ಬಾಹ್ಯಾಕಾಶ ನಿಲ್ದಾಣಕ್ಕೆ ʼಶುಭಾಗಮನʼ
►ಚರಿತ್ರೆ ಸೃಷ್ಟಿಸಿದ ಭಾರತದ ಗಗನಯಾನಿ ಶುಭಾಂಶು ಶುಕ್ಲಾ ►ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದ ಮೊದಲ ಭಾರತೀಯ ►ಇತರ ಗಗನಯಾನಿಗಳೊಂದಿಗೆ ನಿಲ್ದಾಣಕ್ಕೆ ಪ್ರವೇಶ

PC : @IndianTechGuide
ಹೊಸದಿಲ್ಲಿ: ಭಾರತದ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾನಿಗಳನ್ನೊಳಗೊಂಡ ಆ್ಯಕ್ಸಿಯಂ4 ಮಿಶನ್ ಬಾಹ್ಯಾಕಾಶ ನೌಕೆಯು ಗುರುವಾರ ಸಂಜೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ್ದು, ನೌಕೆಯಲ್ಲಿನ ‘ ಕ್ರ್ಯೂಡ್ರ್ಯಾಗನ್ ಕ್ಯಾಪ್ಸೂಲ್’ ಯಶಸ್ವಿಯಾಗಿ ಡಾಕಿಂಗ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಬಂದಿಳಿದ ಮೊದಲ ಭಾರತೀಯನೆಂಬ ದಾಖಲೆಯನ್ನು ಶುಭಾಂಶು ಶುಕ್ಲಾ ಅವರು ನಿರ್ಮಿಸಿದ್ದಾರೆ.
ಫ್ಲೋರಿಡಾದ ಕೆನೆಡಿ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಉಡಾವಣೆಗೊಂಡ ಆ್ಯಕ್ಸಿಯಂ 4 ಬಾಹ್ಯಾಕಾಶ ನೌಕೆಯು 28 ತಾಸುಗಳ ಪಯಣದ ಬಳಿಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದೆ. ಡ್ರ್ಯಾಗನ್ ಸ್ಪೇಸ್ ಕ್ಯಾಪ್ಸೂಲ್ ಗುರುವಾರ ಸಂಜೆ 4:00 ಗಂಟೆಗೆ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕಿಂಗ್ ಮಾಡಿದೆ. ಸಂಜೆ 7 ಗಂಟೆಯ ವೇಳೆಗೆ ಸ್ಪೇಸ್ ಕ್ಯಾಪ್ಸೂಲ್ನಿಂದ ಎಲ್ಲಾ ನಾಲ್ವರು ಗಗನಯಾನಿಗಳು ಸ್ಪೇಸ್ ಕ್ಯಾಪ್ಸೂಲ್ನಿಂದ ಹೊರಬಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವನ್ನು ಪ್ರವೇಶಿಸಿದರು.
ಅಮೆರಿಕದ ಪೆಗ್ಗಿ ವಿಟ್ಸನ್, ಪೋಲ್ಯಾಂಡ್ನ ಸ್ಲಾವೋಝ್ ವಿಸ್ನೀವ್ಸ್ಕಿ ಹಾಗೂ ಹಂಗರಿಯ ಟಿಬೊರ್ ಅವರು ಶುಭಾಂಶು ಶುಕ್ಲಾ ಜೊತೆಗೆ ಡ್ರ್ಯಾಗನ್ ಕ್ಯಾಪ್ಸೂಲ್ ಮೂಲಕ ಬಾಹ್ಯಾಕಾಶ ನಿಲ್ದಾಣವನ್ನು ತಲುಪಿದ ಇತರ ಮೂವರು ಗಗನಯಾನಿಗಳಾಗಿದ್ದಾರೆ.
ಆ್ಯಕ್ಸಿಯಂ-4 ಬಾಹ್ಯಾಕಾಶ ನೌಕೆಯನ್ನು ಹೊತ್ತ ಸ್ಪೇಸ್ ಎಕ್ಸ್ನ ಫಾಲ್ಕನ್9 ರಾಕೆಟ್ ಬುಧವಾರ ಮಧ್ಯಾಹ್ನ 12:01 ಗಂಟೆಗೆ ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ನಿಲ್ದಾಣದಿಂದ ಉಡಾವಣೆಗೊಂಡಿತ್ತು. ಕಳೆದ ಕೆಲವು ವಾರಗಳಿಂದ ಆ್ಯಕ್ಸಿಯಂ 4 ಮಿಶನ್ ನ ಉಡಾವಣೆಯು ತಾಂತ್ರಿಕ ಹಾಗೂ ಸುರಕ್ಷತಾ ಕಾರಣಗಳಿಗಾಗಿ ಆರು ಬಾರಿ ವಿಳಂಬಗೊಂಡಿತ್ತು. ಈ ಮಿಶನ್ ನಲ್ಲಿ ಶುಭಾಂಶು ಶುಕ್ಲಾ ಅವರು ಮಿಶನ್ ಪೈಲಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆಕ್ಸಿಯಂ4 ಮಿಶನ್ ನ ಗಗನಯಾನಿಗಳು 14 ದಿನಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಲಿದ್ದಾರೆ. ಶುಭಾಂಶು ಶುಕ್ಲಾ ಅವರು ಇಸ್ರೋದ ಪರವಾಗಿ ಆರು ಪ್ರಯೋಗಗಳನ್ನು ನಡೆಸಲಿದ್ದಾರೆ.
ಈ ಮಹತ್ವಾಕಾಂಕ್ಷಿ ಗಗನಯಾನ ಯೋಜನೆಯನ್ನು ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ, ಅಮೆರಿಕದ ಖಾಸಗಿ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆಕ್ಸಿಯಂ ಸ್ಪೇಸ್ ಹಾಗೂ ಎಲಾನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಆಯೋಜಿಸಿದ್ದವು.







