ಪಶ್ಚಿಮ ಬಂಗಾಳ| ಮತದಾರರ ಪಟ್ಟಿಯಿಂದ 3,700 ಮತದಾರರ ಹೆಸರು ಡಿಲೀಟ್: ಆತಂಕದಲ್ಲಿ ಮಹೀಷಬಾಥನಿ ಗ್ರಾಮದ ಜನರು

ಸಾಂದರ್ಭಿಕ ಚಿತ್ರ | Photo Credit : PTI
ಕೋಲ್ಕತಾ, ಎ. 9: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ ಬಳಿಕ ಪಶ್ಚಿಮಬಂಗಾಳದ ಮಾಲ್ಡಾದ ಮಹೀಷಬಾಥನಿ ಗ್ರಾಮದ 3,700 ಮತದಾರರನ್ನು ಕೈ ಬಿಡಲಾಗಿದೆ. ಇದರಿಂದ ಇಲ್ಲಿನ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಬಳಿಕ ಗ್ರಾಮದ 27,000 ಮತದಾರರ ಪೈಕಿ 3,700 ಹೆಸರುಗಳನ್ನು ತೆಗೆದು ಹಾಕಲಾಗಿದೆ. ಇದರಿಂದ ರಾಜ್ಯಾದ್ಯಂತದ ಲಕ್ಷಾಂತರ ಇತರ ಜನರಂತೆ ಇವರು ಕೂಡ ಎಪ್ರಿಲ್ 23ರಂದು ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ.
ಅವರು ಮೇಲ್ಮನವಿ ಸಲ್ಲಿಸಲು ಆಯ್ಕೆ ಮಾಡಿಕೊಂಡರೆ ಸುಪ್ರೀಂ ಕೋರ್ಟ್ ಆದೇಶದಂತೆ ಸ್ಥಾಪಿಸಲಾದ ಮೇಲ್ಮನವಿ ನ್ಯಾಯ ಮಂಡಳಿ ಅವರ ಸ್ಥಿತಿಗತಿಯನ್ನು ನಿರ್ಧರಿಸುವುದರಿಂದ ಅವರ ಭವಿಷ್ಯ ಅನಿಶ್ಚಿತವಾಗಿದೆ.
ಅವರು 2029ರ ಲೋಕಸಭೆ ಚುನಾವಣೆಯಲ್ಲಿ ಮತ ಹಾಕಬಹುದೇ ಎಂಬುದನ್ನು ಮೇಲ್ಮನವಿ ನ್ಯಾಯಮಂಡಳಿ ಸಂಪೂರ್ಣವಾಗಿ ಕಾರ್ಯ ನಿರ್ವಹಿಸಲು ಆರಂಭಿಸಿದ ನಂತರ ತೀರ್ಮಾನಿಸಲಾಗುತ್ತದೆ.
ಚುನಾವಣಾ ಆಯೋಗದ ನಿಯಮಗಳ ಪ್ರಕಾರ, ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದ ಮತದಾರರು ನ್ಯಾಯ ಮಂಡಳಿಯನ್ನು ಸಂಪರ್ಕಿಸಬಹುದು. ಆದರೆ, ಅವರು ಮೊದಲ ಹಂತದ ಮತದಾನದಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ.




