CJI ಆಹ್ವಾನ ವಿವಾದ | ಅಭಿಜೀತ್ ದೀಪ್ಕೆ ಪ್ರತಿಕ್ರಿಯಿಸುತ್ತಿದ್ದಂತೆ NALSAR ಪದವೀಧರರ ನೋಂದಣಿ ನಿರ್ಬಂಧ ಹಿಂಪಡೆದ ಬಾರ್ ಕೌನ್ಸಿಲ್!

ಅಭಿಜಿತ್ ದೀಪ್ಕೆ , ಸೂರ್ಯ ಕಾಂತ್ | Photo Credit : PTI
ಹೊಸದಿಲ್ಲಿ, ಆ.13: ಹೈದರಾಬಾದ್ ನ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ಅಕಾಡೆಮಿ (NALSAR)ಯ 2026ರ ಘಟಿಕೋತ್ಸವಕ್ಕೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಆಹ್ವಾನಿಸಿರುವುದನ್ನು ವಿದ್ಯಾರ್ಥಿಗಳು ವಿರೋಧಿಸಿದ ಹಿನ್ನೆಲೆಯಲ್ಲಿ, 2026ರ ಪದವೀಧರರನ್ನು ವಕೀಲರಾಗಿ ನೋಂದಾಯಿಸಿಕೊಳ್ಳುವುದಕ್ಕೆ ವಿಧಿಸಿದ್ದ ನಿರ್ಬಂಧವನ್ನು ಬಾರ್ ಕೌನ್ಸಿಲ್ ಆಫ್ ಇಂಡಿಯಾ (BCI) ಗುರುವಾರ ಹಿಂಪಡೆದಿದೆ.
ತುರ್ತು ಚರ್ಚೆ ನಡೆಸಿದ ಬಳಿಕ ಹೊಸ ಹೇಳಿಕೆ ಬಿಡುಗಡೆ ಮಾಡಿರುವ BCI, NALSARನಿಂದ 2026ರಲ್ಲಿ ಪದವಿ ಪಡೆದ ಎಲ್ಲ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ರಾಜ್ಯ ಬಾರ್ ಕೌನ್ಸಿಲ್ ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿದೆ. ‘ತಮ್ಮದಲ್ಲದ ತಪ್ಪಿಗೆ ಯಾವುದೇ ವಿದ್ಯಾರ್ಥಿಯೂ ತೊಂದರೆ ಅನುಭವಿಸಬಾರದು’ ಎಂದು ಕೌನ್ಸಿಲ್ ಹೇಳಿದೆ.
ಆದರೂ, NALSAR ವಿರುದ್ಧ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆಯನ್ನು BCI ತಳ್ಳಿಹಾಕಿಲ್ಲ. ಮುಂದಿನ ಕ್ರಮದ ಕುರಿತು ನಿರ್ಧರಿಸುವ ಮೊದಲು ಅಕಾಡೆಮಿಯ ಉಪ ಕುಲಪತಿಗಳ ತನಿಖಾ ವರದಿಗಾಗಿ ಕಾಯಲಾಗುತ್ತಿದೆ ಎಂದು ತಿಳಿಸಿದೆ.
NALSARನ 2026 ನೇ ಸಾಲಿನ ಕಾನೂನು ಪದವೀಧರರಿಗೆ ನೋಂದಾಯಿಸಿಕೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಹೇಳಿತ್ತು. ಈ ಹೇಳಿಕೆಗೆ ಕಾಕ್ರೋಚ್ ಜನತಾ ಪಾರ್ಟಿ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಪ್ರತಿಕ್ರಿಯಿಸಿದ್ದರು. BCI ನಿರ್ದೇಶನವನ್ನು ಉಲ್ಲೇಖಿಸಿ Xನಲ್ಲಿ ಪೋಸ್ಟ್ ಮಾಡಿದ್ದ ದೀಪ್ಕೆ, ‘ಎಲ್ಲಾ ಕಾನೂನು ಕ್ಷೇತ್ರದ ಕಾಕ್ರೋಚ್ ಗಳು ಒಟ್ಟಿಗೆ ಬಂದರೆ ಏನಾಗುತ್ತದೆ?’ ಎಂದು ಬರೆದಿದ್ದರು.
►ಸಂಘಟಿತ ಅಭಿಯಾನದ ಬಗ್ಗೆ ವರದಿ ಕೇಳಿದ್ದ BCI
NALSARನ 2026ರ ಘಟಿಕೋತ್ಸವಕ್ಕೆ CJI ಸೂರ್ಯಕಾಂತ್ ಅವರ ಪ್ರಸ್ತಾವಿತ ಭಾಗವಹಿಸುವಿಕೆ ಅಥವಾ ಆಹ್ವಾನಕ್ಕೆ ಸಂಬಂಧಿಸಿದಂತೆ ನಡೆದ ಸಂಘಟಿತ ಅಭಿಯಾನದ ಕುರಿತು ಸಾರ್ವಜನಿಕವಾಗಿ ಲಭ್ಯವಿರುವ ವರದಿಗಳು ಮತ್ತು ಸಾಮಗ್ರಿಗಳನ್ನು ಕೌನ್ಸಿಲ್ ಗಮನಿಸಿದೆ ಎಂದು BCI ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ತಿಳಿಸಿದ್ದರು.
ಅಭಿಯಾನ ಆರಂಭಿಸುವುದು, ಕರಡು ಸಿದ್ಧಪಡಿಸುವುದು, ಪ್ರಸಾರ ಮಾಡುವುದು, ಸಂಯೋಜಿಸುವುದು ಅಥವಾ ಜನರನ್ನು ಸಂಘಟಿಸುವಲ್ಲಿ ಪ್ರಮುಖವಾಗಿ ಭಾಗಿಯಾಗಿದ್ದಾರೆ ಎನ್ನಲಾದ ವ್ಯಕ್ತಿಗಳನ್ನು ಗುರುತಿಸುವಂತೆ BCI, NALSARಗೆ ಸೂಚಿಸಿತ್ತು. ಈ ಕುರಿತು ದೃಢೀಕೃತ ವಾಸ್ತವಿಕ ವರದಿಯನ್ನು ಮೂರು ದಿನಗಳಲ್ಲಿ ಸಲ್ಲಿಸುವಂತೆ ಉಪ ಕುಲಪತಿಗಳಿಗೆ ಸೂಚಿಸಲಾಗಿತ್ತು.
ಸಭೆಗಳನ್ನು ಆಯೋಜಿಸುವುದು, ಮಾಧ್ಯಮಗಳೊಂದಿಗೆ ಸಂವಹನ ನಡೆಸುವುದು, ಸಮನ್ವಯಕ್ಕಾಗಿ ಬಳಸುವ ಸಾಮಾಜಿಕ ಮಾಧ್ಯಮ ಗುಂಪುಗಳನ್ನು ನಿರ್ವಹಿಸುವುದು ಅಥವಾ ಘಟಿಕೋತ್ಸವ ಹಾಗೂ ಸಂಬಂಧಿತ ಕಾರ್ಯಕ್ರಮಗಳಲ್ಲಿ ಬಹಿಷ್ಕಾರ, ಅಡಚಣೆ, ಅಡ್ಡಿ ಅಥವಾ ಸಂಘಟಿತವಾಗಿ ಭಾಗವಹಿಸದಿರುವಂತೆ ಕರೆ ನೀಡುವುದರಲ್ಲಿ ತೊಡಗಿದ್ದವರ ವಿವರಗಳನ್ನು ನೀಡುವಂತೆ BCI ಕೇಳಿತ್ತು.
ಅಭಿಯಾನವನ್ನು ಆರಂಭಿಸುವುದು, ಅನುಮೋದಿಸುವುದು, ಸಂಯೋಜಿಸುವುದು ಅಥವಾ ಪ್ರಸಾರ ಮಾಡುವಲ್ಲಿ ಭಾಗಿಯಾಗಿದ್ದ ಯಾವುದೇ ವಿದ್ಯಾರ್ಥಿ ಸಂಘ, ವಿದ್ಯಾರ್ಥಿ ಬಾರ್ ಕೌನ್ಸಿಲ್, ವಿದ್ಯಾರ್ಥಿ ಸಂಘ ಅಥವಾ ಇತರ ಮಾನ್ಯತೆ ಪಡೆದ ವಿದ್ಯಾರ್ಥಿ ಸಂಘಟನೆಯ ವಿವರಗಳನ್ನೂ ನೀಡುವಂತೆ ಸೂಚಿಸಲಾಗಿತ್ತು.
ಯಾವುದೇ ಅಧ್ಯಾಪಕರು, ಸಂಶೋಧನಾ ವಿದ್ವಾಂಸರು, ಹಳೆಯ ವಿದ್ಯಾರ್ಥಿಗಳು ಅಥವಾ ಹೊರಗಿನವರು ಈ ಅಭಿಯಾನದಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಮಾಹಿತಿಯನ್ನೂ ಕೌನ್ಸಿಲ್ ಕೋರಿತ್ತು. ಈ ವಿಷಯಕ್ಕೆ ಸಂಬಂಧಿಸಿದ ನಿರ್ಣಯಗಳು, ಸಭೆಯ ದಾಖಲೆಗಳು ಮತ್ತು ಇತರ ಅಧಿಕೃತ ದಾಖಲೆಗಳ ಪ್ರತಿಗಳನ್ನೂ BCI ಕೇಳಿತ್ತು. ಯಾವುದೇ ಪ್ರತಿಭಟನೆ ಅಥವಾ ಸಂಘಟಿತ ಚಟುವಟಿಕೆಗೆ ಅನುಮತಿ ಕೋರಲಾಗಿತ್ತೇ ಅಥವಾ ನೀಡಲಾಗಿತ್ತೇ ಎಂಬ ವಿವರಗಳನ್ನೂ ಒದಗಿಸುವಂತೆ ಸೂಚಿಸಲಾಗಿತ್ತು.
►‘ಪ್ರಾತಿನಿಧ್ಯ ಮಾತ್ರ ಅನರ್ಹತೆಗೆ ಕಾರಣವಲ್ಲ’
ಪ್ರಾತಿನಿಧ್ಯ ಸಲ್ಲಿಸುವುದು ಅಥವಾ ಅಭಿಯಾನದಲ್ಲಿ ಭಾಗವಹಿಸುವುದು ಮಾತ್ರ ಸ್ವಯಂಚಾಲಿತವಾಗಿ ವಕೀಲರಾಗಿ ನೋಂದಣಿಯಾಗುವುದಕ್ಕೆ ಅನರ್ಹತೆಗೆ ಕಾರಣವಾಗುವುದಿಲ್ಲ ಎಂದು BCI ಸ್ಪಷ್ಟಪಡಿಸಿತ್ತು.
ಪ್ರಾತಿನಿಧ್ಯಕ್ಕೆ ಸಹಿ ಹಾಕಿದ ಅಥವಾ ಅದನ್ನು ಬೆಂಬಲಿಸಿದ ವ್ಯಕ್ತಿಗಳು ಹಾಗೂ ಅಭಿಯಾನವನ್ನು ಆಯೋಜಿಸಿದ, ಸಂಯೋಜಿಸಿದ ಅಥವಾ ವಾಸ್ತವವಾಗಿ ಬಹಿಷ್ಕಾರ, ಅಡಚಣೆ ಅಥವಾ ಅಡ್ಡಿಪಡಿಸುವ ಚಟುವಟಿಕೆ ನಡೆಸಿದವರ ನಡುವೆ ವ್ಯತ್ಯಾಸ ಕಾಯ್ದುಕೊಳ್ಳಬೇಕು ಎಂದು ಕೌನ್ಸಿಲ್ ತಿಳಿಸಿತ್ತು.
►450ಕ್ಕೂ ಹೆಚ್ಚು ವಿದ್ಯಾರ್ಥಿಗಳ ವಿರೋಧ
NALSARನ 2026ರ ಘಟಿಕೋತ್ಸವಕ್ಕೆ CJI ಸೂರ್ಯಕಾಂತ್ ಅವರನ್ನು ಆಹ್ವಾನಿಸಿರುವುದನ್ನು 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿರೋಧಿಸಿದ್ದರು. ಆಹ್ವಾನದ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೋರಿ ಅವರು ಅಕಾಡೆಮಿಯ ಉಪ ಕುಲಪತಿ, ರಿಜಿಸ್ಟ್ರಾರ್, ಪ್ರಾಧ್ಯಾಪಕರು ಹಾಗೂ ಇತರ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಘಟಿಕೋತ್ಸವದ ದಿನಾಂಕ ಮತ್ತು ಮುಖ್ಯ ಅತಿಥಿಯ ಆಯ್ಕೆ ಇನ್ನೂ ಅಧಿಕೃತವಾಗಿ ಅಂತಿಮವಾಗಿಲ್ಲ. ಯಾವುದೇ ತೀರ್ಮಾನ ಕೈಗೊಳ್ಳುವ ಮೊದಲು ತಮ್ಮ ಕಳವಳಗಳನ್ನು ದಾಖಲಿಸಲು ಬಯಸುವುದಾಗಿ ವಿದ್ಯಾರ್ಥಿಗಳು ಮನವಿ ಪತ್ರದಲ್ಲಿ ತಿಳಿಸಿದ್ದರು.
►ವ್ಯಾಪಕ ಟೀಕೆ
NALSARನಿಂದ 2026ರಲ್ಲಿ ಪದವಿ ಪಡೆದ ಯಾವುದೇ ವಿದ್ಯಾರ್ಥಿಯನ್ನು ಮುಂದಿನ ಆದೇಶದವರೆಗೆ ಯಾವುದೇ ರಾಜ್ಯ ಬಾರ್ ಕೌನ್ಸಿಲ್ನಲ್ಲಿ ನೋಂದಾಯಿಸಿಕೊಳ್ಳುವುದಿಲ್ಲ ಎಂದು BCI ಈ ಹಿಂದೆ ಎಚ್ಚರಿಸಿತ್ತು. CJI ಸೂರ್ಯಕಾಂತ್ ಅವರನ್ನು ಘಟಿಕೋತ್ಸವಕ್ಕೆ ಆಹ್ವಾನಿಸದಂತೆ ಅಭಿಯಾನ ಸಂಘಟಿಸಿದ ವಿದ್ಯಾರ್ಥಿಗಳ ಕುರಿತು NALSARನಿಂದ ವರದಿ ಕೇಳಿರುವುದಾಗಿಯೂ BCI ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ತಿಳಿಸಿದ್ದರು.
ಈ ನಿರ್ಧಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ವಿದ್ಯಾರ್ಥಿಗಳ ಯಾವುದೇ ವೈಯಕ್ತಿಕ ತಪ್ಪಿಲ್ಲದಿದ್ದರೂ ನೋಂದಣಿ ನಿರ್ಬಂಧ ವಿಧಿಸುವುದರಿಂದ ಅವರ ವೃತ್ತಿಪರ ಭವಿಷ್ಯ ಮತ್ತು ಉದ್ಯೋಗಾವಕಾಶಗಳ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು ಎಂದು ಸಾಮಾಜಿಕ ಮಾಧ್ಯಮದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೇ BCI ತನ್ನ ನಿರ್ಧಾರವನ್ನು ಬದಲಿಸಿದೆ. 2026ರ NALSAR ಪದವೀಧರರು ತಮ್ಮ ಆಯ್ಕೆಯ ಯಾವುದೇ ರಾಜ್ಯ ಬಾರ್ ಕೌನ್ಸಿಲ್ ನಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ಇದೀಗ ಸ್ಪಷ್ಟಪಡಿಸಿದೆ. ಆದರೆ, NALSAR ವಿರುದ್ಧ ಮುಂದಿನ ಕ್ರಮದ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆಯನ್ನು ಮುಕ್ತವಾಗಿರಿಸಿಕೊಂಡಿದ್ದು, ಉಪ ಕುಲಪತಿಗಳ ತನಿಖಾ ವರದಿಗಾಗಿ ಕಾಯುತ್ತಿದೆ.
What if all legal cockroaches come together? https://t.co/mzqrL2a904
— Abhijeet Dipke (@abhijeet_dipke) August 13, 2026
🚨 BCI must WITHDRAW, not MODIFY their order 🚨
— Cockroach Janta Party - CJP (@Cockroachisback) August 13, 2026
The Bar Council of India barred an entire graduating batch of NALSAR from practising law. Their offence: around 70 students wrote a letter questioning the invitation of the CJI as their convocation guest.
After students raised… https://t.co/q1kqblmDDh
Time for Manan Mishra isteefa do?
— Abhijeet Dipke (@abhijeet_dipke) August 13, 2026






