ವಿದೇಶಕ್ಕೆ ಪ್ರಯಾಣಿಸಲು ಯಾರಿಗೆಲ್ಲ ತೆರಿಗೆ ಪಾವತಿ ಪ್ರಮಾಣಪತ್ರ ಅಗತ್ಯ?: ಇಲ್ಲಿದೆ ಸರಕಾರದ ಇತ್ತೀಚಿನ ಸ್ಪಷ್ಟೀಕರಣ

ಹೊಸದಿಲ್ಲಿ: ಆದಾಯ ತೆರಿಗೆ ಪ್ರಮಾಣಪತ್ರ ಕುರಿತು ಸುಳ್ಳು ಮಾಹಿತಿಗಳಿಗೆ ಪ್ರತಿಕ್ರಿಯಿಸಿರುವ ಕೇಂದ್ರ ವಿತ್ತ ಸಚಿವಾಲಯವು ವಿದೇಶಕ್ಕೆ ಪ್ರಯಾಣಿಸುವ ಎಲ್ಲ ಭಾರತೀಯರೂ ಆದಾಯ ತೆರಿಗೆ ಪಾವತಿ ಪ್ರಮಾಣಪತ್ರ(ಐಟಿಸಿಸಿ)ವನ್ನು ಪಡೆದುಕೊಳ್ಳುವ ಅಗತ್ಯವಿಲ್ಲ ಮತ್ತು ಗಂಭೀರ ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿರುವವರು ಹಾಗೂ 10 ಲಕ್ಷ ರೂ.ಗೂ ಹೆಚ್ಚು ನೇರ ತೆರಿಗೆ ಬಾಕಿಯನ್ನು ಉಳಿಸಿಕೊಂಡಿರುವವರು ಈ ಪ್ರಮಾಣಪತ್ರವನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕಾಗುತ್ತದೆ ಎನ್ನುವುದನ್ನು ಸ್ಪಷ್ಟಪಡಿಸಿದೆ.
ಇತ್ತೀಚಿನ ಕೆಲವು ವರದಿಗಳು ಐಟಿಸಿಸಿ ಕಡ್ಡಾಯ ಎಂದು ಹೇಳಿದ್ದರೂ, ಎಲ್ಲ ಭಾರತೀಯ ಪ್ರಜೆಗಳು ವಿದೇಶಗಳಿಗೆ ಪ್ರಯಾಣಿಸುವ ಮುನ್ನ ಇಂತಹ ಪ್ರಮಾಣಪತ್ರವನ್ನು ಪಡೆಯಬೇಕಾದ ಅಗತ್ಯವಿಲ್ಲ ಎಂದು ಪ್ರೆಸ್ ಇನ್ಫಾರ್ಮೇಷನ್ ಬ್ಯೂರೋ (ಪಿಐಬಿ)ತನ್ನ ಇತ್ತೀಚಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾರತದಿಂದ ವಲಸೆ ಹೋಗಲು ಬಯಸುವವರಿಗಾಗಿ 2024ನೇ ಸಾಲಿನ ಮುಂಗಡಪತ್ರದಲ್ಲಿ ಮಹತ್ವದ ತಿದ್ದುಪಡಿಯೊಂದನ್ನು ಪರಿಚಯಿಸಿದ್ದರು. ಅದರಂತೆ ಭಾರತದಲ್ಲಿ ವಾಸವಾಗಿರುವ ವ್ಯಕ್ತಿಗಳು ದೇಶದಿಂದ ನಿರ್ಗಮಿಸುವ ಮುನ್ನ ಎಲ್ಲ ತೆರಿಗೆ ಬಾಕಿಗಳನ್ನು ಪಾವತಿಸಬೇಕು ಮತ್ತು ಐಟಿಸಿಸಿಯನ್ನು ಪಡೆದುಕೊಳ್ಳಬೇಕು.
ಆದರೆ ಈ ಪರಿಷ್ಕರಣೆಯು ಎಲ್ಲ ವ್ಯಕ್ತಿಗಳು ಐಟಿಸಿಸಿಯನ್ನು ಪಡೆದುಕೊಳ್ಳುವುದನ್ನು ಅಗತ್ಯವಾಗಿಸುವುದಿಲ್ಲ ಎಂದು ವಿತ್ತ ಸಚಿವಾಲಯವು ಸ್ಪಷ್ಟಪಡಿಸಿದೆ.
ಆದಾಯ ತೆರಿಗೆ ಕಾಯ್ದೆಯ ಕಲಂ 230ಕ್ಕೆ ಅನುಗುಣವಾಗಿ ಪ್ರತಿಯೊಬ್ಬ ವ್ಯಕ್ತಿಯೂ ಐಟಿಸಿಸಿಯನ್ನು ಪಡೆಯಬೇಕಿಲ್ಲ. ಇಂತಹ ಪ್ರಮಾಣಪತ್ರವನ್ನು ಪಡೆಯುವ ಅಗತ್ಯವಿರುವ ಸಂದರ್ಭಗಳಿದ್ದರೆ ಮಾತ್ರ ಸಂಬಂಧಿಸಿದ ವ್ಯಕ್ತಿಗಳು ಹಾಗೆ ಮಾಡಬೇಕಾಗುತ್ತದೆ. ಇದು 2003ರಿಂದಲೂ ಕಾಯ್ದೆಯಲ್ಲಿ ಸ್ಪಷ್ಟವಾಗಿದ್ದು ಹಣಕಾಸು ಕಾಯ್ದೆ(ನಂ.2).2024ರಡಿ ತಿದ್ದುಪಡಿಗಳ ಹೊರತಾಗಿಯೂ ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಪಿಐಬಿ ಪ್ರಕಟನೆಯಲ್ಲಿ ತಿಳಿಸಿದೆ.
ಯಾವುದೇ ವ್ಯಕ್ತಿ ಗಂಭೀರ ಆರ್ಥಿಕ ಅಪರಾಧಗಳಲ್ಲಿ ಭಾಗಿಯಾಗಿದ್ದರೆ ಮತ್ತು ಆದಾಯ ತೆರಿಗೆ ಕಾಯ್ದೆ ಅಥವಾ ಸಂಪತ್ತು ತೆರಿಗೆ ಕಾಯ್ದೆಯಡಿ ಪ್ರಕರಣದ ತನಿಖೆಯಲ್ಲಿ ಆತನ/ಆಕೆಯ ಉಪಸ್ಥಿತಿ ಅಗತ್ಯವಾಗಿದ್ದರೆ ಮತ್ತು ತೆರಿಗೆ ಬೇಡಿಕೆಯನ್ನು ಎತ್ತುವ ಸಾಧ್ಯತೆಯಿದ್ದರೆ ಅಂತಹ ವ್ಯಕ್ತಿ ಹಾಗೂ 10 ಲ.ರೂ.ಗಳಿಗೂ ಅಧಿಕ ನೇರ ತೆರಿಗೆ ಬಾಕಿಯಿದ್ದರೆ ಮತ್ತು ಯಾವುದೇ ಪ್ರಾಧಿಕಾರವು ಬಾಕಿ ತೆರಿಗೆ ವಸೂಲಿಗೆ ತಡೆಯಾಜ್ಞೆ ನೀಡಿರದಿದ್ದರೆ ಅಂತಹ ವ್ಯಕ್ತಿ ವಿದೇಶಕ್ಕೆ ತೆರಳುವ ಮುನ್ನ ಐಟಿಸಿಸಿಯನ್ನು ಪಡೆದುಕೊಳ್ಳಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಐಟಿಸಿಸಿ ಅಗತ್ಯಕ್ಕೆ ನಿರ್ದಿಷ್ಟ ಕಾರಣಗಳನ್ನು ದಾಖಲಿಸಿದ ಹಾಗೂ ಆದಾಯ ತೆರಿಗೆ ಪ್ರಧಾನ ಮುಖ್ಯ ಆಯುಕ್ತರು ಅಥವಾ ಆದಾಯ ತೆರಿಗೆ ಮುಖ್ಯ ಆಯುಕ್ತರಿಂದ ಅನುಮೋದನೆಯನ್ನು ಪಡೆದುಕೊಂಡ ಬಳಿಕವೇ ಪ್ರಮಾಣಪತ್ರವನ್ನು ಪಡೆಯಲು ವ್ಯಕ್ತಿಗೆ ಸೂಚಿಸಬಹುದು ಎಂದು ತಿಳಿಸಿರುವ ಪ್ರಕಟನೆಯು,ಭಾರತೀಯ ಪ್ರಜೆಗಳು ಕಾಯ್ದೆಯ ಕಲಂ 230(1ಎ) ಅಡಿ ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಐಟಿಸಿಸಿಯನ್ನು ಬಳಸಬೇಕು ಎಂದು ಒತ್ತಿ ಹೇಳಿದೆ.







