18 ವರ್ಷಗಳ ಹಿಂದಿನ ಭ್ರಷ್ಟಾಚಾರ ಪ್ರಕರಣದಲ್ಲಿ IAS ಅಧಿಕಾರಿ ಪದ್ಮಾ ಜೈಸ್ವಾಲ್ ಸೇವೆಯಿಂದ ವಜಾ!

IAS ಅಧಿಕಾರಿ ಪದ್ಮಾ ಜೈಸ್ವಾಲ್ |Photo Credit : livemint.com
ಹೊಸದಿಲ್ಲಿ: ಅರುಣಾಚಲ ಪ್ರದೇಶದಲ್ಲಿ ನಡೆದಿದ್ದೆಂದು ಆರೋಪಿಸಲಾದ ಭ್ರಷ್ಟಾಚಾರ ಪ್ರಕರಣದ ಸಂಬಂಧ AGMUT (ಅರುಣಾಚಲ ಪ್ರದೇಶ–ಗೋವಾ–ಮಿಜೋರಾಂ–ಕೇಂದ್ರಾಡಳಿತ ಪ್ರದೇಶಗಳು) ಕೇಡರ್ ನ 2003ರ ಬ್ಯಾಚ್ ನ ಐಎಎಸ್ ಅಧಿಕಾರಿ ಪದ್ಮಾ ಜೈಸ್ವಾಲ್ ವಿರುದ್ಧ ಕೇಂದ್ರ ಸರ್ಕಾರ ಅಪರೂಪದ ಶಿಸ್ತು ಕ್ರಮ ಕೈಗೊಂಡಿದೆ ಎಂಬ ವರದಿಗಳು ಆಡಳಿತ ವಲಯದಲ್ಲಿ ಚರ್ಚೆಗೆ ಕಾರಣವಾಗಿವೆ. ಸೇವೆಯಲ್ಲಿರುವ ಐಎಎಸ್ ಅಧಿಕಾರಿಯನ್ನು ವಜಾಗೊಳಿಸುವುದು ಅಪರೂಪದ ಕ್ರಮವೆಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಯಾವುದೇ ಅಧಿಕೃತ ಆದೇಶದ ಮಾಹಿತಿ ನನಗೆ ಇಲ್ಲ ಎಂದು ಪದ್ಮಾ ಜೈಸ್ವಾಲ್ ತಿಳಿಸಿದ್ದಾರೆ.
ಪ್ರಸ್ತುತ ದಿಲ್ಲಿ ಸರ್ಕಾರದ ಆಡಳಿತ ಸುಧಾರಣಾ ಇಲಾಖೆಯಲ್ಲಿ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಪದ್ಮಾ ಜೈಸ್ವಾಲ್ ವಿರುದ್ಧದ ಆರೋಪಗಳು 2007–08ರ ಅವಧಿಗೆ ಸೇರಿವೆ. ಆ ಸಂದರ್ಭದಲ್ಲಿ ಅವರು ಅರುಣಾಚಲ ಪ್ರದೇಶದ ಪಶ್ಚಿಮ ಕಾಮೆಂಗ್ ಜಿಲ್ಲೆಯ ಉಪ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದರು.
2008ರ ಫೆಬ್ರವರಿಯಲ್ಲಿ ಸ್ಥಳೀಯ ನಿವಾಸಿಗಳು ಸರ್ಕಾರಿ ಆದಾಯದ ದುರುಪಯೋಗ ಮತ್ತು ಅಧಿಕಾರದ ದುರುಪಯೋಗ ನಡೆದಿದೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಅದೇ ವರ್ಷದ ಎಪ್ರಿಲ್ ನಲ್ಲಿ ಅವರನ್ನು ಅಮಾನತುಗೊಳಿಸಲಾಗಿತ್ತು. ನಂತರ 2010ರ ಅಕ್ಟೋಬರ್ ನಲ್ಲಿ ಅಮಾನತು ರದ್ದುಪಡಿಸಿ ಮರುನೇಮಕ ಮಾಡಲಾಗಿತ್ತು.
ಇಂಡಿಯನ್ ಎಕ್ಸ್ಪ್ರೆಸ್ ವರದಿ ಪ್ರಕಾರ, ಪ್ರಧಾನಿ ನೇತೃತ್ವದ ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಪಿಟಿ) ಶಿಫಾರಸಿನ ಮೇರೆಗೆ ರಾಷ್ಟ್ರಪತಿಯ ಅಂತಿಮ ಅನುಮೋದನೆಯೊಂದಿಗೆ ಈ ವಾರದ ಆರಂಭದಲ್ಲಿ ವಜಾ ಆದೇಶ ಹೊರಡಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಎಜಿಎಂಯುಟಿ ಕೇಡರ್ ಅಧಿಕಾರಿಗಳ ವಿರುದ್ಧದ ಇಂತಹ ಕ್ರಮಗಳು ಡಿಒಪಿಟಿ ವ್ಯಾಪ್ತಿಗೆ ಬರುತ್ತವೆ. ಗೃಹ ಸಚಿವಾಲಯವು ಅಖಿಲ ಭಾರತ ಸೇವೆಗಳ (ಶಿಸ್ತು ಮತ್ತು ಮೇಲ್ಮನವಿ) ನಿಯಮಗಳ ನಿಯಮ 8ರ ಅಡಿಯಲ್ಲಿ ಶಿಸ್ತು ಕ್ರಮ ಆರಂಭಿಸಿತ್ತು. 2009 ಮತ್ತು 2010ರಲ್ಲಿ ಜೈಸ್ವಾಲ್ ಅವರಿಗೆ ಚಾರ್ಜ್ ಮೆಮೊರಾಂಡಂ ನೀಡಲಾಗಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೇಂದ್ರ ವಿಜಿಲೆನ್ಸ್ ಆಯೋಗ ಮತ್ತು ಕೇಂದ್ರ ಲೋಕಸೇವಾ ಸೇವಾ ಆಯೋಗದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, ಪದ್ಮಾ ಜೈಸ್ವಾಲ್ ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ.
ಆದರೆ, ಎಜಿಎಂಯುಟಿ ಕೇಡರ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಗೃಹ ಸಚಿವಾಲಯಕ್ಕೆ ಇಲ್ಲ ಎಂದು ಹೇಳಿ ಕೇಂದ್ರ ಆಡಳಿತ ನ್ಯಾಯಮಂಡಳಿ (ಸಿಎಟಿ) ಹಿಂದೆ ವಿಚಾರಣೆಯನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್ ಮೊರೆ ಹೋಗಿತ್ತು. ಈ ವರ್ಷದ ಎಪ್ರಿಲ್ 1ರಂದು ಹೈಕೋರ್ಟ್ ಕೇಂದ್ರ ಸರ್ಕಾರದ ಪರವಾಗಿ ತೀರ್ಪು ನೀಡಿದ ಬಳಿಕ ಪ್ರಕರಣದ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ವರದಿಗಳು ಹೇಳಿವೆ.
ಈ ನಡುವೆ, “ಅಂತಹ ಯಾವುದೇ ಬೆಳವಣಿಗೆ ಅಥವಾ ವಜಾ ಆದೇಶ ಹೊರಡಿಸಿರುವ ಬಗ್ಗೆ ನನಗೆ ತಿಳಿದಿಲ್ಲ” ಎಂದು ಪದ್ಮಾ ಜೈಸ್ವಾಲ್ ಪ್ರತಿಕ್ರಿಯಿಸಿರುವುದಾಗಿ ವರದಿಯಾಗಿದೆ.
ಯಾರು ಪದ್ಮಾ ಜೈಸ್ವಾಲ್?
ಅಕ್ಟೋಬರ್ 6, 1975ರಂದು ಜನಿಸಿದ ಪದ್ಮಾ ಜೈಸ್ವಾಲ್ ಅವರು ಅಕೌಂಟೆನ್ಸಿಯಲ್ಲಿ ಬಿಕಾಂ, ಮ್ಯಾನೇಜ್ಮೆಂಟ್ನಲ್ಲಿ ಎಂಕಾಂ ಹಾಗೂ ಕಂಪನಿ ಮ್ಯಾನೇಜ್ಮೆಂಟ್ನಲ್ಲಿ ಸಿಎಸ್ ಪದವಿ ಪಡೆದಿದ್ದಾರೆ. ಎಜಿಎಂಯುಟಿ ಕೇಡರ್ನ 2003ರ ಬ್ಯಾಚ್ನ ಐಎಎಸ್ ಅಧಿಕಾರಿಯಾಗಿರುವ ಅವರು ಎರಡು ದಶಕಗಳ ಸೇವಾ ಅವಧಿಯಲ್ಲಿ ಉಪ ಆಯುಕ್ತೆ, ಜಂಟಿ ಕಾರ್ಯದರ್ಶಿ, ನಿರ್ದೇಶಕಿ, ಕಾರ್ಯದರ್ಶಿ ಮತ್ತು ರಿಜಿಸ್ಟ್ರಾರ್ ಸೇರಿದಂತೆ ಹಲವು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಈ ವರ್ಷದ ಫೆಬ್ರವರಿಯಲ್ಲಿ ದಿಲ್ಲಿ ಸರ್ಕಾರವು 72 ಹಿರಿಯ ಅಧಿಕಾರಿಗಳಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ಹಂಚಿದ್ದಾಗ, ಹುದ್ದೆಯ ನಿರೀಕ್ಷೆಯಲ್ಲಿದ್ದ ಜೈಸ್ವಾಲ್ ಅವರಿಗೆ ಆಡಳಿತ ಸುಧಾರಣಾ ಇಲಾಖೆಯ ವಿಶೇಷ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿತ್ತು.
ಸೇವೆಯಿಂದ ವಜಾಗೊಳಿಸುವ ಕ್ರಮವು ಅವರ ಪ್ರಸ್ತುತ ಐಎಎಸ್ ಸೇವಾ ಅವಧಿಗೆ ಅಂತ್ಯ ತರಬಹುದಾದರೂ, ಭವಿಷ್ಯದ ಸರ್ಕಾರಿ ಉದ್ಯೋಗಕ್ಕೆ ಅದು ಸ್ವಯಂಚಾಲಿತ ನಿರ್ಬಂಧವಾಗುವುದಿಲ್ಲ ಎಂದು ವರದಿಗಳು ಸೂಚಿಸಿವೆ.






