ವಿದ್ಯಾರ್ಥಿಯೊಂದಿಗೆ ವಿವಾಹ ವಿವಾದ | ಪಶ್ಚಿಮ ಬಂಗಾಳ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯಿಂದ ರಾಜೀನಾಮೆ

PC : NDTV
ಕೋಲ್ಕತ್ತಾ: ವಿಶ್ವವಿದ್ಯಾಲಯದೊಂದಿಗೆ ಬಾಂಧವ್ಯವನ್ನು ಮುಂದುವರಿಸಲು ಅಸಾಧ್ಯವಾಗಿರುವುದಿಂದ, ನಾನು ನನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ಇತ್ತೀಚೆಗೆ ತರಗತಿ ಕೋಣೆಯಲ್ಲಿ ತಮ್ಮ ವಿದ್ಯಾರ್ಥಿಯನ್ನೇ ವಿವಾಹವಾಗಿ, ವಿವಾದ ಸೃಷ್ಟಿಸಿದ್ದ ಪಶ್ಚಿಮ ಬಂಗಾಳದ ವಿಶ್ವವಿದ್ಯಾಲಯವೊಂದರ ಹಿರಿಯ ಪ್ರಾಧ್ಯಾಪಕಿ ಹೇಳಿದ್ದಾರೆ ಎಂದು ಮಂಗಳವಾರ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜನವರಿ 28ರಂದು ಸರಕಾರಿ ಅಬ್ದುಲ್ ಕಲಾಂ ಆಝಾದ್ ತಾಂತ್ರಿಕ ವಿಶ್ವವಿದ್ಯಾಲಯದ ಅನ್ವಯಿಕ ಮನಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮಹಿಳೆಯೊಬ್ಬರು ತರಗತಿಯ ಕೋಣೆಯಲ್ಲಿ ತಮ್ಮ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿಯನ್ನು ಹಿಂದೂ ಬಂಗಾಳಿ ವಿವಾಹ ಪದ್ಧತಿಯಂತೆ ವಿವಾಹವಾಗುತ್ತಿರುವ ವಿಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿ, ಭಾರಿ ವಿವಾದ ಸೃಷ್ಟಿಸಿತ್ತು.
ಈ ವಿಡಿಯೊ ಹಂಚಿಕೆಯಿಂದ ಸೃಷ್ಟಿಯಾಗಿರುವ ಹಾಲಿ ಪರಿಸ್ಥಿತಿಯಿಂದ ತಾನು ಮಾನಸಿಕವಾಗಿ ಕುಗ್ಗಿ ಹೋಗಿರುವುದರಿಂದ, ಸರಕಾರಿ ವಿಶ್ವವಿದ್ಯಾಲಯದೊಂದಿಗಿನ ನನ್ನ ಬಾಂಧವ್ಯವನ್ನು ಮುಂದುವರಿಸಲು ಅಸಾಧ್ಯವಾಗಿದೆ ಎಂದು ಆ ಹಿರಿಯ ಪ್ರಾಧ್ಯಾಪಕಿಯು ನನ್ನ ಕಚೇರಿಗೆ ಇಮೇಲ್ ರವಾನಿಸಿದ್ದಾರೆ ಎಂದು ಮೌಲಾನಾ ಅಬ್ದುಲ್ ಕಲಾಂ ಆಝಾದ್ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪಾರ್ಥ ಪ್ರತಿಮ್ ಲಾಹಿರಿ PTI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
“ಆಕೆ ಘಟನೆಯನ್ನು ಉಲ್ಲೇಖಿಸಿದ್ದು, ಕಳೆದ ಕೆಲವು ವರ್ಷಗಳಿಂದ ನಮ್ಮ ಸಂಸ್ಥೆಯೊಂದಿಗೆ ಕೆಲಸ ಮಾಡಲು ಅವಕಾಶ ನೀಡಿದ್ದಕ್ಕೆ ಮೌಲಾನಾ ಅಬ್ದುಲ್ ಕಲಾಂ ಆಝಾದ್ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಧನ್ಯವಾದ ಸಲ್ಲಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.
ವಿವಾದದ ನಂತರ, ರಜೆಯ ಮೇಲೆ ತೆರಳಲು ಸೂಚಿಸಲಾಗಿದ್ದ ಪ್ರಾಧ್ಯಾಪಕಿಯು ಫೆಬ್ರವರಿ 1ರಂದು ಇಮೇಲ್ ರವಾನಿಸಿದ್ದು, ಅದೀಗ ಪ್ರಗತಿಯ ಹಂತದಲ್ಲಿದೆ ಎಂದು ಅವರು ತಿಳಿಸಿದ್ದಾರೆ.
“ಸೂಕ್ತ ಸಮಯದಲ್ಲಿ ನಮ್ಮ ನಿರ್ಧಾರ ನಿಮಗೆ ತಿಳಿಯುವಂತೆ ಮಾಡುತ್ತೇವೆ” ಎಂದು ಅವರು ಹೇಳಿದ್ದಾರೆ.
ವೈರಲ್ ಆಗಿದ್ದ ವಿಡಿಯೊ ತುಣುಕಿನಲ್ಲಿ, ಸದರಿ ಪ್ರಾಧ್ಯಾಪಕಿಯು ನಡಿಯ ಜಿಲ್ಲೆಯಲ್ಲಿನ ಮೌಲಾನಾ ಅಬ್ದುಲ್ ಕಲಾಂ ಆಝಾದ್ ತಾಂತ್ರಿಕ ವಿಶ್ವವಿದ್ಯಾಲಯದ ಹರಿಂಘತ ಕ್ಯಾಂಪಸ್ ಬಳಿಯ ತರಗತಿಯ ಕೋಣೆಯೊಳಗೆ ವಧುವಿನ ಅಲಂಕಾರದಲ್ಲಿರುವುದು ಕಂಡು ಬಂದಿತ್ತು.
ಆದರೆ, ಆ ವಿಡಿಯೊ ತುಣುಕು ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾಲಯದ ಸಮ್ಮತದೊಂದಿಗೆ ಮನಶಾಸ್ತ್ರ ನಾಟಕ ಯೋಜನೆಯ ಭಾಗವಾಗಿ ಪ್ರದರ್ಶಿಸಲಾಗಿದ್ದ ನಾಟಕವಾಗಿತ್ತು ಎಂದು ವಿವಾದಕ್ಕೆ ಗುರಿಯಾಗಿರುವ ಪ್ರಾಧ್ಯಾಪಕಿ ಸ್ಪಷ್ಟನೆ ನೀಡಿದ್ದರು.
ಆದರೆ, ಈ ನಾಟಕದ ಒಂದು ದೃಶ್ಯವನ್ನು ನನಗೆ ಕಳಂಕ ತರಲು ಹಾಗೂ ನನ್ನ ವೃತ್ತಿಜೀವನವನ್ನು ಹಾಳುಗೆಡವಲು ಸಹೋದ್ಯೋಗಿಯೊಬ್ಬರು ಉದ್ದೇಶಪೂರ್ವಕವಾಗಿ ಸೋರಿಕೆ ಮಾಡಿದ್ದಾರೆ ಎಂದು ಆ ಉಪನ್ಯಾಸಕಿ ಆರೋಪಿಸಿದ್ದಾರೆ.
ನನ್ನ ಸಾಮಾಜಿಕ ಹಾಗೂ ಶೈಕ್ಷಣಿಕ ಖ್ಯಾತಿಗೆ ಆಗಿರುವ ಹಾನಿಗೆ ಪರಿಹಾರ ಕೋರಿ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.
ಜನವರಿ 29ರಂದು ರಜೆಯ ಮೇಲೆ ತೆರಳುವಂತೆ ಮಹಿಳಾ ಪ್ರಾಧ್ಯಾ ಪಕಿಗೆ ಮೌಲಾನಾ ಅಬ್ದುಲ್ ಕಲಾಂ ಆಝಾದ್ ತಾಂತ್ರಿಕ ವಿಶ್ವವಿದ್ಯಾಲಯವು ಸೂಚಿಸಿತ್ತು.
ಈ ಕುರಿತು ತನಿಖೆ ನಡೆಸಲು ವಿಶ್ವವಿದ್ಯಾಲಯವು ಐದು ಸದಸ್ಯರ ವಿಚಾರಣಾ ಸಮಿತಿಯನ್ನು ರಚಿಸಿದ್ದು, ಎಲ್ಲರೂ ಮಹಿಳಾ ಸಿಬ್ಬಂದಿಗಳಾಗಿದ್ದಾರೆ. ಘಟನೆಯ ಬಗ್ಗೆ ತನಿಖೆ ನಡೆಸಿರುವ ಸಮಿತಿಯು, ಈ ವಿಡಿಯೊ ತುಣುಕು ಮನಶಾಸ್ತ್ರ ನಾಟಕ ಯೋಜನೆಯ ಭಾಗವಾಗಿತ್ತು ಎಂಬ ಪ್ರಾಧ್ಯಾಪಕಿಯ ಸ್ಪಷ್ಟನೆಯನ್ನು ತಳ್ಳಿ ಹಾಕಿದೆ ಎಂದು ವಿಶ್ವವಿದ್ಯಾಲಯದ ಮತ್ತೊಬ್ಬ ಅಧಿಕಾರಿ ತಿಳಿಸಿದ್ದಾರೆ.
“ಇದು ಹೊಸ ವಿದ್ಯಾರ್ಥಿಗಳ ಸ್ವಾಗತಕ್ಕಾಗಿ ಪ್ರದರ್ಶಿಸಲಾಗಿರುವ ಅಗ್ಗದ ಲಘು ಹಾಸ್ಯವಲ್ಲದೆ ಮತ್ತೇನಲ್ಲ ಹಾಗೂ ಹಿರಿಯ ಪ್ರಾಧ್ಯಾ ಪಕಿಯೊಬ್ಬರಿಗೆ ಅದು ಅಸೂಕ್ತವಾಗಿತ್ತು” ಎಂದು ಕರ್ತವ್ಯನಿರತ ಉಪ ಕುಲಪತಿ ತಪಶ್ ಚಕ್ರಬೊರ್ತಿ ಹೇಳಿದ್ದಾರೆ.