ಭದ್ರತೆ ಆಗಿರಲಿಲ್ಲ ಎಂದು ಹೇಳಿದರು.







