ವಿದೇಶದಲ್ಲಿ ಭಾರತೀಯರ ವರ್ತನೆ ಯಾವಾಗ ಸುಧಾರಿಸಲಿದೆ?; ವೈರಲ್ ವೀಡಿಯೋ ಹಂಚಿಕೊಂಡು ಆಕ್ಷೇಪ ವ್ಯಕ್ತಪಡಿಸಿದ ಉದ್ಯಮಿ ಹರ್ಷ್ ಗೋಯೆಂಕಾ
ವಿಯೆಟ್ನಾಂ ಏರ್ ಪೋರ್ಟ್ ನಲ್ಲಿ ನೆಲದ ಮೇಲೆ ಕುಳಿತು ಊಟ ಮಾಡಿದ ಪ್ರವಾಸಿಗರು

Photo: x.com/hvgoenka
ಹೊಸದಿಲ್ಲಿ: ವಿದೇಶ ಪ್ರವಾಸಕ್ಕೆ ತೆರಳುವ ಭಾರತೀಯರು ಅಲ್ಲಿನ ಸಾರ್ವಜನಿಕ ಸ್ಥಳಗಳಲ್ಲಿ, ತಮ್ಮ ವರ್ತನೆಯಿಂದ ದೇಶದ ಗೌರವಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುವ ಜವಾಬ್ದಾರಿಯಿಲ್ಲವೇ? ಎಂದು, ವಿಯೆಟ್ನಾಂ ಏರ್ ಪೋರ್ಟ್ ನಲ್ಲಿ ನೆಲದ ಮೇಲೆ ಕುಳಿತು ಊಟ ಮಾಡಿದ ಪ್ರವಾಸಿಗರ ಬಗ್ಗೆ ಕೈಗಾರಿಕೋದ್ಯಮಿ ಹರ್ಷ್ ಗೋಯೆಂಕಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ವಿಯೆಟ್ನಾಂ ನ ವಿಮಾನ ನಿಲ್ದಾಣವೊಂದರಲ್ಲಿ ಭಾರತೀಯ ಪ್ರವಾಸಿಗರ ಗುಂಪು ನೆಲದ ಮೇಲೆ ಕುಳಿತು ಊಟ ಮಾಡುತ್ತಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ದೃಶ್ಯ ಸಾರ್ವಜನಿಕ ಸ್ವಚ್ಛತೆ, ನಾಗರಿಕ ಪ್ರಜ್ಞೆ ಮತ್ತು ಶಿಷ್ಟಾಚಾರದ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ವಿಮಾನ ನಿಲ್ದಾಣದ ನೆಲವು ಪ್ರಯಾಣಿಕರು ನಡೆದಾಡಲು ಮತ್ತು ವಿಮಾನಕ್ಕಾಗಿ ಕಾಯಲು ಇರುವ ಸಾರ್ವಜನಿಕ ಸ್ಥಳ. ಆದರೆ, ಪ್ರವಾಸಿಗರ ಗುಂಪೊಂದು ಅದನ್ನೇ ಊಟದ ಸ್ಥಳವನ್ನಾಗಿ ಮಾಡಿಕೊಂಡಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ವೀಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಹರ್ಷ್ ಗೋಯೆಂಕಾ, ವಿಯೆಟ್ನಾಂ ಭಾರತೀಯ ಪ್ರವಾಸಿಗರಲ್ಲಿ ಜನಪ್ರಿಯ ಪ್ರವಾಸಿ ತಾಣವಾಗಿ ಬೆಳೆಯುತ್ತಿದೆ. ಇಂತಹ ಘಟನೆಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಪ್ರವಾಸಿಗರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡಿಸಬಹುದು ಎಂಬ ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.
ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಪಿಕ್ನಿಕ್ ತಾಣದಂತೆ ಬಳಸುತ್ತಿರುವ ಪ್ರವಾಸಿಗರ ವರ್ತನೆಯನ್ನು ಅವರು ಪ್ರಶ್ನಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಆಹಾರವನ್ನು ಹರಡಿಕೊಂಡು ಊಟ ಮಾಡುವುದು ಮತ್ತು ಸ್ವಚ್ಛತೆಯನ್ನು ಕಡೆಗಣಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದ್ದಾರೆ. ವಿದೇಶಗಳಿಗೆ ಪ್ರಯಾಣಿಸುವಾಗ ಭಾರತೀಯರು ಜವಾಬ್ದಾರಿಯುತವಾಗಿ ವರ್ತಿಸುವುದನ್ನು ಯಾವಾಗ ಕಲಿಯುತ್ತಾರೆ ಎಂಬ ಪ್ರಶ್ನೆಯನ್ನೂ ಎತ್ತಿದ್ದಾರೆ.
ಪಾಸ್ಪೋರ್ಟ್ ರದ್ದುಪಡಿಸಲು ಸಲಹೆ!
ಗೋಯೆಂಕಾ ಅವರ ಪೋಸ್ಟ್ ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸಾರ್ವಜನಿಕ ಸ್ಥಳಗಳನ್ನು ಗೌರವಿಸದೆ, ಸ್ವಚ್ಛತೆಯ ಮೂಲಭೂತ ನಿಯಮಗಳನ್ನು ಪಾಲಿಸದ ಪ್ರವಾಸಿಗರನ್ನು ಹಲವರು ಟೀಕಿಸಿದ್ದಾರೆ.
ಒಬ್ಬ ಬಳಕೆದಾರರು ಇಂತಹ ಪ್ರವಾಸಿಗರನ್ನು ಗುರುತಿಸಿ ಅವರ ಪಾಸ್ಪೋರ್ಟ್ಗಳನ್ನು ರದ್ದುಪಡಿಸಬೇಕು ಎಂದು ಸಲಹೆ ನೀಡಿದ್ದಾರೆ. ಇಂತಹ ವರ್ತನೆಗೆ ಕಡಿವಾಣ ಹಾಕಲು ಸಾರ್ವಜನಿಕ ಜಾಗೃತಿಯ ಜತೆಗೆ ಕಠಿಣ ಕ್ರಮಗಳೂ ಅಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.
ಸಾರ್ವಜನಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ದೇಶಗಳ ಉದಾಹರಣೆಯನ್ನೂ ಕೆಲವರು ನೀಡಿದ್ದಾರೆ. ಸಿಂಗಪುರದಲ್ಲಿ ಕಸ ಎಸೆಯುವುದು ಸೇರಿದಂತೆ ಸಾರ್ವಜನಿಕ ನಿಯಮಗಳನ್ನು ಉಲ್ಲಂಘಿಸಿದರೆ ಭಾರಿ ದಂಡ ವಿಧಿಸಲಾಗುತ್ತದೆ. ಹೀಗಾಗಿ, ಅಲ್ಲಿ ಭಾರತೀಯರು ಇಂತಹ ವರ್ತನೆ ತೋರುವ ಮೊದಲು ಎರಡು ಬಾರಿ ಯೋಚಿಸುತ್ತಾರೆ ಎಂದು ಬಳಕೆದಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಪ್ರವಾಸದ ಜತೆಗೆ ನಾಗರಿಕ ಜವಾಬ್ದಾರಿಯೂ ಮುಖ್ಯ
ವಿದೇಶ ಪ್ರವಾಸವೆಂದರೆ ಹೊಸ ಸ್ಥಳಗಳನ್ನು ನೋಡುವುದು, ವಿಭಿನ್ನ ಸಂಸ್ಕೃತಿಗಳನ್ನು ಪರಿಚಯಿಸಿಕೊಳ್ಳುವುದು ಮಾತ್ರವಲ್ಲ. ಅಲ್ಲಿನ ಸಾರ್ವಜನಿಕ ಸ್ಥಳಗಳನ್ನು ಗೌರವಿಸುವುದು, ಸ್ವಚ್ಛತೆ ಕಾಪಾಡುವುದು ಮತ್ತು ಸ್ಥಳೀಯ ನಿಯಮಗಳನ್ನು ಪಾಲಿಸುವುದೂ ಅಷ್ಟೇ ಮುಖ್ಯ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.






