‘ಯಾವ ದೇಶದ್ರೋಹಿಯನ್ನು ಬ್ಲ್ಯಾಕ್ಮೇಲ್ ಮಾಡಲಾಗುತ್ತಿದೆ?’: ಎಪ್ಸ್ಟೀನ್–ಪುರಿ ಫೋಟೊ ಪ್ರಸ್ತಾಪಿಸಿ BJP, RSSಗೆ ರಾಹುಲ್ ಗಾಂಧಿ ಪ್ರಶ್ನೆ

ರಾಹುಲ್ ಗಾಂಧಿ | Photo: PTI
ಹೊಸದಿಲ್ಲಿ: ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಅವರ ಮುಂಬೈ ಭೇಟಿ ಮತ್ತು ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಜತೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಇರುವ ಫೊಟೋ ಬಿಡುಗಡೆಯನ್ನು ಮುಂದಿಟ್ಟುಕೊಂಡು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಕಾರ್ಯಕರ್ತರಿಗೆ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
‘ರೂಬಿಯೊ ಮುಂಬೈಗೆ ಹೋಗುತ್ತಾರೆ. ಅಮೆರಿಕದ ನ್ಯಾಯ ಇಲಾಖೆ (ಯುಎಸ್ ಡಿಒಜೆ) ಎಪ್ಸ್ಟೀನ್ ಮತ್ತು ಪುರಿ ಅವರ ಚಿತ್ರವನ್ನು ಬಿಡುಗಡೆ ಮಾಡುತ್ತದೆ. ಪ್ರಿಯ ಬಿಜೆಪಿ ಮತ್ತು RSS ಕಾರ್ಯಕರ್ತರೇ, ಯಾವ ದೇಶವಿರೋಧಿ ದೇಶದ್ರೋಹಿಯನ್ನು ಬ್ಲ್ಯಾಕ್ಮೇಲ್ ಮಾಡಲಾಗುತ್ತಿದೆ ಎಂದು ನೀವು ಭಾವಿಸುತ್ತೀರಿ?’ ಎಂದು ರಾಹುಲ್ ಗಾಂಧಿ ಬುಧವಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ರೂಬಿಯೊ ಅವರ ಮುಂಬೈ ಭೇಟಿ ಮತ್ತು ಎಪ್ಸ್ಟೀನ್–ಪುರಿ ಫೊಟೋ ಬಿಡುಗಡೆಯನ್ನು ಪರಸ್ಪರ ಸಂಬಂಧ ಕಲ್ಪಿಸಿರುವ ರಾಹುಲ್ ಗಾಂಧಿ, ಈ ಮೂಲಕ ಆಡಳಿತಾರೂಢ ಬಿಜೆಪಿ ಮತ್ತು ಅದರ ಸೈದ್ಧಾಂತಿಕ ಪೋಷಕ ಸಂಘಟನೆಯಾದ RSS ಅನ್ನು ಗುರಿಯಾಗಿಸಿಕೊಂಡಿದ್ದಾರೆ. ಅವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ರಾಜಕೀಯ ಒತ್ತಡ ಮತ್ತು ಬ್ಲ್ಯಾಕ್ಮೇಲ್ ಕುರಿತು ಗಂಭೀರ ಪ್ರಶ್ನೆ ಎತ್ತಿರುವ ರಾಹುಲ್ ಗಾಂಧಿ, ಯಾರನ್ನು ಬ್ಲ್ಯಾಕ್ಮೇಲ್ ಮಾಡಲಾಗುತ್ತಿದೆ ಎಂಬುದಕ್ಕೆ ಯಾವುದೇ ಪುರಾವೆಗಳನ್ನು ಒದಗಿಸಿಲ್ಲ.
ಅಮೆರಿಕದ ಹಣಕಾಸು ಉದ್ಯಮಿ ಹಾಗೂ ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್, ಅಪ್ರಾಪ್ತ ವಯಸ್ಸಿನ ಬಾಲಕಿಯರ ಲೈಂಗಿಕ ಶೋಷಣೆ ಮತ್ತು ಕಳ್ಳಸಾಗಣೆ ಆರೋಪಗಳನ್ನು ಎದುರಿಸಿದ್ದನು. ಫೆಡರಲ್ ಲೈಂಗಿಕ ಕಳ್ಳಸಾಗಣೆ ಪ್ರಕರಣದ ವಿಚಾರಣೆಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ 2019ರ ಆಗಸ್ಟ್ ನಲ್ಲಿ ನ್ಯೂಯಾರ್ಕ್ನ ಜೈಲಿನಲ್ಲಿ ಮೃತಪಟ್ಟಿದ್ದನು. ಹಲವು ದೇಶಗಳ ಪ್ರಮುಖ ರಾಜಕೀಯ ನಾಯಕರು, ಉದ್ಯಮಿಗಳು ಮತ್ತು ಸಾರ್ವಜನಿಕ ವ್ಯಕ್ತಿಗಳೊಂದಿಗಿನ ಆತನ ಸಂಪರ್ಕಗಳು ಬಳಿಕ ಪರಿಶೀಲನೆಗೆ ಒಳಗಾಗಿವೆ.
ಬಿಜೆಪಿಯ ಹಿರಿಯ ನಾಯಕ ಹಾಗೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಈ ಹಿಂದೆ ಎಪ್ಸ್ಟೀನ್ ಜತೆಗಿನ ತಮ್ಮ ಸಂಪರ್ಕದ ಕುರಿತು ಪ್ರತಿಕ್ರಿಯಿಸಿದ್ದರು. ಆತನೊಂದಿಗಿನ ಸಂವಹನ ಸೀಮಿತವಾಗಿತ್ತು ಮತ್ತು ವೃತ್ತಿಪರ ತೊಡಗಿಸಿಕೊಳ್ಳುವಿಕೆಗೆ ಸಂಬಂಧಿಸಿತ್ತು ಎಂದು ಅವರು ಹೇಳಿದ್ದರು.






