ಭಾರತ-ಪಾಕ್ ನಡುವೆ ಕದನ ವಿರಾಮ ಮಧ್ಯಸ್ಥಿಕೆ ಬಗ್ಗೆ ಟ್ರಂಪ್ ಮತ್ತೆ ಹೇಳಿಕೆ: ಪ್ರಧಾನಿ ಮೋದಿ ಮೌನ ಪ್ರಶ್ನಿಸಿದ ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ (PTI)
ಹೊಸದಿಲ್ಲಿ: ಇತ್ತೀಚೆಗೆ ಭಾರತ ಮತ್ತು ಪಾಕಿಸ್ತಾನದ ನಡುವೆ ಉಂಟಾಗಿದ್ದ ಸೇನಾ ಸಂಘರ್ಷವನ್ನು ನಿಲ್ಲಿಸಲು ನಾನು ಕದನ ವಿರಾಮದ ಮಧ್ಯಸ್ಥಿಕೆ ವಹಿಸಿದ್ದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳಿಕೆ ನೀಡುತ್ತಿರುವ ಕುರಿತು ಪ್ರಧಾನಿ ನರೇಂದ್ರ ಮೋದಿ ಯಾವಾಗ ತಮ್ಮ ಮೌನ ಮುರಿಯುತ್ತಾರೆ ಎಂದು ಶನಿವಾರ ಕಾಂಗ್ರೆಸ್ ಮತ್ತೊಮ್ಮೆ ಪ್ರಶ್ನಿಸಿದೆ.
ಕಳೆದ 21 ದಿನಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಉತ್ತಮ ಸ್ನೇಹಿತ ಎಂದೇ ಬಿಂಬಿತವಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೆರೆಯ ದೇಶಗಳಾದ ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮದ ಮಧ್ಯಸ್ಥಿಕೆಯನ್ನು ನಾನು ವಹಿಸಿದ್ದೆ ಎಂದು ಹನ್ನೊಂದನೇ ಬಾರಿ ನೀಡಿರುವ ಹೇಳಿಕೆಯ ವಿಡಿಯೊವನ್ನು ತಮ್ಮ ಸರಣಿ ಪೋಸ್ಟ್ನೊಂದಿಗೆ ಟ್ಯಾಗ್ ಮಾಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, "ಈ ಕುರಿತು ಪ್ರಧಾನಿ ಮೋದಿ ಯಾವಾಗ ಮಾತನಾಡುತ್ತಾರೆ?" ಎಂದು ಪ್ರಶ್ನಿಸಿದ್ದಾರೆ.
ಇದಕ್ಕೂ ಮುನ್ನ, "ಕಳೆದ 20 ದಿನಗಳಲ್ಲಿ, ಮೂರು ದೇಶಗಳಲ್ಲಿ ಹಾಗೂ ಮೂರು ನಗರಗಳಲ್ಲಿ ಇದು ಒಂಬತ್ತನೆ ಬಾರಿಯ ಹೇಳಿಕೆಯಾಗಿದೆ" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಉಲ್ಲೇಖಿಸಿ, ಜೈರಾಮ್ ರಮೇಶ್ ಪೋಸ್ಟ್ ಮಾಡಿದ್ದರು.
"ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯಬಹುದಾಗಿದ್ದ ಅಣ್ವಸ್ತ್ರ ಯುದ್ಧವನ್ನು ತಡೆಗಟ್ಟಲು, ಭಾರತ ಮತ್ತು ಪಾಕಿಸ್ತಾನ ನಡುವೆ ನಡೆದ ನಾಲ್ಕು ದಿನಗಳ ಸೇನಾ ಸಂಘರ್ಷವನ್ನು ಅಂತ್ಯಗೊಳಿಸಲು ತಾನೇಗೆ ವ್ಯಾಪಾರದ ಬೆದರಿಕೆಯನ್ನು ಅಸ್ತ್ರವನ್ನಾಗಿ ಬಳಸಿದೆ ಎಂದು ಡೊನಾಲ್ಡ್ ಅಣ್ಣ ತಾವು ಈ ಹಿಂದೆ ಹೇಳಿದ್ದನ್ನೇ ಪದೇ ಪದೇ ಪುನರಾವರ್ತಿಸುತ್ತಿದ್ದಾರೆ. ಆ ಮೂಲಕ ಭಾರತ ಮತ್ತು ಪಾಕಿಸ್ತಾನಗಳೆರಡೂ ಸಮಾನ ಎಂದು ಪುನರುಚ್ಚರಿಸುತ್ತಿದ್ದಾರೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಮೇ 23ರಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಕೂಡಾ ನ್ಯೂಯಾರ್ಕ್ ಮೂಲದ ಅಂತಾರಾಷ್ಟ್ರೀಯ ವ್ಯಾಪಾರ ನ್ಯಾಯಾಲಯಕ್ಕೆ ಇದೇ ಹೇಳಿಕೆಯನ್ನು ನೀಡಿದ್ದಾರೆ" ಎಂದೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
"ಆದರೆ, ಡೊನಾಲ್ಡ್ ಅಣ್ಣನ ಸ್ನೇಹಿತರಾದ ನರೇಂದ್ರ ಮೋದಿ ಗಾಢ ಮೌನ ವಹಿಸುವ ಮೂಲಕ, ಅವರ ಹೇಳಿಕೆಯನ್ನು ನಿರ್ಲಕ್ಷಿಸುವುದನ್ನು ಮುಂದುವರಿಸಿದ್ದಾರೆ" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
"ಈ ಕುರಿತು ಪ್ರಧಾನಿಯೇಕೆ ಮಾತನಾಡುತ್ತಿಲ್ಲ? ಮೋದಿ ಯಾವಾಗಲೂ ಮಾಡುವಂತೆ, ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡಾ ಸುಳ್ಳು ಹೇಳುತ್ತಿದ್ದಾರೆಯೆ? ಅಥವಾ ಅವರು ಶೇ. 50ರಷ್ಟಾದರೂ ಸತ್ಯ ಹೇಳುತ್ತಿದ್ದಾರೆಯೆ?" ಎಂದು ಜೈರಾಮ್ ರಮೇಶ್ ಛೇಡಿಸಿದ್ದಾರೆ.
ಎಪ್ರಿಲ್ 22ರಂದು ಜಮ್ಕು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಮಂದಿ ಪ್ರವಾಸಿಗರು ಮೃತಪಟ್ಟ ಹಿನ್ನೆಲೆಯಲ್ಲಿ, ಮೇ 7ರಂದು 'ಆಪರೇಷನ್ ಸಿಂಧೂರ್' ಕಾರ್ಯಾಚರಣೆ ನಡೆಸಿದ್ದ ಭಾರತೀಯ ಸೇನೆ, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳನ್ನು ಧ್ವಂಸಗೊಳಿಸಿತ್ತು. ಇದರ ಬೆನ್ನಿಗೇ, ಭಾರತ ಮತ್ತು ಪಾಕಿಸ್ತಾನದ ನಡುವೆ ನಾಲ್ಕು ದಿನಗಳ ಸೇನಾ ಸಂಘರ್ಷ ಸ್ಫೋಟಗೊಂಡಿತ್ತು. ನಂತರ, ಭಾರತ ಮತ್ತು ಪಾಕಿಸ್ತಾನದ ನಡುವೆ ದಿಢೀರನೆ ಕದನ ವಿರಾಮ ಒಪ್ಪಂದವೇರ್ಪಟ್ಟಿತ್ತು.
ಅಂದಿನಿಂದ, ವ್ಯಾಪಾರ ಸ್ಥಗಿತಗೊಳಿಸುವ ಬೆದರಿಕೆಯೊಡ್ಡಿ, ನೆರೆಯ ದೇಶಗಳ ನಡುವೆ ಕದನ ವಿರಾಮವೇರ್ಪಡುವಂತೆ ಅಮೆರಿಕ ಮಧ್ಯಸ್ಥಿಕೆ ವಹಿಸಿತ್ತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಹೇಳಿಕೆ ನೀಡುತ್ತಾ ಬರುತ್ತಿದ್ದಾರೆ. ಭಾರತೀಯ ಸೇನೆ ಡೊನಾಲ್ಡ್ ಟ್ರಂಪ್ರ ಈ ಪ್ರತಿಪಾದನೆಯನ್ನು ಅಲ್ಲಗಳೆದಿದ್ದರೂ, ಪ್ರಧಾನಿ ನರೇಂದ್ರ ಮೋದಿ ಮಾತ್ರ ಈ ಕುರಿತು ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ. ಇದು ಆಡಳಿತಾರೂಢ ಬಿಜೆಪಿ ಹಾಗೂ ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್ ನಡುವೆ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.
This is 11th time in 21 days that PM @narendramodi’s great friend and American President Donald Trump has made claims about how the ceasefire with Pakistan took place. When will the PM speak up? https://t.co/w1zPvReTWR
— Jairam Ramesh (@Jairam_Ramesh) May 31, 2025







