ಯಾರಾಗಲಿದ್ದಾರೆ ರಾಜಸ್ಥಾನದ ಸಿಎಂ?
ರಹಸ್ಯವನ್ನು ಜೀವಂತವಾಗಿರಿಸಿದ ವಸುಂಧರ ರಾಜೆ
![ಯಾರಾಗಲಿದ್ದಾರೆ ರಾಜಸ್ಥಾನದ ಸಿಎಂ? ಯಾರಾಗಲಿದ್ದಾರೆ ರಾಜಸ್ಥಾನದ ಸಿಎಂ?](https://www.varthabharati.in/h-upload/2023/12/03/1219239-fb5.webp)
Photo: NDTV
ಜೈಪುರ: ತಾನು ಮತ್ತೊಮ್ಮೆ ರಾಜಸ್ಥಾನ ಮುಖ್ಯಮಂತ್ರಿ ಹುದ್ದೆ ಪಡೆಯಲಿದ್ದೇನೆಯೆ ಎಂಬ ರಹಸ್ಯವನ್ನು ರಾಜಸ್ಥಾನದ ಏಕೈಕ ರಾಷ್ಟ್ರೀಯ ನಾಯಕಿಯಾದ ವಸುಂಧರ ರಾಜೆ ಜೀವಂತವಾಗಿಟ್ಟಿದ್ದಾರೆ. ಬಿಜೆಪಿ ಪಕ್ಷವು ರಾಜಸ್ಥಾನದಲ್ಲಿ ಭಾರಿ ವಿಜಯದತ್ತ ದಾಪುಗಾಲು ಹಾಕಿದ್ದು, ಬಿಜೆಪಿಯೊಳಗೆ ಮುಖ್ಯಮಂತ್ರಿ ಹುದ್ದೆಗಾಗಿನ ಪೈಪೋಟಿ ಬಿರುಸು ಪಡೆದಿದೆ.
ಸತತ ಐದನೆಯ ಬಾರಿ ತಮ್ಮ ಸ್ವಕ್ಷೇತ್ರವಾದ ಝಲ್ರಾಪತನ್ ನಿಂದ ವಿಜಯಿಯಾಗಿರುವ ವಸುಂಧರಾ ರಾಜೆ, ಬಿಜೆಪಿಯ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಮುಖ್ಯ ಚುನಾವಣಾ ತಂತ್ರಗಾರರಾದ ಅಮಿತ್ ಶಾ ಹಾಗೂ ಜೆ.ಪಿ.ನಡ್ಡಾ ಅವರನ್ನು ಶ್ಲಾಘಿಸಿದ್ದು, ‘ಮತ್ಯಾವ ಪ್ರಶ್ನೆಯನ್ನೂ ಕೇಳಬೇಡಿ’ ಎಂದು ಸುದ್ದಿಗಾರರಿಗೆ ತಾಕೀತು ಮಾಡಿದರು.
ರಾಜಸ್ಥಾನ ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳ ಪಟ್ಟಿ ಉದ್ದವಾಗಿಯೇ ಇದ್ದು, ವಸುಂಧರ ರಾಜೆಯಲ್ಲದೆ, ಕೇಂದ್ರ ಸಚಿವ ಗಜೇಂದ್ರ ಶೆಖಾವತ್, ಸತೀಶ್ ಪೂನಿಯಾ, ರಾಜ್ಯ ಬಿಜೆಪಿ ಮುಖ್ಯಸ್ಥ ಸಿ.ಪಿ.ಜೋಶಿ, ದಿಯಾ ಕುಮಾರಿ ಹಾಗೂ ರಾಜ್ಯದ ಯೋಗಿಯೇ ಆಗಿರುವ ಬಾಬಾ ಬಾಲಕ್ ನಾಥ್ ಹೆಸರುಗಳು ಈ ಪಟ್ಟಿಯಲ್ಲಿವೆ.
ಆದರೆ, ಚುನಾವಣಾ ಫಲಿತಾಂಶವು ಈ ಪಟ್ಟಿಯನ್ನು ಕಿರಿದಾಗಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ಸತೀಶ್ ಪೂನಿಯಾ ಚುನಾವಣೆಯಲ್ಲಿ ಪರಾಭವಗೊಂಡಿದ್ದು, ಕೇಂದ್ರ ನಾಯಕತ್ವದ ಯಾವುದೇ ವಿಶೇಷ ಬೆಂಬಲವಿಲ್ಲದೆ ಇರುವುದಿಂದ ಪಟ್ಟಿಯಿಂದ ಹೊರ ಬಿದ್ದಿದ್ದಾರೆ.
ಬಿಜೆಪಿಯ ಗೆಲುವಿನಿಂದ ಬೀಗುತ್ತಿರುವ ವಸುಂಧರ ರಾಜೆ ಈ ಬಾರಿ ಮುಖ್ಯಮಂತ್ರಿ ಹುದ್ದೆಯ ಸ್ಪರ್ಧೆಯಿಂದ ಹೊರಗುಳಿಯಬೇಕಾಗಬಹುದು ಎಂಬ ಮಾತುಗಳು ರಾಜ್ಯದಲ್ಲಿ ಕೇಳಿ ಬರುತ್ತಿವೆ.
ನವೆಂಬರ್ 25ರಂದು ರಾಜಸ್ಥಾನದಲ್ಲಿ ಚುನಾವಣೆ ಮುಕ್ತಾಯಗೊಂಡಾಗಿನಿಂದ, 70 ವರ್ಷ ವಯಸ್ಸಿನ ವಸುಂಧರ ರಾಜೆ ದೇವಾಲಯಗಳನ್ನು ಸುತ್ತುತ್ತಿದ್ದಾರೆ.
ಈ ನಡುವೆ, ಕೇಂದ್ರ ನಾಯಕತ್ವವು ರಾಜ್ಯ ನಾಯಕತ್ವದ ಕುರಿತು ತೀರ್ಮಾನಿಸಲಿದೆ ಎಂದೇ ರಾಜಸ್ಥಾನದ ಬಿಜೆಪಿ ನಾಯಕರು ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತಿದ್ದಾರೆ.