ಮಧ್ಯರಾತ್ರಿ ಅಭಿಷೇಕ್ ಬ್ಯಾನರ್ಜಿ ನಿವಾಸದ ಮೇಲೆ ಪಶ್ಚಿಮ ಬಂಗಾಳ ಪೊಲೀಸರ ದಾಳಿ

Photo credit: ANI
ಕೋಲ್ಕತ್ತಾ: ತೃಣಮೂಲ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಕಾರ್ಯದರ್ಶಿ ಸುಮಿತ್ ರಾಯ್ ಶೋಧ ಕಾರ್ಯಾಚರಣೆಯ ಭಾಗವಾಗಿ ಪಶ್ಚಿಮ ಮಿಡ್ನಾಪುರ್ ನ ಸಲ್ಬೋನಿ ಪೊಲೀಸ್ ಠಾಣೆಯ ಪೊಲೀಸರ ತಂಡವೊಂದು ಶನಿವಾರ ನಸುಕಿನಲ್ಲಿ ಕಾಲಿಘಟ್ ರಸ್ತೆಯಲ್ಲಿರುವ ಅಭಿಷೇಕ್ ಬ್ಯಾನರ್ಜಿ ನಿವಾಸದ ಮೇಲೆ ದಾಳಿ ನಡೆಸಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ನನ್ನನ್ನು ಹಲವು ಸುಳ್ಳು ಪ್ರಕರಣಗಳಲ್ಲಿ ಸಿಲುಕಿಸಲಾಗುತ್ತಿದೆ ಎಂದು ಅಭಿಷೇಕ್ ಬ್ಯಾನರ್ಜಿ ಆರೋಪ ಮಾಡಿದ ಬೆನ್ನಿಗೇ ಈ ದಾಳಿ ನಡೆದಿದೆ.
ಅಭಿಷೇಕ್ ಬ್ಯಾನರ್ಜಿ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ವರಿಷ್ಠೆ ಹಾಗೂ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಮ್ಮುಖದಲ್ಲಿ ಈ ದಾಳಿ ನಡೆದಿದೆ.
ಶನಿವಾರ ನಸುಕಿನಲ್ಲಿ ಭಬಾನಿಪುರ್ ಮತ್ತು ಕಾಲಿಘಾಟ್ ಪೊಲೀಸ್ ಠಾಣೆಗಳ ಸಿಬ್ಬಂದಿಗಳ ನೆರವಿನೊಂದಿಗೆ ಸಲ್ಬೋನಿ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ಈ ದಾಳಿ ನಡೆಸಿದರು. ಬಳಿಕ, ಮುಂಜಾನೆ ಸುಮಾರು 8 ಗಂಟೆಯ ವೇಳೆಗೆ ಅವರೆಲ್ಲ ಅಭಿಷೇಕ್ ಬ್ಯಾನರ್ಜಿ ನಿವಾಸದಿಂದ ನಿರ್ಗಮಿಸಿದರು ಎನ್ನಲಾಗಿದೆ.
ಈ ಶೋಧ ಕಾರ್ಯಾಚರಣೆಯ ವೇಳೆ, ಅಭಿಷೇಕ್ ಬ್ಯಾನರ್ಜಿಗೆ ಸುದೀರ್ಘ ಕಾಲದಿಂದ ಕಾರ್ಯದರ್ಶಿಯಾಗಿರುವ ಸುಮಿತ್ ರಾಯ್ ಕಂಡು ಬರಲಿಲ್ಲ ಎಂದು ಹೇಳಲಾಗಿದೆ.
ಸುಮಿತ್ ರಾಯ್ ಬ್ಯಾಂಕ್ ಖಾತೆಗೆ ಕೋಟ್ಯಂತರ ರೂಪಾಯಿ ವರ್ಗಾವಣೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಲ್ಬೋನಿ ಠಾಣೆಯ ಪೊಲೀಸರು ಕಳೆದ ಕೆಲವು ದಿನಗಳಿಂದ ಅವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಮಿಡ್ನಾಪುರ್ ಜಿಲ್ಲೆಯ ಖರಗ್ ಪುರ್ ಪ್ರದೇಶದಲ್ಲಿ ಭೂ ಅವ್ಯವಹಾರ ಜರುಗಿದೆ ಎಂಬ ದೂರನ್ನು ಆಧರಿಸಿ, ತನಿಖೆ ನಡೆಸುತ್ತಿರುವ ಪೊಲೀಸರು, ಈ ತನಿಖೆಯ ಭಾಗವಾಗಿ ಅಭಿಷೇಕ್ ಬ್ಯಾನರ್ಜಿ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ಇದಕ್ಕೂ ಮುನ್ನ, ತೃಣಮೂಲ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಸುಜೋಯ್ ಹಝ್ರಾರನ್ನು ಬಂಧಿಸಿದ್ದ ಪೊಲೀಸರು, ಅವರನ್ನು ಕೆಲ ದಿನಗಳ ಹಿಂದೆ ವಿಚಾರಣೆಗೊಳಪಡಿಸಿದ್ದರು.






