West Bengal | ಟಿಎಂಸಿ ಕಚೇರಿಯಲ್ಲಿ ನೂರಾರು ಮತದಾರರ ಚೀಟಿ, ಆಧಾರ್ ಕಾರ್ಡ್ ಪತ್ತೆ

PC | PTI
ಕೋಲ್ಕತ್ತಾ, ಮೇ 28: ಕೋಲ್ಕತ್ತಾದ ತಾಂಗ್ರಾ ಪ್ರದೇಶದಲ್ಲಿರುವ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಸ್ಥಳೀಯ ಕಚೇರಿಯೊಂದರಲ್ಲಿ ನೂರಾರು ಮತದಾರರ ಗುರುತಿನ ಚೀಟಿಗಳು ಹಾಗೂ ಆಧಾರ್ ಕಾರ್ಡ್ಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ವಾರ್ಡ್ ಸಂಖ್ಯೆ 57ರ ತಾಂಗ್ರಾ ಸೆಕೆಂಡ್ ಲೇನ್ನಲ್ಲಿರುವ ಟಿಎಂಸಿ ಕಚೇರಿಯ ಕಪಾಟಿನಲ್ಲಿ ಸುಮಾರು 300ಕ್ಕೂ ಹೆಚ್ಚು ಗುರುತಿನ ದಾಖಲೆಗಳು ಪತ್ತೆಯಾಗಿವೆ. ಮತದಾರರು ಮತಚಲಾಯಿಸದಂತೆ ತಡೆಯುವ ಉದ್ದೇಶದಿಂದಲೇ ಈ ದಾಖಲೆಗಳನ್ನು ಕಚೇರಿಯಲ್ಲಿ ಇರಿಸಲಾಗಿತ್ತು ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದ್ದಾರೆ.
‘ಮತದಾರರು ಮತಚಲಾಯಿಸದಂತೆ ತಡೆಯಲು ಅವರ ಗುರುತಿನ ಚೀಟಿಗಳನ್ನು ತಡೆಹಿಡಿಯಲಾಗಿತ್ತು’ ಎಂದು ಬಿಜೆಪಿ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
ಸ್ಥಳೀಯ ನಿವಾಸಿ ಸೌಮೆನ್ ವಿಕ್ಕಿ ದಾಸ್ ಮಾತನಾಡಿ, ಚುನಾವಣೆಗೆ ಮುನ್ನ ತನ್ನ ಆಧಾರ್ ಕಾರ್ಡ್ ಕಾಣೆಯಾಗಿದ್ದು, ಇದೀಗ ಟಿಎಂಸಿ ಕಚೇರಿಯಲ್ಲಿ ಪತ್ತೆಯಾದ ದಾಖಲೆಗಳಲ್ಲಿ ಅದು ದೊರೆತಿದೆ ಎಂದು ತಿಳಿಸಿದ್ದಾರೆ.
‘ಚುನಾವಣೆಗೆ ಮುನ್ನ ನನ್ನ ಆಧಾರ್ ಕಾರ್ಡ್ ನಾಪತ್ತೆಯಾಗಿತ್ತು. ಇಲ್ಲಿ ಪತ್ತೆಯಾದ ದಾಖಲೆಗಳಲ್ಲಿ ಅದು ದೊರೆತಿದೆ’ ಎಂದು ಅವರು ಹೇಳಿದ್ದಾರೆ.
ಮೇ 4ರಂದು ಚುನಾವಣೆ ಘೋಷಣೆಯಾದ ಬಳಿಕ ಟಿಎಂಸಿ ಕಾರ್ಯಕರ್ತರು ಕಚೇರಿಗೆ ಬಂದಿರುವುದು ಕಂಡುಬಂದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
‘ಕಚೇರಿ ಹಲವು ದಿನಗಳಿಂದ ನಿರ್ಜನವಾಗಿತ್ತು. ಸ್ಥಳೀಯರು ಒಳಗೆ ಪ್ರವೇಶಿಸಿದಾಗ ಈ ದಾಖಲೆಗಳು ಪತ್ತೆಯಾಗಿವೆ’ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ಆದರೆ, ಈ ಆರೋಪಗಳಿಗೆ ಸಂಬಂಧಿಸಿದಂತೆ ಟಿಎಂಸಿ ಪಕ್ಷದಿಂದ ತಕ್ಷಣ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಈ ಸಂಬಂಧ ಇನ್ನೂ ಅಧಿಕೃತ ದೂರು ದಾಖಲಾಗಿಲ್ಲ. ಪ್ರಕರಣದ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.






