ಮತದಾರರ ಪಟ್ಟಿಯಿಂದ ಹೆಸರು ಅಳಿಸುವಿಕೆಗೆ ವಿರೋಧ | ಸತತ ಎರಡನೆ ದಿನವೂ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯಿಂದ ಧರಣಿ

ಮಮತಾ ಬ್ಯಾನರ್ಜಿ | Photo Credit : PTI
ಕೋಲ್ಕತ್ತಾ: ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ನಂತರವೂ ಪಶ್ಚಿಮ ಬಂಗಾಳ ಮತದಾರರ ಪಟ್ಟಿಯಿಂದ ನಿರಂಕುಶವಾಗಿ ಮತದಾರರ ಹೆಸರನ್ನು ಕೈಬಿಡಲಾಗುತ್ತಿದೆ ಎಂದು ಆರೋಪಿಸಿ ಪಶ್ಚಿಮ ಬಂಗಾಳ ಮುಖ್ಯಯಮಂತ್ರಿ ಮಮತಾ ಬ್ಯಾನರ್ಜಿ ಶನಿವಾರ ಸತತ ಎರಡನೆ ದಿನವೂ ಧರಣಿ ನಡೆಸುತ್ತಿದ್ದಾರೆ.
ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮತದಾನದ ಹಕ್ಕನ್ನು ಕಸಿಯಲು ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿ ಶುಕ್ರವಾರ ಕೇಂದ್ರ ಕೋಲ್ಕತ್ತಾದ ಮೆಟ್ರೋ ಚಾನೆಲ್ ಬಳಿ ಶುಕ್ರವಾರ ಮಮತಾ ಬ್ಯಾನರ್ಜಿ ಪ್ರತಿಭಟನೆ ಪ್ರಾರಂಭಿಸಿದ್ದರು.
ಪ್ರತಿಭಟನಾ ಸ್ಥಳದಲ್ಲಿ ರಾತ್ರಿಪೂರಾ ಉಳಿದಿದ್ದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಟಿಎಂಸಿ ಪಕ್ಷದ ನಾಯಕರು, ಶಾಸಕರು ಹಾಗೂ ಪಕ್ಷದ ಕಾರ್ಯಕರ್ತರು ಸುತ್ತುವರಿದಿದ್ದರು. ಇದರಿಂದ ಜನನಿಬಿಡ ಜಾಗ ತಾತ್ಕಾಲಿಕ ರಾಜಕೀಯ ಶಿಬಿರವಾಗಿ ಮಾರ್ಪಟ್ಟಿತ್ತು.
ಶುಕ್ರವಾರ ಮಧ್ಯಾಹ್ನ ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ್ದ ಮಮತಾ ಬ್ಯಾನರ್ಜಿ, “ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಅಭಿಯಾನದಲ್ಲಿ ಬೃಹತ್ ಸಂಖ್ಯೆಯ ಮತದಾರರನ್ನು ಕೈಬಿಡಲಾಗಿದೆ” ಎಂದು ಆರೋಪಿಸಿದ್ದರು.
“ಹಲವಾರು ಮತದಾರರನ್ನು ಮೃತಪಟ್ಟಿದ್ದಾರೆ ಎಂದು ತಪ್ಪಾಗಿ ನಮೂದಿಸಲಾಗಿದೆ” ಎಂದು ಪುನರುಚ್ಚರಿಸಿದ ಮಮತಾ ಬ್ಯಾನರ್ಜಿ, “ನಾನು ಅಂತಹ ಮತದಾರರನ್ನು ಮಾಧ್ಯಮ ಮತ್ತು ಚುನಾವಣಾ ಆಯೋಗದ ಮುಂದೆ ಹಾಜರುಪಡಿಸಲು ಸಿದ್ಧವಿದ್ದೇನೆ. ಇದು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ನೆರವು ನೀಡಲು ಮತದಾರರ ಪಟ್ಟಿಯನ್ನು ತಿರುಚುವ ಪ್ರಯತ್ನವಾಗಿದೆ” ಎಂದೂ ಆರೋಪಿಸಿದ್ದಾರೆ.







