ಉತ್ತರ ಪ್ರದೇಶದ ಗಾಝಿಯಾಬಾದ್ ನಲ್ಲಿ ನಕಲಿ ರಾಯಭಾರ ಕಚೇರಿ ಪತ್ತೆ!
'ವೆಸ್ಟಾರ್ಕ್ಟಿಕಾ' ಹೆಸರಿನಲ್ಲಿ ವಂಚನೆ

Photo credit: NDTV
ಹೊಸದಿಲ್ಲಿ/ಗಾಝಿಯಾಬಾದ್: ರಾಜತಾಂತ್ರಿಕ ನಂಬರ್ ಪ್ಲೇಟ್ ಹೊಂದಿರುವ ಐಷಾರಾಮಿ ಕಾರುಗಳು, ನಕಲಿ ಪಾಸ್ಪೋರ್ಟ್ಗಳು, ವಿದೇಶಿ ಕರೆನ್ಸಿ ಮತ್ತು ಗಣ್ಯ ನಾಯಕರೊಂದಿಗೆ ಎಡಿಟ್ ಮಾಡಿದ ಫೋಟೋಗಳೊಂದಿಗೆ ವಿದೇಶಿ ದೂತಾವಾಸವಂತೆ ಕಂಡುಬರುವ ಕಟ್ಟಡವನ್ನು ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (STF) ಗಾಝಿಯಾಬಾದ್ ನಲ್ಲಿ ಪತ್ತೆ ಹಚ್ಚಿದೆ. ಆ ಮೂಲಕ ನಕಲಿ ದೂತವಾಸದ ಮೂಲಕ ನಡೆಯುತ್ತಿದ್ದ ವಂಚನೆ ಜಾಲವನ್ನು ಭೇದಿಸಿದೆ.
ಈ ಘಟನೆಯ ಕೇಂದ್ರಬಿಂದು ಹರ್ಷವರ್ಧನ್ ಜೈನ್ ಎಂಬಾತ 'ವೆಸ್ಟಾರ್ಕ್ಟಿಕಾ' ರಾಷ್ಟ್ರದ ಹೆಸರಿನಲ್ಲಿ ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದ. ಎಂಟು ವರ್ಷಗಳ ಹಿಂದೆ ಅಕ್ರಮ ಉಪಗ್ರಹ ಫೋನ್ ಬಳಕೆಯ ಆರೋಪಕ್ಕೆ ಒಳಗಾಗಿದ್ದ ಈತನ ಮೇಲೆ ಇದೀಗ ವ್ಯಾಪಕ ವಂಚನೆ, ನಕಲಿ ದಾಖಲೆಗಳ ಸೃಷ್ಟಿ, ಹಾಗೂ ಹಣ ವರ್ಗಾವಣೆ ಆರೋಪ ಹೊರಿಸಲಾಗಿದೆ.
ಹರ್ಷವರ್ಧನ್ ತನ್ನನ್ನು 'ವೆಸ್ಟಾರ್ಕ್ಟಿಕಾ'ದ ಬ್ಯಾರನ್ ಎಂದು ಪರಿಚಯಿಸಿಕೊಳ್ಳುತ್ತಿದ್ದ. ವಿದೇಶಗಳಲ್ಲಿ ಕೆಲಸಕ್ಕೆ ಜನರನ್ನು ಆಕರ್ಷಿಸಲು ಅತ ಉದ್ಯೋಗ ಜಾಲ ನಡೆಸುತ್ತಿದ್ದ ಎನ್ನಲಾಗಿದೆ. ರಾಜತಾಂತ್ರಿಕ ನಂಬರ್ ಪ್ಲೇಟ್ ಹೊಂದಿದ್ದ ಉನ್ನತ ದರ್ಜೆಯ ಕಾರುಗಳಲ್ಲಿ ಆತ ಪ್ರಯಾಣಿಸುತ್ತಿದ್ದ. ತಾನು ಪ್ರಭಾವಿ ಎಂದು ಗುರುತಿಸಿಕೊಳ್ಳಲು ರಾಷ್ಟ್ರಪತಿ, ಪ್ರಧಾನಿ ಅವರೊಂದಿಗಿರುವ ಎಡಿಟ್ ಮಾಡಿದ ಚಿತ್ರಗಳನ್ನು ಬಳಸುತ್ತಿದ್ದ ಎಂದು ಆರೋಪಿಸಲಾಗಿದೆ.
STF ಅಧಿಕಾರಿಗಳು ನಾಲ್ಕು ರಾಜತಾಂತ್ರಿಕ ನಂಬರ್ ಪ್ಲೇಟ್ ಹೊಂದಿರುವ ಐಷಾರಾಮಿ ಕಾರುಗಳು, 12 ನಕಲಿ 'ಮೈಕ್ರೋನೇಷನ್' ಪಾಸ್ಪೋರ್ಟ್ಗಳು, ವಿದೇಶಾಂಗ ಸಚಿವಾಲಯದ ಅಂಚೆಚೀಟಿಗಳನ್ನು ಹೊಂದಿರುವ ದಾಖಲೆಗಳು, 34 ರಾಷ್ಟ್ರಗಳ ರಬ್ಬರ್ ಸ್ಟಾಂಪ್ಗಳು , 44 ಲಕ್ಷ ರೂ. ನಗದು, ಹಲವು ವಿದೇಶಿ ಕರೆನ್ಸಿಗಳು ಮತ್ತು 18 ರಾಜತಾಂತ್ರಿಕ ನಂಬರ್ ಪ್ಲೇಟ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. .
ವೆಸ್ಟಾರ್ಕ್ಟಿಕಾ ಎಂದರೆ ಏನು?
2001 ರಲ್ಲಿ ಟ್ರಾವಿಸ್ ಮೆಕ್ಹೆನ್ರಿ ಎಂಬ ಅಮೆರಿಕದ ನೌಕಾಪಡೆಯ ಮಾಜಿ ಅಧಿಕಾರಿ ‘ವೆಸ್ಟಾರ್ಕ್ಟಿಕಾ’ ಎಂಬ ಸಣ್ಕ ರಾಷ್ಟ್ರವನ್ನು ಅಂಟಾರ್ಕ್ಟಿಕಾದ ಒಂದು ಭಾಗದಲ್ಲಿ ಸ್ಥಾಪಿಸಿದರು. ಯಾವುದೇ ರಾಷ್ಟ್ರವೂ ಇದಕ್ಕೆ ಮಾನ್ಯತೆ ನೀಡಿಲ್ಲ. ಈ ರಾಷ್ಟ್ರವು 6.2 ಲಕ್ಷ ಚದರ ಮೈಲು ವಿಸ್ತೀರ್ಣ ಹೊಂದಿದೆ ಎನ್ನಲಾಗಿದೆ.
ವೆಸ್ಟಾರ್ಕ್ಟಿಕಾವು ತನ್ನದೇ ಆದ ಧ್ವಜ, ಕರೆನ್ಸಿ, ಪಾಸ್ಪೋರ್ಟ್ ಹೊಂದಿರುವ ಲಾಭರಹಿತ ಸಂಸ್ಥೆಯಾಗಿ ತನ್ನನ್ನು ಪರಿಚಯಿಸಿಕೊಂಡಿದ್ದು, ಹವಾಮಾನ ಬದಲಾವಣೆಯ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿದೆ. ಮಾನ್ಯತೆ ನೀಡದ ಈ ರಾಷ್ಟ್ರದಲ್ಲಿ 2,356 ನಾಗರಿಕರಿದ್ದಾರೆ.







