ಬಿಜೆಪಿ, ಟಿಎಂಸಿ ಪರವಾಗಿರುವ ನ್ಯಾಯಾಧೀಶರ ಪಟ್ಟಿ ಕೊಡಿ: ಅಭಿಷೇಕ್ ಬ್ಯಾನರ್ಜಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ

Photo: TOI
ಕೋಲ್ಕತ್ತಾ: ಬಿಜೆಪಿ ಪರವಾಗಿರುವ ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪರವಾಗಿರುವ ನ್ಯಾಯಾಧೀಶರು ಯಾರು ಎಂಬ ಪಟ್ಟಿಯನ್ನು ಸಲ್ಲಿಸುವಂತೆ ಟಿಎಂಸಿ ಸಂಸದ ಅಭಿಷೇಕ್ ಬ್ಯಾನರ್ಜಿ ಅವರಿಗೆ ಕಲ್ಕತ್ತಾ ಹೈಕೋರ್ಟ್ ಗುರುವಾರ ತೀಕ್ಷ್ಣವಾಗಿ ಪ್ರಶ್ನಿಸಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ತಮ್ಮ ಭದ್ರತೆಯನ್ನು Z+ ಶ್ರೇಣಿಯಿಂದ X ಶ್ರೇಣಿಗೆ ಇಳಿಸಿರುವುದನ್ನು ಪ್ರಶ್ನಿಸಿ ಅಭಿಷೇಕ್ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿ ಕೃಷ್ಣ ರಾವ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಇದಕ್ಕೂ ಮುನ್ನ, ತಮ್ಮ ಭದ್ರತೆ ಕಡಿತದ ವಿರುದ್ಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ವಿಳಂಬ ಮಾಡಲಾಗುತ್ತಿದೆ. ಇದರ ಹಿಂದೆ ಬಿಜೆಪಿ ಒತ್ತಡವಿದೆ ಎಂದು ಆರೋಪಿಸಿ ಅಭಿಷೇಕ್ ಬ್ಯಾನರ್ಜಿ ನ್ಯಾಯಾಂಗದ ವಿರುದ್ಧ ಹೇಳಿಕೆ ನೀಡಿದ್ದರು.
ಅಭಿಷೇಕ್ ಬ್ಯಾನರ್ಜಿ ಪರ ವಕೀಲರನ್ನು ಉದ್ದೇಶಿಸಿ ಮಾತನಾಡಿದ ನ್ಯಾಯಮೂರ್ತಿ ಕೃಷ್ಣ ರಾವ್, “ನಿಮ್ಮ ಕಕ್ಷಿದಾರರನ್ನು ಕೇಳಿ. ಬಿಜೆಪಿಯ ಪರವಾಗಿರುವ ನ್ಯಾಯಾಧೀಶರು ಯಾರು? ಅವರ ಪಟ್ಟಿ ನೀಡಿ. ನಿಮ್ಮ ಕಕ್ಷಿದಾರರ ಹೇಳಿಕೆಯ ಪ್ರಕಾರ ಅವರು ಬಹಳ ಬುದ್ಧಿವಂತರಾಗಿದ್ದಾರೆ. ಬಿಜೆಪಿಗೆ ಸೇರಿದವರು ಯಾರು? ಟಿಎಂಸಿಗೆ ಸೇರಿದವರು ಯಾರು ಎಂಬ ನ್ಯಾಯಾಧೀಶರ ಪಟ್ಟಿಯನ್ನು ಅವರೇ ನೀಡಲಿ” ಎಂದು ಹೇಳಿದರು.
ಅಭಿಷೇಕ್ ಬ್ಯಾನರ್ಜಿ ಹೇಳಿದ್ದೇನು?
ನವೆಂಬರ್ 7ರಂದು ತಮ್ಮ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಭಿಷೇಕ್ ಬ್ಯಾನರ್ಜಿ, ತಮ್ಮ ಭದ್ರತೆ ಕಡಿತದ ವಿರುದ್ಧ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಭಾಗಶಃ ಮಾತ್ರ ನಡೆದಿದ್ದು, ಬಿಜೆಪಿ ಒತ್ತಡ ಹೇರಿರಬಹುದು ಎಂದು ಆರೋಪಿಸಿದ್ದರು.
“ನಾನು ಕಲ್ಕತ್ತಾ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದೆ. ಅದರ ವಿಚಾರಣೆ ಭಾಗಶಃ ನಡೆದಿತ್ತು. ಅಕ್ಟೋಬರ್ 13ರಂದು ಮತ್ತೆ ವಿಚಾರಣೆ ನಡೆಯಬೇಕಿತ್ತು. ಬಹುಶಃ ಬಿಜೆಪಿ ಒತ್ತಡ ಸೃಷ್ಟಿಸಿರಬಹುದು. ನ್ಯಾಯಮೂರ್ತಿ ಕೃಷ್ಣ ರಾವ್ ಅವರು ಅರ್ಜಿಯ ಒಂದು ಭಾಗದ ವಿಚಾರಣೆ ನಡೆಸಿದ್ದರು. ಬಳಿಕ ಪ್ರಕರಣವನ್ನು ರಜಾಕಾಲದ ಪೀಠದ ಮುಂದೆ 16ನೇ ಅರ್ಜಿಯಾಗಿ ಪಟ್ಟಿ ಮಾಡಲಾಗಿತ್ತು. ಅವರು 15ನೇ ಅರ್ಜಿಯವರೆಗೆ ವಿಚಾರಣೆ ನಡೆಸಿ, ನಂತರ ವಿರಾಮಕ್ಕೆ ತೆರಳಿದರು” ಎಂದು ಹೇಳಿದ್ದರು.
ಗುರುವಾರ ರಾಜ್ಯ ಸರಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಬಿಲ್ವದಲ್ ಭಟ್ಟಾಚಾರ್ಯ ಅವರು ಅಭಿಷೇಕ್ ಬ್ಯಾನರ್ಜಿ ಅವರ ಹೇಳಿಕೆಯ ವಿಡಿಯೊ ಮತ್ತು ಲಿಖಿತ ಪ್ರತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅದರ ಕೆಲವು ಭಾಗಗಳನ್ನು ನ್ಯಾಯಾಲಯದಲ್ಲಿ ಓದಿ ಹೇಳಿದರು.
“ನ್ಯಾಯಾಂಗದ ಒಂದು ವರ್ಗ ಮೂಕಪ್ರೇಕ್ಷಕರ ಪಾತ್ರ ವಹಿಸುತ್ತಿದೆ. ನಮಗೆ ಹೋಗಲು ಬೇರೆ ದಾರಿಯೇ ಇಲ್ಲ. ಇಂದು ಬಂಗಾಳದಾದ್ಯಂತ ನಡೆಯುತ್ತಿರುವ ದಾಂಧಲೆಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಕಾರಣ. ನ್ಯಾಯಾಂಗ ಪ್ರಕರಣಗಳನ್ನು ಬಾಕಿ ಉಳಿಸಿಕೊಳ್ಳುತ್ತಿರುವುದರಿಂದಲೇ ಈ ಗೂಂಡಾಗಳಿಗೆ ಧೈರ್ಯ ಬಂದಿದೆ. ಸತ್ಯ ಮಾತನಾಡಿದ್ದಕ್ಕಾಗಿ ನಾನು ಜೈಲಿಗೆ ಹೋಗಬೇಕಾದರೂ ಸಿದ್ಧನಿದ್ದೇನೆ” ಎಂದು ಅಭಿಷೇಕ್ ಹೇಳಿರುವುದಾಗಿ ಲಿಖಿತ ಪ್ರತಿಯಲ್ಲಿ ಉಲ್ಲೇಖಿಸಲಾಗಿದೆ.
ಅಭಿಷೇಕ್ ಬ್ಯಾನರ್ಜಿ ಅವರ ಹೇಳಿಕೆಗಳು ಕ್ರಿಮಿನಲ್ ನ್ಯಾಯಾಂಗ ನಿಂದನೆಗೆ ಒಳಪಡುತ್ತವೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಭಟ್ಟಾಚಾರ್ಯ ನ್ಯಾಯಾಲಯದಲ್ಲಿ ವಾದಿಸಿದರು.
“ನನ್ನ ಅಭಿಪ್ರಾಯದಲ್ಲಿ, ಈ ಹೇಳಿಕೆಗಳು ಕ್ರಿಮಿನಲ್ ನ್ಯಾಯಾಂಗ ನಿಂದನೆಯಾಗುತ್ತವೆ. ಅವರು ನ್ಯಾಯಮೂರ್ತಿಯ ವಿರುದ್ಧ ಆಕ್ಷೇಪಾರ್ಹ ಆರೋಪ ಮಾಡಿದ್ದಾರೆ. ನ್ಯಾಯಾಲಯವನ್ನು ಯಾರೂ ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ. ರಾಜಕೀಯ ಪೈಪೋಟಿ ಇರಬಹುದು. ಆದರೆ ನ್ಯಾಯಾಲಯ ಅದಕ್ಕಿಂತ ಮೇಲಿರುವ ಸಂಸ್ಥೆ” ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್ ಬ್ಯಾನರ್ಜಿ ಪರ ಹಿರಿಯ ವಕೀಲ ಶೋಯೆಬ್ ಆಲಂ, “ಈ ಹೇಳಿಕೆಗೂ ಭದ್ರತೆ ಕಡಿತದ ವಿರುದ್ಧ ಸಲ್ಲಿಸಿರುವ ಅರ್ಜಿಗೂ ಯಾವುದೇ ಸಂಬಂಧವಿಲ್ಲ” ಎಂದು ವಾದಿಸಿದರು.






